ವಿಜೃಂಭಣೆಯಿಂದ ಜರುಗಿದ ಹುಲಿಗೆಮ್ಮ ದೇವಿ ಮಹಾ ರಥೋತ್ಸವ

KannadaprabhaNewsNetwork |  
Published : May 12, 2026, 02:15 AM IST
ಶ್ರೀ ಹುಲಿಗೆಮ್ಮ ದೇವಸ್ಥಾನದ ಮಹಾ ರಥೋತ್ಸವ ಸೋಮವಾರ ಸಂಜೆ ವಿಜೃಂಭಣೆಯಿಂದ ಜರುಗಿತು. | Kannada Prabha

ಸಾರಾಂಶ

ಮುನಿರಾಬಾದ್ ಸಮೀಪದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನದ ಮಹಾ ರಥೋತ್ಸವ ಸೋಮವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ರಥೋತ್ಸವದಲ್ಲಿ 3 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.

ಮುನಿರಾಬಾದ್: ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನದ ಮಹಾ ರಥೋತ್ಸವ ಸೋಮವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ರಥೋತ್ಸವದಲ್ಲಿ 3 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು.

ರಥೋತ್ಸವದ ನಿಮಿತ್ತ ದೇವಸ್ಥಾನದ ಅರ್ಚಕರು ಅಮ್ಮನವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ದೇವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ಆನಂತರ ಉತ್ಸವ ಮೂರ್ತಿಯನ್ನು ತಂದು ಅರ್ಚಕರು ತೇರಿನಲ್ಲಿ ಇಡುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಭಕ್ತರು ಉಧೋ ಉಧೋ ಹುಲಿಗೆಮ್ಮ ತಾಯಿ ಉಧೋ ಎಂದು ಕೂಗಿದರು. ಅಮ್ಮನವರ ತೇರು ದೇವಸ್ಥಾನದಿಂದ ಮುದ್ದಮ್ಮನ ಕಟ್ಟೆ ವರೆಗೆ ಸಾಗುತ್ತಿರುವಾಗ ನೆರೆದಿದ್ದ ಲಕ್ಷಾಂತರ ಭಕ್ತರು ತೇರಿನತ್ತ ಉತ್ತತ್ತಿ, ಬಾಳೆಹಣ್ಣು ಎಸೆದರು. ಅಮ್ಮನವರು ತೇರು ಮುದ್ದಮ್ಮನ ಕಟ್ಟೆಯ ವರೆಗೂ ಹೋಗಿ ದೇವಸ್ಥಾನಕ್ಕೆ ಮರಳಿತು.

ರಥಾಂಗ ಹೋಮ: ರಥೋತ್ಸವ ಸುಸೂತ್ರವಾಗಿ ನಡೆಯಬೇಕೆಂದು ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಥಾಂಗ ಹೋಮ ನೆರವೇರಿಸಲಾಯಿತು.

ಜಾತ್ರೆ ಪ್ರಯುಕ್ತ ದೇವಸ್ಥಾನದ ರಾಜಬೀದಿಯು ತಳಿರು-ತೋರಣ ಹಾಗೂ ವಿದ್ಯುತ್ ದೀಪದ ಅಲಂಕಾರದಿಂದ ರಾರಾಜಿಸುತ್ತಿತ್ತು. ಇಡೀ ಹುಲಿಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಕಂಡುಬಂತು.

ಮಹಾ ರಥೋತ್ಸವದಲ್ಲಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ರಾವ್, ದೇವಸ್ಥಾನ ಸಮಿತಿ ಸದಸ್ಯರಾದ ಪಾಲಾಕ್ಷಪ್ಪ ಗುಂಗಾಡಿ, ಈರಣ್ಣ, ಶರಣಗೌಡ ಪಾಟೀಲ್, ವೆಂಕಟೇಶ್, ಶ್ರೀನಿವಾಸ ಬಾಬು ಉಪಸ್ಥಿತರಿದ್ದರು.

