ಕನ್ನಡಪ್ರಭ ವಾರ್ತೆ ಹಾಸನ
ನಗರದ ಹೌಸಿಂಗ್ ಬೋರ್ಡ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಹಾಸನ ತಾಲೂಕು ಬಿಜಿವಿಎಸ್ ಮತ್ತು ಶಾಲೆಯ ಇಕೋ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಪರಿಸರ ಶಿಕ್ಷಣ ಮತ್ತು ಕಸದ ನಿರ್ವಹಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣದಲ್ಲಿ ಮಾತನಾಡಿ, ಮಕ್ಕಳೇ ಪರಿಸರ ಸಂರಕ್ಷಣೆಯ ನಿಜವಾದ ಶಕ್ತಿ. ಬಾಲ ಪರಿಸರ ಹೋರಾಟಗಾರ್ತಿ ಗ್ರೇಟ್ ತಂಬರ್ಗ್ ಅವರನ್ನು ಉದಾಹರಿಸಿದ ಅವರು, ಒಬ್ಬ ವ್ಯಕ್ತಿಗೆ ಸರಾಸರಿ ೪೦೦ ಮರಗಳ ಅಗತ್ಯವಿದ್ದರೆ, ಭಾರತದಲ್ಲಿ ಪ್ರತಿ ವ್ಯಕ್ತಿಗೆ ಕೇವಲ ೨೮ ಮರಗಳಷ್ಟೇ ಲಭ್ಯವಿವೆ. ಮರಗಳು ಇಂಗಾಲ ಡೈ ಆಕ್ಸೈಡ್ ಅನ್ನು ಶೋಷಿಸಿ ಆಮ್ಲಜನಕ ನೀಡುತ್ತವೆ. ವಾತಾವರಣ ತಂಪಾಗಿಸುತ್ತವೆ ಹಾಗೂ ಆಹಾರ ಮತ್ತು ಜೀವ ವೈವಿಧ್ಯತೆಗೆ ಆಧಾರವಾಗಿವೆ. ಒಂದು ಪೂರ್ಣ ಬೆಳೆದ ಮರವು ತನ್ನ ಜೀವನಾವಧಿಯಲ್ಲಿ ಸುಮಾರು ₹೨೭ ರಿಂದ ₹೩೦ ಲಕ್ಷ ಮೌಲ್ಯದ ಆಮ್ಲಜನಕ ಒದಗಿಸುತ್ತದೆ ಎಂದರು.
ಕಸದ ನಿರ್ವಹಣೆ ಕುರಿತು ಮಾತನಾಡಿದ ಅವರು, ಕಸವೆಂದರೆ ಸಂಪೂರ್ಣ ವ್ಯರ್ಥವಲ್ಲ. ಸರಿಯಾದ ವಿಂಗಡಣೆ ಮಾಡಿದರೆ ಅದು ಸಂಪನ್ಮೂಲವಾಗುತ್ತದೆ. ಒಣ- ತೇವ ಕಸ ಪ್ರತ್ಯೇಕಿಸಿ, ಪ್ಲಾಸ್ಟಿಕ್ ಪುನರ್‌ಬಳಕೆ ಮಾಡುವ ಮೂಲಕ ಪರಿಸರದ ಮೇಲೆ ಬೀಳುವ ಭಾರವನ್ನು ಕಡಿಮೆ ಮಾಡಬಹುದು. ಕೇವಲ ಜೂನ್ ೫ರ ಪರಿಸರ ದಿನದಂದು ಗಿಡ ನೆಡುವುದರಿಂದ ಸಾಲದು; ನೆಟ್ಟ ಗಿಡಗಳನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.ನಗರ ಪ್ರದೇಶಗಳಲ್ಲಿ ಸುಶಿಕ್ಷಿತರಾಗಿದ್ದರೂ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು, ಸುಡುವುದು ಹಾಗೂ ವಿಂಗಡಣೆ ಮಾಡದಿರುವುದು ದುಃಖಕರ ಬೆಳವಣಿಗೆ ಎಂದು ಅವರು ವಿಷಾದಿಸಿದರು.
ಅಗಸ್ತ್ಯ ಸಂಸ್ಥೆಯ ರಾಮಜಿ ಅವರು ಪ್ಲಾಸ್ಟಿಕ್ ಜಾಗೃತಿ ಅಭ್ಯಾಸ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ರಾಧಾ ಎನ್.ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು. ಶಿಕ್ಷಕಿ ಹಾಗೂ ಬಿಜಿವಿಎಸ್ ತಾಲೂಕು ಕಾರ್ಯದರ್ಶಿ ಲೋಲಾಕ್ಷಿ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಸ್ವಾಗತಿಸಿ, ಮೀನಾಕ್ಷಿ ಆರ್. ವಂದಿಸಿದರು.ಇದೆ ವೇಳೆ ಶಿಕ್ಷಕರಾದ ವಸಂತ ಎಲ್.ಎಚ್., ಮೀನಾಕ್ಷಿ ಡಿ.ಎನ್., ಚನ್ನನ ಬೋರಮ್ಮ, ಚಂದ್ರಕಲಾ, ಪಾಲಕ್ಷ ಎಚ್.ಆರ್., ರಶ್ಮಿ ಎಂ.ಆರ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.