ಸರ್ಕಾರಿ ನೌಕರರಿಗೆ ಮಾನವೀಯತೆಯೂ ಅಗತ್ಯ: ಸಂಸದ ಡಾ.ಸಿ.ಎನ್. ಮಂಜುನಾಥ್

KannadaprabhaNewsNetwork |  
Published : Dec 28, 2025, 02:45 AM IST
ಪೊಟೋ೨೭ಸಿಪಿಟಿ೧: ನಗರದ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚನ್ನಪಟ್ಟಣ ಶಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಬಡತನವನ್ನು ಅರಿತು ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ನಾನು ಜಾರಿಗೆ ತಂದೆ. ಅನೇಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬಡ ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮನೆ ಬದಲಾವಣೆಯಂತಹ ಕಾರಣಗಳಿಂದ ದಾಖಲೆಗಳು ಕಳೆದುಹೋಗಿರುವ ಬಡವರಿಗೂ ಸಹ ನ್ಯಾಯ ಸಿಗಬೇಕು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಸರ್ಕಾರಿ ನೌಕರರು ಕೇವಲ ರೂಲ್ ಬುಕ್ ನೋಡಿ ಕೆಲಸ ಮಾಡುವುದಲ್ಲ, ಮಾನವೀಯತೆ ಎಂಬ ಪುಸ್ತಕವನ್ನೂ ನೋಡಿ ಕಾರ್ಯನಿರ್ವಹಿಸಬೇಕು ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ನಗರದ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚನ್ನಪಟ್ಟಣ ಶಾಖೆ ಆಯೋಜಿಸಿದ್ದ ಸಂಘದ ಸರ್ವ ಸದಸ್ಯರ ಸಭೆ, ಸೇವಾ ಪುರಸ್ಕಾರ ಹಾಗೂ ಒತ್ತಡ ನಿವಾರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಕ್ಷ್ಮಣನ ಪ್ರಾಣ ಉಳಿಸಲು ಸಂಜೀವಿನಿ ಪರ್ವತ ತರಲು ಆಂಜನೇಯ ಹೋಗಿದಾಗ, ಯಾವ ಗಿಡ ಬೇಕೆಂದು ತಿಳಿಯದ ಕಾರಣ ಸಂಪೂರ್ಣ ಪರ್ವತವನ್ನೇ ಹೊತ್ತು ತಂದನು. ಅಲ್ಲಿ ನಿಯಮಕ್ಕಿಂತಲೂ ಮಾನವೀಯತೆಯೇ ಮುಖ್ಯವಾಯಿತು. ಅದೇ ರೀತಿ, ಸರ್ಕಾರಿ ವ್ಯವಸ್ಥೆಯಲ್ಲಿಯೂ ಎರಡು ಪುಸ್ತಕಗಳಿವೆ. ಒಂದು ರೂಲ್ ಬುಕ್ ಮತ್ತು ಇನ್ನೊಂದು ಮಾನವೀಯತೆ ಪುಸ್ತಕ. ಅಧಿಕಾರಿಗಳು ಕೇವಲ ನಿಯಮಗಳ ಚೌಕಟ್ಟಿಗೆ ಸೀಮಿತರಾಗದೇ, ಮಾನವೀಯತೆಯ ನೆಲೆಯಲ್ಲಿ ಕೆಲಸ ಮಾಡಿದಾಗ ಮಾತ್ರ ಜನಸಾಮಾನ್ಯರಿಗೆ ನಿಜವಾದ ನ್ಯಾಯ ಸಿಗುತ್ತದೆ ಎಂದು ತಿಳಿಸಿದರು.

ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಬಡತನವನ್ನು ಅರಿತು ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ನಾನು ಜಾರಿಗೆ ತಂದೆ. ಅನೇಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬಡ ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮನೆ ಬದಲಾವಣೆಯಂತಹ ಕಾರಣಗಳಿಂದ ದಾಖಲೆಗಳು ಕಳೆದುಹೋಗಿರುವ ಬಡವರಿಗೂ ಸಹ ನ್ಯಾಯ ಸಿಗಬೇಕು. ಇಂತಹ ಸಂದರ್ಭಗಳಲ್ಲಿ ಮಾನವೀಯ ದೃಷ್ಟಿಕೋನ ಅತ್ಯಂತ ಅಗತ್ಯವಿದೆ ಎಂದರು.

