ಮನುಷ್ಯನ ಸುಖ, ಸಂತೋಷ ಪ್ರಕೃತಿಯಲ್ಲಿ ಅಡಕ

KannadaprabhaNewsNetwork |  
Published : Jul 06, 2025, 01:48 AM IST
5ಕೆಪಿಎಲ್23 ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ | Kannada Prabha

ಸಾರಾಂಶ

ಪರಿಸರ ರಕ್ಷಣೆಯಲ್ಲಿ ಯಾರಲ್ಲಿಯೂ ನಿಷ್ಕಾಳಜಿ ಇರುವುದಿಲ್ಲ. ಆದರೆ, ಸರಿಯಾಗಿ ಪರಿಸರ ರಕ್ಷಣೆಯಾಗುತ್ತಿಲ್ಲ. ನಿತ್ಯವು ಪರಿಸರ ನಾಶವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಮನುಷ್ಯನ ಆಸೆಗಳು ಹೆಚ್ಚಾಗುತ್ತಿರುವುದು.

ಕೊಪ್ಪಳ:

ಮನುಷ್ಯನ ಸುಖ, ಸಂತೋಷ ಪ್ರಕೃತಿಯಲ್ಲಿ ಅಡಗಿದ್ದು, ಪರಿಸರ ರಕ್ಷಣೆಗೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಹೇಳಿದರು.

ನಗರದ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಗವಿಸಿದ್ಧೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪರಿಸರ ರಕ್ಷಣೆಯಲ್ಲಿ ಯಾರಲ್ಲಿಯೂ ನಿಷ್ಕಾಳಜಿ ಇರುವುದಿಲ್ಲ. ಆದರೆ, ಸರಿಯಾಗಿ ಪರಿಸರ ರಕ್ಷಣೆಯಾಗುತ್ತಿಲ್ಲ. ನಿತ್ಯವು ಪರಿಸರ ನಾಶವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಮನುಷ್ಯನ ಆಸೆಗಳು ಹೆಚ್ಚಾಗುತ್ತಿರುವುದು ಎಂದು ಹೇಳಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡುರ ಮಾತನಾಡಿ, ಒಂದು ಗಿಡ ನೆಟ್ಟರೆ ಮಾತ್ರ ಪರಿಸರ ರಕ್ಷಣೆಯಾಗುವುದಿಲ್ಲ. ಅದರ ಪಾಲನೆ ಮತ್ತು ಪೋಷಣೆಯು ಸಹ ನಮ್ಮ ಕರ್ತವ್ಯವಾಗಿದೆ. ಪ್ರತಿ ಮನೆಯ ಅಡುಗೆ ಮನೆಯಿಂದ ಪರಿಸರ ಸಂರಕ್ಷಣೆಯಾಗಬೇಕು. ಅದಕ್ಕಾಗಿ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ, ಕಸ ವಿಲೇವಾರಿ ವಾಹನಗಳಿಗೆ ನೀಡಬೇಕು. ಪ್ಲಾಸ್ಟಿಕ್ ವಸ್ತು ಬಿಸಾಡದೆ ಅವುಗಳನ್ನು ಮರು ಬಳಕೆ ಮಾಡಿಕೊಳ್ಳಬೇಕು ಎಂದರು.

ಕೊಪ್ಪಳ ಪರಿಸರ ಅಧಿಕಾರಿ ವೈ.ಎಸ್. ಹರಿಶಂಕರ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿವುಳ್ಳ ಚಿತ್ರಕಲೆ, ಪ್ರಬಂಧ ಸ್ಪರ್ಧೆ ಮತ್ತು ಪರಿಸರ ಗೀತೆ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು ಎಂದರು. ಪ್ಲಾಸ್ಟಿಕ್‌ ಬಳಕೆ ತಡೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಗಿಣಿಗೇರಾದ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯಿಂದ ಬಟ್ಟೆ ಕೈಚಿಲ ಸಿದ್ಧಪಡಿಸಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಕೊಪ್ಪಳದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಡಯಟ್ ಮತ್ತು ನೋಡಲ್ ಅಧಿಕಾರಿ ಗವಿಸಿದ್ದೇಶ್ವರಸ್ವಾಮಿ ರಾಚಯ್ಯ ಬೆಣಕಲ್ಲಮಠ ವಿಶೇಷ ಉಪನ್ಯಾಸ ನೀಡಿದರು. ವಿಜಯನಗರದ ಹಿರಿಯ ಪರಿಸರ ಅಧಿಕಾರಿ ಬಿ.ಎಸ್. ಮುರಳೀಧರ, ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಚನ್ನಬಸವ ಎ. ಮಾತನಾಡಿದರು.

ಬಹುಮಾನ ವಿತರಣೆ:

ಚಿತ್ರಕಲೆ, ಪ್ರಬಂಧ ಸ್ಪರ್ಧೆ ಮತ್ತು ಪರಿಸರ ಗೀತೆ ಗಾಯನ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮ ಪ್ರಾರಂಭಕ್ಕೂ ಪೂರ್ವದಲ್ಲಿ ಗವಿಸಿದ್ದೇಶ್ವರ ಕಾಲೇಜು ಆವರಣದಲ್ಲಿ ಸಸಿ ನೆಡಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಪರಿಸರ ಅಧಿಕಾರಿ ಅಮರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಪ್ಪಳ ಪ್ರಾದೇಶಿಕ ಕಚೇರಿ ಸಿಬ್ಬಂದಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV