ಕನ್ನಡಪ್ರಭ ವಾರ್ತೆ ಮಂಡ್ಯ
ಹೊರಗಡೆಯಿಂದ ಪಿಓಪಿ ಗಣೇಶಮೂರ್ತಿಗಳ ಬಿಡಿಭಾಗಗಳನ್ನು ತಂದವರು ನಗರದ ಹೊರವಲಯದ ಕಿರಗಂದೂರು ಬಳಿ ಅವುಗಳನ್ನು ಜೋಡಿಸಿಟ್ಟುಕೊಂಡು ಇಪ್ಪತ್ತು ದಿನಗಳ ಹಿಂದೆಯೇ ಮಾರಾಟ ಶುರು ಮಾಡಿದ್ದರು. ಈ ವಿಷಯವನ್ನು ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ಗಮನಕ್ಕೂ ತಂದಿದ್ದೆವು. ಸ್ಥಳದ ಮೇಲೆ ದಾಳಿಯನ್ನೂ ನಡೆಸಿದರು. ಆದರೆ, ಪಿಓಪಿ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡು, ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವನ್ನೇ ಮಾಡಲಿಲ್ಲ ಎಂದು ಹಲವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರಮ ಕೈಗೊಳ್ಳುವ ಅಧಿಕಾರ ಯಾರಿಗಿದೆ?:ಪಿಓಪಿ ಗಣೇಶಮೂರ್ತಿಗಳನ್ನು ವಶಕ್ಕೆ ಪಡೆಯುವ ಅಧಿಕಾರ ನಮಗಿಲ್ಲ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಹೇಳುತ್ತಾರೆ. ಹಾಗಾದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇರುವುದಾದರೂ ಏಕೆ? ಮಾಲಿನ್ಯಕಾರಕವಾದಂತಹ ಪಿಓಪಿ ಗಣೇಶಮೂರ್ತಿಗಳನ್ನು ವಶಪಡಿಸಿಕೊಂಡು ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಯಾರಿಗಿದೆ ಎಂದು ಮಾರಾಟಗಾರರು ಪ್ರಶ್ನಿಸುತ್ತಿದ್ದಾರೆ.
ನಾವು ನೆಲಬಾಡಿಗೆ ಕಟ್ಟಿಕೊಂಡು ಹೊರರಾಜ್ಯಗಳಲ್ಲಿ ಮಣ್ಣಿನ ಗಣೇಶಮೂರ್ತಿಗಳನ್ನು ತಂದು ಮಾರಾಟಕ್ಕಿಟ್ಟಿದ್ದೇವೆ. ಬೇರೆಯವರಿಗೆ ಪಿಓಪಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಅವಕಾಶ ಮಾಡಿಕೊಟ್ಟು ಅವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅಧಿಕಾರವಿಲ್ಲವೆಂದರೆ ನಮಗೂ ಅವಕಾಶ ಕೊಡಲಿ. ನಮಗೆ ಪಿಓಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲು ಶಕ್ತರಿಲ್ಲವೇ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಮಣ್ಣಿನ ಗಣೇಶ ಮೂರ್ತಿಗಳು ಪಿಓಪಿ ಗಣೇಶಮೂರ್ತಿಗಳಷ್ಟು ಆಕರ್ಷಕವಾಗಿರುವುದಿಲ್ಲ. ಆ ಮೂರ್ತಿಗಳ ರಚನೆ ತುಂಬಾ ಸುಂದರ ಮತ್ತು ಮೋಹಕವಾಗಿ ಮೂಡಿಬಂದಿರುತ್ತದೆ. ಅದಕ್ಕೆ ಬಹಳಷ್ಟು ಜನರು ಆಕರ್ಷಿತರಾಗುತ್ತಾರೆ. ಅದನ್ನು ತೆಗೆದುಕೊಂಡು ಹೋಗುವುದು ಕೂಡ ಸುಲಭ. ಈಗ ಮೊಬೈಲ್‌ನಲ್ಲೇ ಗಣೇಶಮೂರ್ತಿಗಳನ್ನು ಬುಕ್ ಮಾಡಿಕೊಂಡು, ಗೂಗಲ್ ಮ್ಯಾಪ್ ಮೂಲಕ ಸ್ಥಳದ ಮಾಹಿತಿ ಪಡೆದು ಗಣೇಶಮೂರ್ತಿಗಳನ್ನು ಸುಲಭವಾಗಿ ಕೊಂಡೊಯ್ಯುತ್ತಿದ್ದಾರೆ. ಅಧಿಕಾರಿಗಳೂ ವರ್ಷಕ್ಕೊಮ್ಮೆ ಬರುವ ಗೌರಿ- ಗಣೇಶ ಹಬ್ಬದ ಸಮಯದಲ್ಲಿ ಪಿಓಪಿ ಗಣೇಶಮೂರ್ತಿಗಳನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.
