ಕನ್ನಡಪ್ರಭ ವಾರ್ತೆ ಉಡುಪಿವಿಶ್ವದ 2ನೇ ಅತೀ ಎತ್ತರದ, ಅತ್ಯಂತ ಕಠಿಣ ಮಾರ್ಗಗಳಲ್ಲೊಂದಾದ ಕಾಶ್ಮೀರದ ಖಾರ್ದುಂಗ್ಲಕ್ಕೆ ತಮ್ಮ ಹಳೆಯ ಸ್ಪ್ಲೆಂಡರ್ ಬೈಕಿನಲ್ಲಿ ಯಶಸ್ವಿಯಾಗಿ ಹೋಗಿ ಬಂದ ಉಡುಪಿಯ ತಂದೆ- ಮಗನಿಗೆ ಹೀರೋ ಕಂಪನಿ ಭರ್ಜರಿ ಬಹುಮಾನ ನೀಡಿದೆ.ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದ ರಾಜೇಂದ್ರ ಶೆಣೈ ಮತ್ತವರ ಮಗ ಪ್ರಜ್ವಲ್ ಶೆಣೈ ಅವರ ಈ ಸಾಹಸಗಾಥೆಯ ಮಾಹಿತಿ ಪಡೆದ ಹೀರೊ ಕಂಪನಿ, ಅವರಿಗೆ ತನ್ನ ಮಾಸ್ಟರ್‌ಪೀಸ್ ಎಂದು ಕರೆಯುವ ಸೆಂಟಿನ್ನಿಯಲ್ ಸಿಇ - 100 ಬೈಕನ್ನು ನೀಡಿ ಗೌರವಿಸಿದೆ. ಶನಿವಾರ ಉಡುಪಿಯ ಹೀರೋ ಶೋರೂಂನಲ್ಲಿ ಅವರಿಗೆ ಈ ಬೈಕನ್ನು ಹಸ್ತಾಂತರಿಸಲಾಗಿದೆ.
ರಾಜೇಂದ್ರ ಶೆಣೈ ಅವರು ತಮ್ಮ 25 ವರ್ಷ ಹಳೆಯ ಈ ಹೀರೋ ಸ್ಪ್ಲೆಂಡರ್ ಬೈಕ್‌ನಲ್ಲಿ ಈವರೆಗೆ 17 ರಾಜ್ಯಗಳನ್ನು ಸಂಚರಿಸಿದ್ದಾರೆ. ತಿರುಪತಿ , ಮಧುರೈ, ಕನ್ಯಾಕುಮಾರಿ, ಪುರಿ, ಶಿರಡಿ, ನಾಸಿಕ್, ಪಂಡರಾಪುರ, ಅಯೋಧ್ಯೆ ಹೀಗೆ ಹತ್ತಾರು ಪುಣ್ಯಕ್ಷೇತ್ರಗಳಿಗೆ ಹೋಗಿ ಬಂದಿದ್ದಾರೆ. ಇತ್ತೀಚೆಗೆ ಪ್ರಯಾಗ್ ರಾಜ್‌ನ ಮಹಾಕುಂಭಮೇಳಕ್ಕೂ ಹೋಗಿ ಬಂದಿದ್ದಾರೆ ಈ ಅಪ್ಪ-ಮಗ ಜೋಡಿ.ಕಳೆದ ವರ್ಷ ಇವರು ಹೊಸ ಸಾಹಸಕ್ಕೆ ಕೈಹಾಕಿದರು. ಬೇರೆಯವರೆಲ್ಲ ಬುಲ್ಲೆಟ್ ಅಥವಾ ಅದಕ್ಕಾಗಿಯೇ ಇರುವ ಬೈಕ್‌ಗಳಲ್ಲಿ ಕಾಶ್ಮೀರಕ್ಕೆ ಹೋಗುವ ಸಾಹಸ ಮಾಡುತಿದ್ದರೇ ಈ ಜೋಡಿ ತಮ್ಮ ಮೆಚ್ಚಿನ ಸ್ಪ್ಲೆಂಡರ್‌ನಲ್ಲಿಯೇ ಹೊರಟು ಬಿಟ್ಟರು. ಕೇವಲ 10 ದಿನಗಳಲ್ಲಿ ಉಡುಪಿಯಿಂದ ಸುಮಾರು 1900 ಕಿ.ಮೀ. ದೂರದಲ್ಲಿರುವ, ನೆಲಮಟ್ಟದಿಂದ 17,982 ಅಡಿ ಎತ್ತರದ ಕಾಶ್ಮೀರದ ಖಾರ್ದುಂಗ್ಲಾಕ್ಕೆ ಯಶಸ್ವಿಯಾಗಿ ತಲುಪಿದ್ದರು. ಈ ಬಗ್ಗೆ ಕನ್ನಡಪ್ರಭ ವಿಶೇಷ ವರದಿಯನ್ನೂ ಪ್ರಕಟಿಸಿತ್ತು.ಈ ವರ್ಷ ಹೀರೋ ಮೋಟೋ ಕಾರ್ಪ್ ಸಂಸ್ಥೆಯ ಸಂಸ್ಥಾಪಕ ಡಾ.ಬ್ರಿಜ್ ಮೋಹನ್ ಲಾಲ್ ಮುಂಜಾಲ್ ಅವರ 100ನೇ ಜನ್ಮದಿನವನ್ನು ಕಂಪನಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದೆ. ಕಂಪನಿಯು ಸೆಂಟಿನ್ನಿಯಲ್ ಎಂಬ ಕೇವಲ 100 ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಇದು ಕಲೆಕ್ಟರ್ಸ್ ಎಡಿಷನ್ ಆಗಿದ್ದು, ಅವುಗಳನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡಲಾಗುತ್ತಿದೆ. ಈ ಬೈಕ್‌ಗೆ ಅತೀ ಹೆಚ್ಚು 20.30 ಲಕ್ಷ ರು. ವರೆಗೆ ಬಿಡ್ ಮಾಡಲಾಗಿದೆ. ಅಂತಹ ಪ್ರತಿಷ್ಠಿತ ಬೈಕನ್ನು ಶೆಣೈ ಅವರಿಗೆ ಬೆಸ್ಟ್ ಕಸ್ಟಮರ್ ಎಂದು ಗುರುತಿಸಿ, ಉಡುಗೊರೆಯಾಗಿ ನೀಡಿ, ಅವರ ಸಾಹಸಕ್ಕೆ ಗೌರವ ಸಲ್ಲಿಸಿದೆ.ಪ್ರಜ್ವಲ್ ಶೆಣೈ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿ. ತಾಯಿ ರಜನಿ ಶೆಣೈ ಅವರನ್ನು ಇದೇ ಸ್ಪ್ಲೆಂಡರ್ ಬೈಕಿನಲ್ಲಿ ಗೋವಾ, ತಿರುಪತಿಗೆ, ತಂಗಿ ಪ್ರಾರ್ಥನಾ ಶೆಣೈ ಅವರನ್ನು ಗುಜರಾತಿನ ಸರ್ದಾರ್ ವಲ್ಲಭ ಬಾಯ್ ಪಟೇಲ್ ಪ್ರತಿಮೆ (ಸ್ಟ್ಯಾಚು ಆಫ್ ಯುನಿಟಿ), ಸೋಮನಾಥ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ.