ಕನ್ನಡಪ್ರಭ ವಾರ್ತೆ ಶಿಕಾರಿಪುರ
ಪಟ್ಟಣದ ಸುದ್ದಿಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರ ದೇವತೆ ಶ್ರೀ ಹುಚ್ಚುರಾಯಸ್ವಾಮಿ ಸನ್ನಿದಾನ ಅತ್ಯಂತ ಶ್ರೇಷ್ಠವಾಗಿದ್ದು ಅಧಿಕ ಮಾಸದಲ್ಲಿ ಆಂಜನೇಯನ ದರ್ಶನದಿಂದ ಪುಣ್ಯ ಪ್ರಾಪ್ತಿಯಾಗಲಿದೆ ಎಂಬ ಪ್ರತೀತಿಯಿಂದಾಗಿ ನಾಡಿನ ಮೂಲೆಮೂಲೆಯಿಂದ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡು ಆಗಮಿಸುತ್ತಿದೆ.ಶನಿವಾರದ ದರ್ಶನಕ್ಕೆ ಹೆಚ್ಚಿನ ಮಹತ್ವದಿಂದಾಗಿ ಕಳೆದ 3 ಶನಿವಾರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಇದೇ 13 ರಂದು ಕಡೆ ಶನಿವಾರದ ಹಿನ್ನಲೆಯಲ್ಲಿ ಭಕ್ತರ ಸಂಖ್ಯೆ ವಿಪರೀತ ಹೆಚ್ಚಾಗಲಿದ್ದು ಭಕ್ತಿಯಿಂದ ಧಾವಿಸುವ ಸರ್ವ ಭಕ್ತಾದಿಗಳಿಗೆ ಬೆಳಗಿನಿಂದ ಸಂಜೆ ವರೆಗೆ ನಿರಂತರವಾಗಿ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಶ್ರಾವಣ ಮಾಸ, ಅಧಿಕ ಮಾಸದಲ್ಲಿ ಶ್ರೀ ಹುಚ್ಚುರಾಯನ ಸನ್ನಿಧಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನದಿಂದ ಪುನೀತರಾಗುತ್ತಿದ್ದು ಈ ದಿಸೆಯಲ್ಲಿ ಇದೀಗ 12 ನೇ ಅನ್ನಸಂತರ್ಪಣೆಯನ್ನು ಎಪಿಎಂಸಿ ವರ್ತಕರು, ರೈಸ್ ಮಿಲ್ ಮಾಲೀಕರ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರ ವೈಯುಕ್ತಿಕ ಆದಾಯವನ್ನು ಮಾತ್ರ ಅನ್ನ ಸಂತರ್ಪಣೆಗೆ ಬಳಸಿಕೊಳ್ಳಲಾಗುತ್ತಿದೆ. ಸಂಪೂರ್ಣ ದೇವಾಲಯವನ್ನು ತಳಿರು ತೋರಣದಿಂದ ಅಲಂಕರಿಸಿ ಬೆಳಿಗ್ಗೆ 6ರಿಂದ ಉಪಾಹಾರ ಮದ್ಯಾಹ್ನ 12ರಿಂದ ಸಂಜೆವರೆಗೆ ನಡೆಯಲಿದೆ ಎಂದರು.ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಎ ಗ್ರೇಡ್ ದೇವಾಲಯಕ್ಕೆ ಅಧಿಕ ಮಾಸದ ಹಿನ್ನೆಲೆಯಲ್ಲಿ ನಿತ್ಯ ಭಕ್ತಾದಿಗಳು ತಂಡೋಪತಂಡವಾಗಿ ರಾಜ್ಯದ ಗಡಿಭಾಗದ ಜಿಲ್ಲೆಗಳಿಂದ ಆಗಮಿಸುತ್ತಿದ್ದು, ವಾರ್ಷಿಕ ಕೋಟ್ಯಂತರ ಆದಾಯ ಹೊಂದಿರುವ ದೇವಾಲಯದಲ್ಲಿ ಅನ್ನಪ್ರಸಾದದ ಕೊರತೆಯಿಂದ ಮುಜುಗರ ಅನುಭವಿಸುವಂತಾಗಿದೆ. ಇದರೊಂದಿಗೆ ಶೌಚಾಲಯ, ಶುದ್ದ ಕುಡಿಯುವ ನೀರು, ವಾಹನ ನಿಲ್ದಾಣದ ಸಹಿತ ಹಲವು ಸಮಸ್ಯೆಯಿಂದಾಗಿ ಭಕ್ತರು ಪರದಾಡುತ್ತಿದ್ದಾರೆ. ಬೆಳಗಿನ ಜಾವ 3-4ಕ್ಕೆ ಆಗಮಿಸುವ ಭಕ್ತರು ಶೌಚಾಲಯದ ಅಸಮರ್ಪಕ ನಿರ್ವಹಣೆಯಿಂದ ಮಹಿಳೆಯರು, ಮಕ್ಕಳು,ವೃದ್ದರು ಬಾಧೆ ಶಮನಕ್ಕಾಗಿ ಹೊನ್ನಾಳಿ ರಸ್ತೆಯನ್ನು ಆಶ್ರಯಿಸುತ್ತಿರುವುದು ಅಧಿಕಾರಿಗಳ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.