ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಡೋಣಿ ಬೆಳೆದರೇ, ಓಣಿಯಲ್ಲ ಜೋಳ ಎಂಬ ನಾಣ್ಣುಡಿ ಉತ್ತರ ಕರ್ನಾಟಕದ ಜನಜೀವನದಲ್ಲಿ ಇಂದಿಗೂ ಪ್ರಚಲಿತ. ಆದರೆ, ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆಯ ಕೊರತೆಯಿಂದ ಜೋಳದ ಬಿತ್ತನೆ ಕುಸಿತ ಕಂಡಿದ್ದು, ಮಾರುಕಟ್ಟೆಯಲ್ಲಿ ಬಿಳಿ ಜೋಳಕ್ಕೆ ಬೇಡಿಕೆ ಭಾರೀ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರವಾಗಿರುವ ಜೋಳದ ರೊಟ್ಟಿ, ಮಳೆ ಕೊರತೆಯ ನಡುವೆಯೂ ರೈತರ ಬದುಕಿನ ನಿರೀಕ್ಷೆಯಾಗಿದೆ. ವಿಜಯಪುರ ಜಿಲ್ಲೆಯ ಮಾಲ್ದಂಡಿ ಬಿಳಿ ಜೋಳವು ತನ್ನ ವಿಶಿಷ್ಟ ಗುಣಮಟ್ಟದಿಂದ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದ್ದು, ಈ ಜೋಳವನ್ನು ವಿಜಯಪುರದ ಬಿಳಿ ಮುತ್ತು ಎಂದು ಕರೆದಿರುವುದು ಧಾರಣೆ ಹೆಚ್ಚಳದಿಂದ ಸತ್ಯವಾಗಿದೆ.
ಬರದ ನಡುವೆಯೂ ಬೆಲೆ ಏರಿಕೆಯ ನಿರೀಕ್ಷೆ:ಈ ವರ್ಷ ಮಳೆಯ ಕೊರತೆಯಿಂದ ಜೋಳದ ಬಿತ್ತನೆ ಪ್ರದೇಶ ಕಡಿಮೆಯಾಗಿದ್ದು, ಉತ್ಪಾದನೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಮತ್ತೊಂದೆಡೆ, ಬಿಳಿ ಜೋಳಕ್ಕೆ ಆಹಾರ ಮತ್ತು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ ಬೆಲೆ ಏರಿಕೆಯ ನಿರೀಕ್ಷೆ ರೈತರಲ್ಲಿ ಮೂಡಿದೆ. ಜೋಳದ ಬೆಲೆ ಏರಿಕೆಯಿಂದ ರೈತರಿಗೆ ಸ್ವಲ್ಪ ಮಟ್ಟಿನ ಆರ್ಥಿಕ ನೆರವು ದೊರೆಯುವ ಆಶಾಭಾವನೆ ಮೂಡಿದ್ದರೂ ಬರದ ಕಾರಣ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಬೆಲೆ ಏರಿಕೆಯೊಂದೇ ಸಾಕಾಗುವುದಿಲ್ಲ. ಸರ್ಕಾರ ಬೆಳೆ ನಷ್ಟದ ಪರಿಹಾರ, ಬೆಂಬಲ ಬೆಲೆ ಮತ್ತು ಖರೀದಿ ವ್ಯವಸ್ಥೆ ಕಲ್ಪಿಸಬೇಕೆಂಬುವುದು ರೈತರ ಒತ್ತಾಯ.ಬೆಲೆ ಏರಿಕೆ ರೈತರಿಗೆ ವರದಾನ:
ತಾಲೂಕಿನಲ್ಲಿ ಹಿಂದೆ 10 ಸಾವಿರಾರು ಎಕರೆ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ರೈತರು ವಾಣಿಜ್ಯ ಬೆಳೆಗಳತ್ತ ಹೆಚ್ಚು ಒಲವು ತೋರಿರುವುದರಿಂದ ಜೋಳದ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. 2024ನೇ ಸಾಲಿನಲ್ಲಿ 3,843 ಎಕರೆ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿತ್ತು. 2025ನೇ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾಗಿದ್ದರಿಂದ 6,745 ಎಕರೆ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿತ್ತು. ಪ್ರಸ್ತುತ ವರ್ಷದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ಜೋಳದ ಬಿತ್ತನೆಗೆ ಹಿನ್ನಡೆಯಾಗಿದೆ. ಅಂದಾಜು ಸಾವಿರಾರು ಎಕರೆಗಳಿಗೆ ಮಾತ್ರ ಜೋಳದ ಬೀಜಗಳು ಖರೀದಿಯಾಗಿದೆ.ದೋಣಿ ನದಿ ತೀರದ ಪ್ರದೇಶದಲ್ಲಿ ಆಳವಾದ ಕಪ್ಪು ಮಣ್ಣು ಹೆರಳವಾಗಿದ್ದರಿಂದ ಮಾಲ್ದಂಡಿ ಬಿಳಿ ಜೋಳದ ಬೆಳೆ ಹೆಚ್ಚು ಬೆಳೆಯುತ್ತಾರೆ. ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಜೋಳದ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ನಿರೀಕ್ಷೆಯಂತೆ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಜೋಳದ ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆಯಲ್ಲಿ ವ್ಯತ್ಯಾಸವಾಗುವುದು.