‘ನಾವು ೩೫ ಲಕ್ಷ ರು. ಬಂಡವಾಳ ಹಾಕಿ ಮಾರಾಟಕ್ಕೆ ಕುಳಿತಿದ್ದೇವೆ. ೩೦೦ ರು.ನಿಂದ ೩೫ ಸಾವಿರ ರು.ವರೆಗೆ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾರಾಟಕ್ಕಿಟ್ಟಿದ್ದೇವೆ. ವ್ಯಾಪಾರ ನಿರೀಕ್ಷೆಯಂತೆ ನಡೆಯುತ್ತಲೇ ಇಲ್ಲ. ಹಾಕಿದ ಬಂಡವಾಳ ಬರುವುದೋ ಇಲ್ಲವೋ ಎಂಬ ಆತಂಕ ಕಾಡುತ್ತಿದೆ. ನಮಗೆ ಗಣೇಶಮೂರ್ತಿಗಳ ಮಾರಾಟದಲ್ಲಿ ಲಾಭ ಬೇಡ. ಅಸಲು ಬಂದರೆ ಸಾಕು ಎನ್ನುವಂತಾಗಿದೆ. ಹಿಂದಿನ ವರ್ಷ ೮ ಲಾರಿಗಳಲ್ಲಿ ಗಣೇಶಮೂರ್ತಿಗಳನ್ನು ತಂದಿದ್ದೆವು. ಈ ವರ್ಷ ಮೂರು ಲಾರಿಗಳಲ್ಲಿ ಮೂರ್ತಿಗಳನ್ನು ತಂದಿದ್ದೇವೆ. ಮಾರಾಟ ಮಾತ್ರ ನಿರೀಕ್ಷೆಯಂತಿಲ್ಲ.’
‘ಪಿಓಪಿ ಗಣೇಶಮೂರ್ತಿ ಮಾರಾಟಗಾರರಿಗೆ ಅಧಿಕಾರಿಗಳೇ ನೆರವಾಗಿದ್ದಾರೆ. ಮಾರಾಟ ಮಾಡಬಾರದು ಎಂಬ ನಿಯಮ ರೂಪಿಸಿರುವವರೂ ಅವರೇ, ಕ್ರಮ ಕೈಗೊಳ್ಳಲಾಗುವುದಿಲ್ಲವೆಂದು ಹೇಳುವವರೂ ಅವರೇ ಆದಾಗ ನಾವೇನು ಮಾಡೋಣ. ನಮಗೂ ಪಿಓಪಿ ಗಣೇಶಮೂರ್ತಿಗಳ ಮಾರಾಟಕ್ಕೆ ಅವಕಾಶ ಕೊಡಲಿ. ಇಲ್ಲವೇ ಅವು ಜಿಲ್ಲೆಗೆ ಬಾರದಂತೆ ತಡೆಯಲಿ. ಈ ಬಾರಿ ಪಿಓಪಿ ಗಣೇಶಮೂರ್ತಿ ಮಾರಾಟಗಾರರಿಂದಲೇ ನಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರಿದೆ.’