ಕನ್ನಡಪ್ರಭ ವಾರ್ತೆ ಹಿರಿಯೂರು
ಎಲ್ಲಾ ವರ್ಷಗಳಲ್ಲೂ ಹಬ್ಬಕ್ಕೆ ಒಂದು ವಾರವಿರುವಾಗಲೇ ಗೌರಿ ಗಣೇಶನ ಮೂರ್ತಿಗಳ ವ್ಯಾಪಾರ ಶುರುವಾಗುತ್ತಿತ್ತು. ಆದರೆ ಈ ಬಾರಿ ಕೊನೆಯ 2 ದಿನ ವ್ಯಾಪಾರ ಜೋರಾಗಿದೆ. ಈ ಸಲ ಹಳ್ಳಿಗಳಲ್ಲಿ ಸಹ ವ್ಯಾಪಾರಸ್ಥರು ಗಣೇಶನ ಮೂರ್ತಿಗಳನ್ನು ಮಾರುವುದು ಕಂಡು ಬಂದಿದೆ. ಶುಕ್ರವಾರ ನಗರದಲ್ಲೂ ವ್ಯಾಪಾರ ಜೋರಾಗಿತ್ತು. ಹಣ್ಣು ಹೂವುಗಳ ದುಬಾರಿ ದರಕ್ಕೆ ಹಳ್ಳಿಗರು ಬೇಸರಿಸಿಕೊಂಡು ನಾವು ಬೆಳೆದ ಮಾಲನ್ನು ಯಾಕೆ ಈ ದರಕ್ಕೆ ಕೊಳ್ಳುವುದಿಲ್ಲ ಎಂದು ಗೊಣಗಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು.
ಹಳ್ಳಿಗಳಿಂದ ಬಂದ ಯುವಕರು ಸಾವಿರಾರು ರೂಗಳ ಗಣೇಶ ಮೂರ್ತಿಗಳನ್ನು ಕೊಂಡು ಆಟೋ, ಟಾಟಾ ಎಸಿಗಳಲ್ಲಿ ಸಾಗಿಸುವ ದೃಶ್ಯ ಸಂಜೆಯವರೆಗೂ ಚಾಲ್ತಿಯಲ್ಲಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಒಂದಿಷ್ಟು ವ್ಯಾಪಾರ ಕಡಿಮೆಯೇ ಎನ್ನುವ ವ್ಯಾಪಾರಸ್ಥರು ಬಿಸಿಲಲ್ಲಿ ನಿಂತು ಗ್ರಾಹಕರನ್ನು ಸೆಳೆಯುವ ಕಾಯಕ ಮಾಡುತ್ತಿದ್ದರು.ನಗರದ ನೆಹರೂ ಮೈದಾನದಲ್ಲಿ ಸುಮಾರು 52 ವರ್ಷಕ್ಕೂ ಹೆಚ್ಚು ಕಾಲದಿಂದ ಕೂರಿಸುತ್ತಿರುವ ಗಣೇಶ ಉತ್ಸವಕ್ಕೆ ಈಗಾಗಲೇ ಭರದ ಸಿದ್ಧತೆ ನಡೆದು ಈ ವರ್ಷ ಗಣೇಶ ಉತ್ಸವ ಗಣೇಶ ಸಮಿತಿಯವರ ಕೈಯಿಂದ ನಗರಸಭೆ ವ್ಯಾಪ್ತಿಗೆ ಬಂದಿದೆ. ನಗರಸಭೆಯವರ ಸಹಯೋಗದಲ್ಲಿ ಶಕ್ತಿ ಗಣಪತಿ ಪ್ರತಿಷ್ಟಾಪನೆಯಾಗುತ್ತಿದೆ. ಈಗಾಗಲೇ ನೆಹರೂ ಮೈದಾನ ಮದುವೆ ಮನೆಯಂತೆ ಸಿಂಗಾರಗೊಂಡಿದ್ದು ತರಹೇವಾರಿ ಆಟಗಳ ಎಗ್ಸಿಬಿಶನ್ ಮುಕ್ಕಾಲು ಮೈದಾನ ಆವರಿಸಿಕೊಂಡು ನೋಡುಗರನ್ನು ಸೆಳೆಯುತ್ತಿದೆ.
ದಿನಾಂಕ 06-10-2024 ರಂದು ಶಕ್ತಿ ಗಣೇಶನ ಅದ್ಧೂರಿ ವಿಸರ್ಜನೆ ಕಾರ್ಯಕ್ರಮ, ಮೆರವಣಿಗೆ ಇರುತ್ತದೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.