ರವಿ ಕಾಂಬಳೆ
ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ತ್ವರಿತಗತಿಯಲ್ಲಿ ತಲುಪಿಸುವುದು ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದೊಂದಿಗೆ ಹುಕ್ಕೇರಿ ತಾಲೂಕು ಆಡಳಿತ ಸೌಧದಲ್ಲಿ ಮಹತ್ವಾಕಾಂಕ್ಷಿ ಇ-ಆಫೀಸ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ತಾಲೂಕಿನ ಹೊಸದಾಗಿ ಪರಿಚಯಿಸಿದ ಈ ಇ-ಆಫೀಸ್ ವ್ಯವಸ್ಥೆಯಿಂದ ಕಂದಾಯ ಇಲಾಖೆಯ ಸೇವೆಗಳು ಇದೀಗ ಪೂರ್ಣ ಪ್ರಮಾಣದಲ್ಲಿ ಪೇಪರ್ ರಹಿತ ಕಚೇರಿಯಾಗಿ ಬದಲಾಗಿದೆ. ಇಲ್ಲಿನ ತಾಲೂಕು ಕಚೇರಿಯ ಕಾರ್ಯಗಳೆಲ್ಲವೂ ಕಾಗದ ರಹಿತ ಮತ್ತು ಪಾರದರ್ಶಕತೆಗೆ ತೆರೆದುಕೊಂಡಿದ್ದು ಈ ಹೊಸ ವ್ಯವಸ್ಥೆ ಅನುಷ್ಠಾನದಿಂದ ಕಂದಾಯ ಇಲಾಖೆಯ ಕಡತಗಳ ವಿಲೇವಾರಿಯಲ್ಲಿ ವಿಳಂಬ ತಪ್ಪಿದಂತಾಗಿದೆ.ಇ-ಆಫೀಸ್ ವ್ಯವಸ್ಥೆ ಜಾರಿಯಿಂದ ಸಾರ್ವಜನಿಕರ ಪರದಾಟ ತಪ್ಪಲಿದೆ. ಜೊತೆಗೆ ಸಮಯದ ಉಳಿತಾಯವೂ ಆಗಲಿದೆ. ಇ-ಆಫೀಸ್‌ನಲ್ಲಿ ಕಂದಾಯ ಸೇವೆಗಳೆಲ್ಲವೂ ಇದೀಗ ಸುಗಮವಾಗುತ್ತಿದ್ದು ಮಧ್ಯವರ್ತಿಗಳ ಹಾವಳಿಗೂ ಕಡಿವಾಣ ಹಾಕಿದಂತಾಗಿದೆ. ಹುಕ್ಕೇರಿ, ಸಂಕೇಶ್ವರ ಮತ್ತು ಯಮಕನಮರಡಿ ಹೋಬಳಿಗಳ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಇ-ಆಫೀಸ್ ವ್ಯವಸ್ಥೆಯನ್ನು ಸಮರ್ಪಕ ಮತ್ತು ಸುಗಮವಾಗಿ ಜಾರಿಗೊಳಿಸಲು ಕಂದಾಯ ಇಲಾಖೆ ಎಲ್ಲ ಅಧಿಕಾರಿ-ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ ಪರಿಣಿತಿಗೊಳಿಸಲಾಗಿದೆ. ಸಾರ್ವಜನಿಕರು ಅರ್ಜಿಯನ್ನು ಹತ್ತಿರದ ಕಂದಾಯ ಇಲಾಖೆಯ ಇ-ಆಫೀಸ್‌ನಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯಾದ ಕೂಡಲೇ ಅದು ಸಂಬಂಧಿಸಿದ ಅಧಿಕಾರಿಗಳಿಗೆ ರವಾನೆಯಾಗುತ್ತದೆ. ಇಲ್ಲಿ ಸಲ್ಲಿಕೆಯಾದ ಎಲ್ಲ ದಾಖಲೆ ಸ್ಕ್ಯಾನ್ ಆಗಿ ಸಂಬಂಧಿತ ಶಾಖೆಗೆ ರವಾನೆಯಾಗುತ್ತದೆ. ಅಲ್ಲಿ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ನಡೆಯುತ್ತವೆ.
ಪಹಣಿ ತಿದ್ದುಪಡಿ, ಕಂದಾಯ ಗ್ರಾಮ, ಬರ ಪರಿಹಾರ, ದಾರಿ ಬಿಡಿಸುವಿಕೆ, ಭೂಮಿ ಖಾತೆ ಬಗ್ಗೆ, ಬಗರ್ ಹುಕುಂ ಮತ್ತಿತರ ಅರ್ಜಿಗಳನ್ನು ಇ-ಆಫೀಸ್‌ನಲ್ಲೇ ಸಲ್ಲಿಸಬಹುದು. ಅರ್ಜಿಯ ಸ್ಥಿತಿ, ಎಷ್ಟು ದಿನದಲ್ಲಿ ವಿಲೇವಾರಿಯಾಗಲಿದೆ ಎಂಬ ವಿವರ ದೊರೆಯುತ್ತದೆ. ವಿಳಂಬವಾದರೆ ಕಾರಣವೇನು, ಅರ್ಜಿ ಈಗ ಯಾರ ಬಳಿಯಿದೆ ಎಂಬ ವಿವರವೂ ಲಭ್ಯವಾಗುತ್ತಿದೆ.
- ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ ಬೆಳಗಾವಿ
ಸರ್ಕಾರದ ಆದೇಶದಂತೆ ಹುಕ್ಕೇರಿ ತಾಲೂಕಿನ ಕಂದಾಯ ಇಲಾಖೆಯಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದೆ. ಹೋಬಳಿಗಳಲ್ಲಿ ಸಲ್ಲಿಕೆಯಾದ ಅರ್ಜಿಗಳ ಅನಗತ್ಯ ವಿಳಂಬ ಇದರಿಂದ ದೂರವಾಗುತ್ತದೆ. ಇಡೀ ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ.