ಕೊಪ್ಪಳ: ಭಾರತ ಹುಣ್ಣಿಮೆ ನಿಮಿತ್ತ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಅಪಾರ ಸಂಖ್ಯೆಯ ಭಕ್ತರು ಹರಿದು ಬಂದಿದ್ದರಿಂದ ರಾತ್ರಿಪೂರ್ತಿ ಸುಮಾರು ಒಂದು ಕಿಮೀ ರಸ್ತೆಯಲ್ಲಿ ವಾಸ್ತವ್ಯ ಮಾಡಿದ್ದು ಕಂಡು ಬಂತು.
ಭಕ್ತರ ಸಂಖ್ಯೆ ಹೆಚ್ಚಳ
ವರ್ಷದಿಂದ ವರ್ಷಕ್ಕೆ ಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಬೆಳೆಯುತ್ತಲೇ ಇದೆ. ಹುಣ್ಣಿಮೆ ಮತ್ತು ಭಾನುವಾರ, ಅದರಲ್ಲೂ ಭಾರತ ಹುಣ್ಣಿಮೆ ದಿನವಾಗಿದ್ದರಿಂದ ಭಾನುವಾರ ಲಕ್ಷಾಂತರ ಭಕ್ತರು ಆಗಮಿಸಿದ್ದರಿಂದ ಹಿಂದಿನ ಎಲ್ಲ ಹುಣ್ಣಿಮೆಗಿಂತಲೂ ಭಕ್ತರ ಸಂಖ್ಯೆ ಅಧಿಕವಾಗಿತ್ತು ಎಂದು ಹೇಳಲಾಗುತ್ತಿದೆ.ದೇವಸ್ಥಾನ ಸಮಿತಿಯ ಆಡಳಿತಾಧಿಕಾರಿ ಎಂ.ಎಚ್. ಪ್ರಕಾಶ ಅವರ ಪ್ರಕಾರ ಐದಾರು ಲಕ್ಷ ಭಕ್ತರು ಆಗಮಿಸಿದ್ದರು. ಇಡೀ ದಿನದ ಲೆಕ್ಕಾಚಾರ ಮತ್ತು ತಡರಾತ್ರಿ ಹುಣ್ಣಿಮೆಯ ವಾಸ್ತವ್ಯಕ್ಕೆ ಬಂದಿರುವ ಭಕ್ತರು ಸೇರಿದಂತೆ 6 ರಿಂದ 8 ಲಕ್ಷ ಭಕ್ತರು ಬಂದಿರಬಹುದು ಎಂದು ಹೇಳಲಾಗುತ್ತಿದೆ.
ಸಂಜೆಯಾಗುತ್ತಿದ್ದಂತೆ ದೇವಾಲಯದ ಬಾಗಿಲು ಹಾಕಲಾಗುತ್ತದೆ. ಹೀಗಾಗಿ, ತಡವಾಗಿ ಬಂದಿದ್ದ ಭಕ್ತರು ಅಲ್ಲಿಯೇ ವಾಸ್ತವ್ಯ ಮಾಡಬೇಕಾಯಿತು. ವಾಸ್ತವ್ಯಕ್ಕೆ ಇರುವ ಶೆಡ್, ರೂಮ್ ಸೇರಿದಂತೆ ಎಲ್ಲವೂ ಫುಲ್ ಆಗಿದ್ದರಿಂದ ಬೇರೆ ಪರ್ಯಾಯ ಅವಕಾಶ ಇಲ್ಲದಂತಾಗಿದ್ದರಿಂದ ಭಕ್ತರು ರಸ್ತೆಯ ಬೀದಿಯಲ್ಲಿಯೇ ಮಲಗಿರುವುದು ಕಂಡು ಬಂತು.ಮೂಲ ಸೌಕರ್ಯಕ್ಕೆ ಆಗ್ರಹ
ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಹುಲಿಗೆಮ್ಮ ದೇವಸ್ಥಾನ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.ಲಕ್ಷ ಲಕ್ಷ ಭಕ್ತರಿಗೆ ಶೌಚಾಲಯ ವ್ಯವಸ್ಥೆ ಇಲ್ಲದಿರುವುದರಿಂದ ಭಕ್ತರು ಬಯಲಲ್ಲಿಯೇ ಶೌಚ ಮಾಡುವಂತಾಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರವಾಯಿತು. ಹುಣ್ಣಿಮೆಯ ದಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಎನ್ನುವುದು ಗೊತ್ತಿದ್ದರೂ ಮೊಬೈಲ್ ಶೌಚಾಲಯ ಸೇರಿದಂತೆ ವಿವಿಧ ರೀತಿಯ ಆತ್ಯಾಧುನಿಕ ವ್ಯವಸ್ಥೆ ಮಾಡದೆ ಇರುವುದು ಕಟು ಟೀಕೆಗೆ ಗುರಿಯಾಯಿತು.
ಶೌಚ ಮತ್ತು ಸ್ನಾನಕ್ಕೆ ದೊಡ್ಡ ಸಮಸ್ಯೆ. ಈ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದರೆ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತದೆ ಎನ್ನುತ್ತಾರೆ ಭಕ್ತರು.