ಮನುಷ್ಯನ ಸ್ವಾರ್ಥ, ಲಾಲಸೆಯಿಂದ ಪರಿಸರದ ಮೇಲೆ ಹಾನಿ

KannadaprabhaNewsNetwork |  
Published : Jun 27, 2025, 12:48 AM IST
ಚಿತ್ರದುರ್ಗ ನಾಲ್ಕನೇ ಪುಟದ ಲೀಡ್     | Kannada Prabha

ಸಾರಾಂಶ

ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮನುಷ್ಯನ ಸ್ವಾರ್ಥ ಹಾಗೂ ಅತಿ ಆಸೆಯಿಂದ ಪರಿಸರದ ಮೇಲೆ ಹಾನಿಯಾಗಿದೆ. ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕರ, ಇಂತಹ ಪ್ಲಾಸ್ಟಿಕ್ ಬಳಕೆ ಬೇಡವೇ ಬೇಡ. ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆಯನ್ನು ತಿರಸ್ಕರಿಸಬೇಕು ಎಂದು ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿ ರಮೇಶ್ ನಾಯ್ಕ್ ಕರೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಬಳಿಯ ಕ್ರೀಡಾ ಭವನದ ಸಭಾಂಗಣದಲ್ಲಿ, ಗುರುವಾರ ವಿಶ್ವ ಪರಿಸರ ದಿನಾಚರಣೆ ಘೋಷವಾಕ್ಯ ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು ಕುರಿತು, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಚಿತ್ರಕಲೆ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭೂಮಿಯ ಮೇಲೆ ಸಕಲ ಜೀವರಾಶಿಗಳಿಗೆ ಗಾಳಿ, ಬೆಳಕು, ನೀರು ಸಮಾನವಾಗಿ ದೊರಕಬೇಕು. ಶುದ್ದವಾದ ಗಾಳಿ,ಬೆಳಕು, ನೀರು ಮಲಿನಗೊಂಡಿವೆ. ಇದಕ್ಕೆ ಮುಖ್ಯ ಕಾರಣ ಪೆಟ್ರೋಲಿಯಂ ಉತ್ಪನ್ನಗಳ ದಹನ ಹಾಗೂ ಸಿಂಥಟಿಕ್ ಪ್ಲಾಸ್ಟಿಕ್ ಬಳಕೆ ಆಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಮಿತವಾದ ಬಳಕೆ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ಪರಿಸರ ರಕ್ಷಣೆಗೆ ಎಲ್ಲರೂ ಒತ್ತು ನೀಡುವಂತೆ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ, ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪರಿಸರ ರಕ್ಷಣೆ ಹಾಗೂ ಸ್ವಚ್ಛತೆಯ ಪರಿಕಲ್ಪನೆಯನ್ನು ಮೂಡಿಸಲಾಗುತ್ತಿದೆ. ಗಿಡ ಮರಗಳು ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳು ತಪ್ಪದೇ ಗಿಡ ಮರಗಳಿಗೆ ನೀರುಣಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ನಗರಸಭೆ ಪರಿಸರ ಅಧಿಕಾರಿ ಜಾಫರ್ ಮಾತನಾಡಿ, ಪ್ಲಾಸ್ಟಿಕ್ ದಹನದಿಂದ ಕಾರ್ಸೋಜನಿಕ್ ಅನಿಲ ಪರಿಸರ ಸೇರುತ್ತದೆ. ಇದು ಅಪಾಯಾರಿಯಾಗಿದ್ದು ಮನುಷ್ಯರಲ್ಲಿ ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತದೆ. ಪ್ರತಿಯೊಬ್ಬರು ಮನೆಯಲ್ಲಿ ಹಸಿ ಹಾಗೂ ಒಣ ಕಸಗಳನ್ನು ಬೇರ್ಪಡಿಸಿ ಪೌರ ಕಾರ್ಮಿಕರಿಗೆ ನೀಡಬೇಕು ಎಂದು ಹೇಳಿದರು.

ಕ್ಷೇತ್ರ ಸಂಪನ್ಮೂಲಾಧಿಕಾರಿ ಸಂಪತ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆಗೆ ಮಿತಿ ಏರಿಕೊಳ್ಳಬೇಕು. ಮನೆಯಿಂದ ತಂದ ಕ್ಯಾರಿಯರ್‌ಗಳಿಂದ ಹೋಟೆಲ್ ಅಥವಾ ಪಾನಿಪುರಿ ಅಂಗಡಿಗಳಿಂದ ಪಾರ್ಸಲ್ ತೆಗೆದುಕೊಂಡು ಹೋಗುವುದನ್ನು ಅಭ್ಯಾಸ ಮಾಡಿಕೊಂಡರೆ, ಅನಗತ್ಯವಾಗಿ ಪ್ಲಾಸ್ಟಿಕ್ ಪರಿಸರ ಸೇರುವುದನ್ನು ತಡೆಯಬಹುದು ಎಂದರು.

ಜಿಲ್ಲಾ ಪರಿಸರ ಅಧಿಕಾರಿ ಆಸಿಫ್ ಖಾನ್ ಮಾತನಾಡಿ, ಪ್ಲಾಸ್ಟಿಕ್ ಉತ್ಪನ್ನಗಳನ್ನು ಕಡಿಮೆ ಬಳಸುವುದು, ಮರು ಬಳಸುವುದು, ಪುನರ್‌ ಬಳಸುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟಬಹುದು ಎಂದು ಹೇಳಿದರು.

ಈ ಬಾರಿಯ ಪರಿಸರ ದಿನಾಚರಣೆಯ ಕುರಿತು ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ನಗರದ 33 ವಿವಿಧ ಶಾಲೆಗಳಿಂದ ಆಗಮಿಸಿದ 278ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. 8, 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಬಹುಮಾನಗಳನ್ನು ವಿತರಿಸಲಾಯಿತು. 8ನೇ ತರಗತಿ ವಿಭಾಗದಲ್ಲಿ ಬಾಪೂಜಿ ಪ್ರೌಢಶಾಲೆ ವಿದ್ಯಾರ್ಥಿ ಶುಭಶ್ರೀ.ಎಲ್ ಸಮಾಧಾನಕರ, ಜ್ಞಾನ ಭಾರತಿ ಶಾಲೆ ಪೂರ್ವಿ.ಕೆ ತೃತೀಯ, ಪಾರ್ಶ್ವನಾಥ ಶಾಲೆ ವಿನೋದ್.ಎಂ. ದ್ವೀತಿಯ, ಸೆಂಟ್ ಜೋಸೆಫ್ ಶಾಲೆಯ ಪ್ರತಿಭಾ.ಪಿ ಪ್ರಥಮ ಬಹುಮಾನ ಗಳಿಸಿದರು. 9ನೇ ತರಗತಿ ವಿಭಾಗದಲ್ಲಿ ಕೋಟೆ ಪ್ರೌಢಶಾಲೆಯ ಜೀವನ್.ಪಿ ಸಮಾಧಾಕರ, ವಿದ್ಯಾವಿಕಾಸ ಶಾಲೆ ಸಿಂಧೂರ.ಕೆ.ವಿ ತೃತೀಯ, ಎಸ್‌ಜೆಎಂ ಶಾಲೆಯ ಅನ್ವಿತಾ ಕೆ.ವಿ.ದ್ವೀತಿಯ, ಕೆ.ಕೆ.ನ್ಯಾಷಿನಲ್ ಶಾಲೆ ತೇಜಸ್ವಿನಿ.ಟಿ ಪ್ರಥಮ ಬಹುಮಾನ ಪಡೆದರು.

10ನೇ ತರಗತಿ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆಯ ನಂದಿನಿ.ಎಸ್ ಸಮಾಧಾನಕರ, ಎಸ್ಆರ್‌ಎಸ್ ಶಾಲೆಯ ಕಿಶೋರ್.ವಿ.ಎಸ್ ತೃತೀಯ, ರಿಜನಲ್ ಇಂಗ್ಲೀಷ್ ಶಾಲೆ ಹುರಿಯಾ ಅರ್ಫನ್ ದ್ವೀತಿಯ ಬಹುಮಾನ, ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಪ್ರಿಯಾಂಕ.ಎಂ ಪ್ರಥಮ ಬಹುಮಾನಕ್ಕೆ ಭಾಜನಾರಾದರು. ಸಭೆಯಲ್ಲಿ ಪರಿಸರ ಸ್ನೇಹಿ ಬಟ್ಟೆ ಬ್ಯಾಗುಗಳನ್ನು ಬಿಡುಗಡೆ ಗೊಳಿಸಲಾಯಿತು. ಉಪ ಪರಿಸರಾಧಿಕಾರಿ ರಾಜೇಶ್, ಕಲಾ ಚೈತನ್ಯ ಸಂಸ್ಥೆಯ ನಾಗರಾಜ ಬೇಂದ್ರೆ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