ಕತ್ತಲಲ್ಲೇ ನಡೆದ ಹುಕ್ಕೇರಿ ತಾಪಂ ಜಮಾಬಂದಿ

KannadaprabhaNewsNetwork |  
Published : Feb 01, 2024, 02:00 AM IST
31ಎಚ್‌ಯುಕೆ-1ಎಹುಕ್ಕೇರಿಯಲ್ಲಿ ಬುಧವಾರ ನಡೆದ ತಾಪಂ ಜಮಾಬಂದಿಯಲ್ಲಿ ಭಾಗಿಯಾದ ಬೆರಳಣಿಕೆ ಅಧಿಕಾರಿಗಳು | Kannada Prabha

ಸಾರಾಂಶ

ಗಂಭೀರತೆ ಕಳೆದುಕೊಂಡ ಸಭೆ. ಗಿಳಿಪಾಠ ಕೇಳಿಸಿಕೊಂಡ ಅಧಿಕಾರಿ, ಸಿಬ್ಬಂದಿ. ಹೀಗಾಗಿ ತಾಪಂ ಜಮಾಬಂದಿ ಕೇವಲ ಕಾಟಾಚಾರಕ್ಕೆ ನಡೆಯಿತು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಪ್ರಜಾಪ್ರಭುತ್ವದ ಎರಡನೇ ಸ್ಥರದ ಸರ್ಕಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಕ್ಕೇರಿ ತಾಲೂಕು ಪಂಚಾಯಿತಿಯು ಬುಧವಾರ ಏರ್ಪಡಿಸಿದ್ದ ಜಮಾಬಂದಿ ಕಾರ್ಯಕ್ರಮವು ಮಾದರಿಯಾಗುವ ಬದಲು ಮೂದಲಿಕೆಗೆ ಒಳಗಾಗಬೇಕಾಯಿತು.

ಹಲವು ಬಾರಿ ಮುಂದೂಡಿಕೆಯಾಗಿ ಕೊನೆಗೂ ನಿಗದಿಯಾಗಿದ್ದ ಹುಕ್ಕೇರಿ ತಾಲೂಕು ಪಂಚಾಯತಿಯ 2022-23ನೇ ಸಾಲಿನ ಜಮಾಬಂದಿ ಕಾರ್ಯಕ್ರಮವು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ, ತಾಪಂ ಆಡಳಿತಾಧಿಕಾರಿ ಸೇರಿದಂತೆ ತಾಲೂಕಿನ ಬಹುತೇಕ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಿಯಿಂದ ನೀರಸ ಎನಿಸಿತು.

ಕಾಟಾಚಾರಕ್ಕೆ ಎನ್ನುವಂತೆ ಕೆಲ ಇಲಾಖೆ ಅಧಿಕಾರಿಗಳು ತಮ್ಮ ಪ್ರತಿನಿಧಿಗಳನ್ನು ಕಳುಹಿಸುವ ಮೂಲಕ ಸಭೆಯ ಬಗ್ಗೆ ಅವರಿಗೆ ಗಂಭೀರತೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದರು. ಬಹುನಿರೀಕ್ಷಿತ ಈ ಜಮಾಬಂದಿ ಸಭೆಯಲ್ಲಿದ್ದ ಬೆರಳಣಿಕೆಯಷ್ಟು ಅಧಿಕಾರಿ-ಸಿಬ್ಬಂದಿಯಲ್ಲಿ ಉತ್ಸಾಹವೇ ಕಂಡು ಬರಲಿಲ್ಲ.

ಹುಕ್ಕೇರಿ ತಾಲೂಕು ಪಂಚಾಯಿತಿಯ 2022-23ನೇ ಸಾಲಿನ ಹಣಕಾಸಿನ ನಿರ್ವಹಣೆಯ ಮಹತ್ವದ ಲೆಕ್ಕಪತ್ರಕ್ಕೆ ಸಂಬಂಧಿಸಿದ ಜಮಾಬಂದಿ ಕಾರ್ಯಕ್ರಮವನ್ನು ತಾಪಂ ಅಧಿಕಾರಿ-ಸಿಬ್ಬಂದಿ ಹಗುರವಾಗಿ ಪರಿಗಣಿಸಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಬೇಕಾಯಿತು. ಸಭೆಗೆ ಆಗಮಿಸುವಂತೆ ವಿವಿಧ ಇಲಾಖೆಗಳನ್ನು ಸಮನ್ವಯ ಸಾಧಿಸುವಲ್ಲಿ ತಾಪಂ ಅಧಿಕಾರಿಗಳು ವಿಫಲರಾದರಾ? ಎಂಬ ಆರೋಪಗಳು ಕೇಳಿ ಬಂದವು.

ಸಭೆ ಆರಂಭವಾಗಿ ಐದು ನಿಮಿಷ ಆಗುವಷ್ಟರಲ್ಲಿಯೇ ಕರೆಂಟ್ ಕೈಕೊಟ್ಟಿತು. ಅರ್ಧ ಗಂಟೆಗೂ ಹೆಚ್ಚು ಕಾಲ ಧ್ವನಿ, ಬೆಳಕಿನ ಪರ್ಯಾಯ ವ್ಯವಸ್ಥೆ ಇಲ್ಲದೇ ಸಭೆ ಕತ್ತಲಲ್ಲೇ ನಡೆಯಿತು. ಇಡೀ ಸಭೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಪ್ಪೆ ಎನಿಸಿತು. ಇದ್ದ ಅಧಿಕಾರಿಗಳ ಪೈಕಿ ಕೆಲವರು ಆಗಾಗ ಹೊರ ಹೋಗಿ ಮೊಬೈಲ್‌ನಲ್ಲಿ ಸಂಭಾಷಣೆ ನಡೆಸುತ್ತಿರುವುದು ಸಾಮಾನ್ಯವಾಗಿತ್ತು.

ಸಹಾಯಕ ಲೆಕ್ಕಾಧಿಕಾರಿ ಆರ್.ಎನ್.ವಂಜೀರೆ ಅವರು ಸಭೆಯುದ್ದಕ್ಕೂ ಮುದ್ರಿಸಿಟ್ಟುಕೊಂಡಿದ್ದನ್ನು ಒಂದಕ್ಷರವೂ ಚಾಚೂತಪ್ಪದೇ ಕಂಠಪಾಠದಂತೆ ಓದಿದರು. ಇದಕ್ಕೆ ಸಭೆಯಲ್ಲಿದ್ದವರು ತಲೆದೂಗಿಸಿದರು. ಇದು ಗಿಳಿಪಾಠ ಕೇಳುತ್ತಿರುವ ಶಾಲಾ ಮಕ್ಕಳ ದೃಶ್ಯ ನೆನಪಿಸುವಂತಿತ್ತು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಯೋಜನಾಧಿಕಾರಿ ಪ್ರಶಾಂತ ಮುನ್ನೋಳಿ, ಪ್ರಭಾರಿ ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ, ನೀಲಕಂಠ ಕುಲಕರ್ಣಿ ಮತ್ತಿತರರು ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