ಒಳ ಮೀಸಲಾತಿ ವಿರೋಧಿಸಿ ಬಲಗೈ ಸಮುದಾಯಗಳಿಂದ ಬೃಹತ್ ಪ್ರತಿಭಟನೆ । ಸರ್ಕಾರದ ವಿರುದ್ಧ ಕೂಗು---ಒಳಮೀಸಲಾತಿ ರೋಸ್ಟರ್ ಬಿಂದು ಪದ್ಧತಿಯಿಂದ ಎಸ್‌ಸಿಗೆ ಅನ್ಯಾಯ
ನ್ಯಾ. ನಾಗಮೋಹನ ದಾಸ್‌ರ ವರದಿ ಅವೈಜ್ಞಾನಿಕ, ತಿರಸ್ಕರಿಸಬೇಕು
ತಮ್ಮನ್ನೇ ನಂಬಿದ ಜಾತಿಗಳಿಗೆ ರಾಜ್ಯ ಸರ್ಕಾರದಿಂದ ಮಹಾಮೋಸಜಾತಿ ಪ್ರಮಾಣ ಪತ್ರ ಮೊದಲಿನಂತೆಯೇ ಕೊಡಲು ಆಗ್ರಹಿಸಿ ಪ್ರತಿಭಟನೆ
---
ಕನ್ನಡಪ್ರಭ ವಾರ್ತೆ ಚಾಮರಾಜನಗರಒಳಮೀಸಲಾತಿಯ ರೋಸ್ಟರ್ ಬಿಂದು ಪದ್ಧತಿಯನ್ನು ಕೈಬಿಡುವಂತೆ ಕೊಳ್ಳೇಗಾಲದಲ್ಲಿ ನಡೆದ ಪ್ರತಿಭಟನೆ ಮಾಸುವ ಮುನ್ನವೇ ಚಾಮರಾಜನಗರದಲ್ಲಿ ಮತ್ತೆ ಬಲಗೈ ಸಮುದಾಯಗಳ ಪ್ರತಿಭಟನೆ ನಡೆದಿದೆ. ಪದ್ಧತಿಯಿಂದ ಪರಿಶಿಷ್ಠ ಜಾತಿಯ ಬಲಗೈ ಸಮುದಾಯಗಳ ಮೇಲೆ ಅನ್ಯಾಯವಾಗುತ್ತಿದೆ ಎಂದು ಗಡಿಕಟ್ಟೆ ಯಜಮಾನರು, ಬಲಗೈ ಸಮಯದಾಯಗಳ ಒಕ್ಕೂಟ, ಡಾ. ಬಿ.ಆರ್. ಅಂಬೇಡ್ಕರ್ ಮಹಾಸಭಾದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಅಂಬೇಡ್ಕರ್ ಭವನದ ಆವರಣದಲ್ಲಿ ನೆರೆದ ಪ್ರತಿಭಟನಾಕಾರರು ಅಲ್ಲಿಂದ ಪ್ರವಾಸಿ ಮಂದಿರ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟಿಸಿ, ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು ಹಾಗೂ ಬಲಗೈ ಸಮುದಾಯದ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಮುಖಂಡರು, ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಿದ್ದಕ್ಕಾಗಿ ಈಗಲ ಒಳಮೀಸಲಾತಿ ಜಾರಿಗೆ ಮುಂದಾಗಿರುವುದು ಪರಿಶಿಷ್ಠ ಜಾತಿಯ 101 ಜಾತಿಗೆ ಮಾಡುತ್ತಿರುವ ದ್ರೋಹ ಎಂದು ಆರೋಪಿಸಿದರು.
ಸರ್ಕಾರ ನಂಬಿಕೆ ದ್ರೋಹ ಮಾಡುತ್ತಿದೆ. ಪರಿಶಿಷ್ಟ ಜಾತಿಯ ಒಳಪಂಗಡದಲ್ಲಿ ದ್ವೇಷ ಬರುವ ರೀತಿಯಲ್ಲಿ ತರಾತುರಿಯಲ್ಲಿ ಒಳಮಿಸಲಾತಿಯನ್ನು ಜಾರಿ ಮಾಡಲು ಹೊರಟಿರುವುದು ಖಂಡನೀಯ ಎಂದರು. ಜೊತೆಗೆ ಅವೈಜ್ಞಾನಿಕವಾಗಿ ಸಿದ್ಧಗೊಂಡಿರುವ ನ್ಯಾ. ನಾಗಮೋಹನ್ ದಾಸ್ ಅವರ ವರದಿಯನ್ನು ಹಿಂಪಡೆದು, ಅನ್ಯಾಯ ಸರಿಪಡಿಸಬೇಕೆಂದು ಆಗ್ರಹಿಸಿದರು.ಪ್ರವರ್ಗ ಎ, ಬಿ, ಸಿ ವಿಭಾಗ ಮಾಡಿ ಶೇ.೫ರಷ್ಟು ಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸಿದ್ದಾರೆ. ಇದರಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದರು.
ಜಾತಿ ಪ್ರಮಾಣ ಪತ್ರವನ್ನು ಮೊದಲಿನಂತೆ ನೀಡಬೇಕು. ಒಳ ಮೀಸಲಾತಿಯಲ್ಲಿರುವ ವ್ಯತ್ಯಾಸವನ್ನು ಸರಿಪಡಿಸುವ ತನಕ ಯಾವುದೇ ಸರ್ಕಾರಿ ಹುದ್ದೆಗಳ ನೇಮಕವನ್ನು ಮಾಡಬಾರದು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮಹಾಸಭಾದ ಅಧ್ಯಕ್ಷ ಉಮೇಶ್ ಕುದರ್, ಕಾರ್ಯಾಧ್ಯಕ್ಷ ಸಿ.ಕೆ. ಮುಂಜುನಾಥ್, ಮೂಡ್ನಾಕೂಡು ಪ್ರಕಾಶ್, ಸಾಹಿತಿ ಮಂಜುನಾಥ್ ಪ್ರಸನ್ನ, ಶಿವಸ್ವಾಮಿ, ರಂಗಸ್ವಾಮಿ, ರೇಚಂಬಳ್ಳಿ ಕುಮಾರ್, ಎಸ್.ಪಿ.ಮಹೇಶ್, ಶಿವರಾಜ್ ಸಿದ್ದಯ್ಯನಪುರ, ಶಾಂತರಾಜು, ನವೀನ್ ಮೌರ್ಯ, ಸುಭಾಷ್, ನಾಗರಾಜು, ವಾಸು, ಗಡಿಕಟ್ಟೆ, ಯಜಮಾನರು, ಬಲಗೈ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು, ಡಾ.ಬಿ. ಆರ್.ಅಂಬೇಡ್ಕರ್ ಮಹಾಸಭಾದ ಪದಾಧಿಕಾರಿಗಳು, ಜನಾಂಗದ ಮುಖಂಡರು ಭಾಗವಹಿಸಿದ್ದರು.