ಪ್ರಾಧಿಕಾರದಿಂದ ವ್ಯವಸ್ಥೆ: ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಪ್ರಾಧಿಕಾರದ ವತಿಯಿಂದ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಸ್ಥಾನದ ಸುತ್ತಮುತ್ತ 12 ಕಡೆಗಳಲ್ಲಿ ಶುದ್ಧ ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಹಾಗೂ ಪುರುಷರಿಗಾಗಿ ಪ್ರತ್ಯೇಕವಾಗಿ ತಲಾ 6 ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಭಕ್ತರ ಭದ್ರತೆಗಾಗಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 150 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ರಾವ್ ತಿಳಿಸಿದರು.

ಮಹಾದಾಸೋಹ: ಭಕ್ತರಿಗಾಗಿ ಮಹಾದಾಸೋಹ ಪ್ರಾರಂಭಿಸಲಾಗಿದೆ. ಇದು ಜೂ. 10ರ ವರೆಗೆ ನಡೆಯಲಿದೆ. ಮಹಾರಥೋತ್ಸವ ದಿನ 50 ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಸೇವಿಸಿದ್ದಾರೆ. ತಿಂಗಳು ಪೂರ್ತಿ ನಡೆಯುವ ಮಹಾರಥೋತ್ಸವದಲ್ಲಿ 10 ಲಕ್ಷ ಜನ ಭಕ್ತರು ಪ್ರಸಾದ ಸ್ವೀಕರಿಸುವ ನಿರೀಕ್ಷೆ ಇದೆ. ಪ್ರಾಣಿ ಬಲಿಯನ್ನು ಕೊಪ್ಪಳ ಜಿಲ್ಲಾಡಳಿತ ಸಂಪೂರ್ಣ ನಿಷೇಧಿಸಿದೆ. ಪ್ರಾಣಿ ಬಲಿ ವಿರೋಧ ಸಂಘಟನೆಯ ದಯಾನಂದ ಸ್ವಾಮೀಜಿ ದೇವಸ್ಥಾನದ ಸುತ್ತಮುತ್ತ ತಿರುಗಿ ಪ್ರಾಣಿ ಬಲಿ ಮಾಡದಂತೆ ಭಕ್ತರಿಗೆ ಮನವರಿಕೆ ಮಾಡಿದರು.

ಉಚಿತ ಬಸ್ ಸೇವೆ: ಇದಲ್ಲದೆ ದೇವಸ್ಥಾನಕ್ಕೆ ಜಾತ್ರಾ ಸಮಯದಲ್ಲಿ ಅಮ್ಮನ ದರ್ಶನ ಮಾಡಲು ಬರುವ ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹುಲಿಗಿ ತಾತ್ಕಾಲಿಕ ಬಸ್ ನಿಲ್ದಾಣದಿಂದ ದೇವಸ್ಥಾನದ ವರೆಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ 30ಕ್ಕೂ ಅಧಿಕ ಮಿನಿ ಬಸ್ಸುಗಳನ್ನು ನಿಯೋಜಿಸಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ರಾವ್ ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ.

ಹುಲಿಗಿಗೆ ವಿಶೇಷ ಬಸ್ಸು: ಹುಲಿಗೆಮ್ಮ ದೇವಿ ಜಾತ್ರೆ ನಿಮಿತ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಮ್ಮನವರ ದರ್ಶನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಕೊಪ್ಪಳ, ಗಂಗಾವತಿ ಹಾಗೂ ಹೊಸಪೇಟೆಯಿಂದ ಹುಲಿಗಿ ಗ್ರಾಮಕ್ಕೆ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ.

ಸುಗಮ ವಾಹನ ಸಂಚಾರ, ಭಕ್ತರ ಸುರಕ್ಷತೆ ಹಾಗೂ ಭದ್ರತೆಗಾಗಿ ಪೊಲೀಸ್ ಇಲಾಖೆ ವತಿಯಿಂದ ವ್ಯಾಪಕ ಬಂದೋಬಸ್ತ್‌ ಮಾಡಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರ್ಪಕವಾಗಿ ಬಸ್ ಸಂಚಾರಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕುಡಿವ ನೀರಿನ ಸಮಸ್ಯೆ