ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದ ತಪಸ್ವಿ ಶಿವಲಿಂಗಜ್ಜಯ್ಯ ಸ್ಥಾಪಿತ ಮಾಡಾಳು ಶ್ರೀ ಮೂಲ ಸ್ವರ್ಣ ಗೌರಿ ಅಮ್ಮನವರ ದರ್ಶನಕ್ಕೆ ಸಾವಿರಾರು ಭಕ್ತಾಧಿಗಳು ಆಗಮಿಸಿ ದರ್ಶನ ಪಡೆಯುವುದರ ಮೂಲಕ ಪುನೀತರಾಗುತ್ತಿದ್ದಾರೆ.ಕೋಡಿಮಠ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಮಾಡಾಳು ಗ್ರಾಮ ಯರೇಹಳ್ಳಿ ರಸ್ತೆ ಶ್ರೀ ಚನ್ನಬಸವೇಶ್ವರ ಚಲನಚಿತ್ರ ಮಂದಿರ ಹತ್ತಿರ ನೂತನವಾಗಿ ನಿರ್ಮಾಣಗೊಂಡಿರುವ ದೇವಾಲಯದಲ್ಲಿ ನಿರ್ಮಿಸಲಾಗಿರುವ ಶ್ರೀ ಮೂಲ ಸ್ವರ್ಣಗೌರಿ ಅಮ್ಮನವರ ಇತಿಹಾಸದ ಹೇಳಿಕೆ ನಂತರ ಪ್ರತಿದಿನ ಸಾವಿರಾರು ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ಚಿನ್ನದ ಮೂಗುತಿ ಸಹಿತ ಅಮ್ಮನವರನ್ನು ದರ್ಶನ ಮಾಡುತ್ತಿದ್ದಾರೆ.
ತಪಸ್ವಿ ಶಿವಲಿಂಗಜ್ಜಯ್ಯ ಸುಮಾರು 170 ವರ್ಷಗಳ ಹಿಂದೆ ನೀಡಿದ್ದ ಮೂಗುತಿ ಧರಿಸುತ್ತಿರುವ ಅಮ್ಮನವರ ದರ್ಶನದಿಂದ ಕಷ್ಟ ಕಾರ್ಪಣ್ಯಗಳು ಬಗೆಹರಿಯುತ್ತದೆ ಎಂದು ಭಕ್ತ ಕೋಟಿಯ ನಂಬಿಕೆಯಾಗಿದೆ.ಕೋಡಿಮಠದ ಮೂಲ ಸ್ವಾಮೀಜಿ ಶಿವಲಿಂಗಜ್ಜಯ್ಯ ಮಾಡಿದ ಕಠಿಣ ತಪಸ್ಸಿನ ಮೂಲಕ ಸೃಷ್ಟಿಯಾದ ಪವಾಡ ಶಕ್ತಿಯುಳ್ಳ ಮೂಗುತಿಯನ್ನು ಮಾಡಾಳು ಗ್ರಾಮದ ಮುದ್ದೇಗೌಡರಿಗೆ ನೀಡಿದ್ದರು. ಹಿಂದೂ ಪಂಚಾಂಗದ ಪ್ರಕಾರ ಆಚಾರ ವಿಚಾರಗಳೊಂದಿಗೆ ನಕ್ಷತ್ರಗಳ ಲೆಕ್ಕಾಚಾರದಲ್ಲಿ ಹಿಂದಿನಿಂದಲೂ ಶ್ರೀಮಠದೊಂದಿಗೆ ಸಾವಿರಾರು ಭಕ್ತಾಧಿಗಳು ಮಾಡಾಳು ಗ್ರಾಮದಲ್ಲಿ ಸ್ವರ್ಣಗೌರಿ ಜಾತ್ರಾ ಮಹೋತ್ಸವವನ್ನುಆಚರಿಸಿಕೊಂಡು ಬರುತ್ತಿದ್ದಾರೆ.
ಶ್ರೀಮಠದ ಪದ್ಧತಿಯಂತೇ ಶ್ರೀ ಮೂಲ ಸ್ವರ್ಣ ಗೌರಿ ಅಮ್ಮನವರಿಗೆ ಪ್ರತಿ ವರ್ಷ ನೀಡುವ ಮೂಗುತಿಯನ್ನು ಈ ಬಾರಿ ಶ್ರೀಮಠದ ಉತ್ತರಾಧಿಕಾರಿ ಶ್ರೀಶ್ರೀ ಚೇತನ್ ಮರಿದೇವರು ಅಮ್ಮನವರಿಗೆ ಧಾರಣೆ ಮಾಡಿದ್ದು ವಿಶೇಷ. ಪಾರ್ವತಿ ಅಮ್ಮನವರ ಸ್ವರೂಪವಾಗಿ ಶ್ರೀ ಮೂಲ ಸ್ವರ್ಣ ಗೌರಮ್ಮನವರು ಗೋಚರವಾಗಿ ಭಕ್ತಾದಿಗಳಿಗೆ ದರ್ಶನ ನೀಡುತ್ತಿದ್ದಾರೆ. ಮೂಗುತಿಗೆ ತನ್ನದೇ ವಿಶೇಷ ಶಕ್ತಿ ಇದ್ದು, ಇದನ್ನು ಅಮ್ಮನವರಿಗೆ ತೊಡಿಸಿದಾಗ ಮೂರ್ತಿಗೆ ತನ್ನದೇ ಆದಂತಹ ದೈವಿಕಳೆ ಬರುತ್ತದೆ. ಇಂತಹ ಶಕ್ತಿ ಸ್ವರೂಪಿಣಿಯಾದ ಶ್ರೀ ಮೂಲ ಸ್ವರ್ಣ ಗೌರಿಯನ್ನು ನೂತನವಾಗಿ ನಿರ್ಮಾಣ ಆಗುತ್ತಿರುವ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದೆ.ದೇವಿ ಕನಸಿನಲ್ಲಿ ಬಂದು ನನಗೊಂದು ನೆಲೆ ಕಲ್ಪಿಸು ಎಂದು ಹೇಳಿರುವ ಪ್ರಕಾರ, ನಂಬಿಕೆಯಂತೆ ಪ್ರಸ್ತುತ ವರ್ಷದಿಂದ ಮಾಡಾಳು ನೂತನ ಸ್ಥಳದಲ್ಲಿ ಮೂಲ ಸ್ವಣಗೌರಿಯನ್ನು ಪ್ರತಿಷ್ಠಾಪನೆಗೊಳಿಸಲಾಗಿದೆ.