ಭಾರತ ದೇಶವು ಇನ್ನು ಹೆಚ್ಚಿನ ಅಭಿವೃದ್ಧಿ ಹೊಂದಬೇಕಾದರೆ, ಅದು ಕೇವಲ ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ. ರಾಷ್ಟ್ರದ ಪ್ರತಿಯೊಬ್ಬ ಸರ್ಕಾರಿ ನೌಕರರು ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯೊಂದಿಗೆ ಕೆಲಸ ಮಾಡಿದಾಗ ಮಾತ್ರ ಸಾಧ್ಯ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ ಬಹಳ ಮುಖ್ಯ. ವ್ಯವಸ್ಥೆಯ ಬಹುದೊಡ್ಡ ಪಿಲ್ಲರ್ ಸರ್ಕಾರಿ ನೌಕರರು. ಸರ್ಕಾರಿ ನೌಕರರು ದೇಶದ ಕಾರ್ಯಾಂಗದ ನಿಜವಾದ ಶಕ್ತಿ, ಸಮಾಜ ಕಟ್ಟಲು ಹಾಗೂ ದೇಶ ಅಭಿವೃದ್ಧಿಯಾಗಲು ನಿಮ್ಮ ಶ್ರಮ ಅಪಾರವಾಗಿದೆ. ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಜನಪ್ರತಿನಿಧಿಗಳಿಗೂ ಗೌರವ ಬರುತ್ತದೆ ಎಂದರು.

ಸರ್ಕಾರಗಳು ಯಾವುದೇ ಯೋಜನೆ ರೂಪಿಸಬಹುದು. ಆದರೆ, ಅವುಗಳ ಅನುಷ್ಠಾನದಲ್ಲಿ ನೌಕರರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ನೀವು ನಿಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ನಿಮ್ಮ ಆರೋಗ್ಯ ಉತ್ತಮವಾಗಿದ್ದರೆ, ಸಮಾಜದ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದರು.

ಪ್ರಸುತ ಶೇ.೬೦ರಷ್ಟು ಆನಾರೋಗ್ಯ ಸಮಸ್ಯೆಗಳು ಬದಲಾದ ಜೀವನ ಶೈಲಿ ಹಾಗೂ ಒತ್ತಡದಿಂದ ಆಗುತ್ತಿದೆ. ಎಲ್ಲ ಕಾಯಿಲೆಗಳ ಜೊತೆ ಒಂಟಿತನ ಹಾಗೂ ಮೊಬೈಲ್ ಗೀಳು ಸಹ ಕಾಯಿಲೆಯಾಗಿ ಕಾಡುತ್ತಿದೆ. ನಾಲಿಗೆಗೆ ಗಾಯವಾದರೆ ವಾಸಿಯಾಗುತ್ತದೆ. ಆದರೆ, ನಾಲಿಗೆಯಿಂದ ಗಾಯವಾದರೆ ಅದು ವಾಸಿಯಾಗುವುದಿಲ್ಲ. ಒತ್ತಡ ಕಡಿಮೆಯಾಗಲು ಬೇರೊಬ್ಬರ ಜೊತೆ ಮಾತನಾಡಬೇಕೆ ವಿನಃ ಬೇರೊಬ್ಬರ ವಿಚಾರ ಮಾತನಾಡಬಾರದು. ಹೊಟ್ಟೆಗೆ ವಿಷ ಬಿದ್ದರೆ ಮನುಷ್ಯ ಸಾಯುತ್ತಾನೆ. ಕಿವಿಯಲ್ಲಿ ಹಾಕುವ ವಿಷ ಸಮಾಜವನ್ನು ಸಾಯಿಸುತ್ತದೆ ಎಂದರು.

ಕರ್ತವ್ಯದಲ್ಲಿ ಒತ್ತಡ ನಿವಾರಣೆ ಎಂಬ ವಿಚಾರದ ಬಗ್ಗೆ ಸುಬ್ರಮಣ್ಯ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ವಿವಿಧ ಇಲಾಖೆಗಳ ನೌಕರರಿಗೆ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಾರ್ಷಿಕ ಮಹಾಸಭೆ ನಡೆಸಿ, ಸಂಘದ ಲೆಕ್ಕಪತ್ರ ಮಂಡಿಸಲಾಯಿತು.

ಕಾರ್ಯಕ್ರಮದಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ತಾಲೂಕು ಅಧ್ಯಕ್ಷ ಕೆ.ಸುಧೀಂದ್ರ, ಜಿಲ್ಲಾ ಕಾರ್ಯದರ್ಶಿ ಶಿವಸ್ವಾಮಿ, ತಾಲೂಕು ಖಜಾಂಚಿ ಚಿಕ್ಕಚನ್ನೇಗೌಡ, ಕಾರ್ಯದರ್ಶಿ ಪ್ರಸಾದ್, ರಾಜ್ಯ ಪರಿಷತ್ ಸದಸ್ಯ ವಿನೋದ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ರಾಮಣ್ಣ, ಪದಾಧಿಕಾರಿಗಳಾದ ನಾಗೇಂದ್ರ, ಶಿವಕುಮಾರ್, ರಾಮು ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

4000 ಭಕ್ತರ ‘ಅಷ್ಟಾಂಗ ಸಂಹಿತೆ’ ಪಠಣ: 2 ದಾಖಲೆ
ವಿಶ್ವಶಾಂತಿ ಆಶಯವೇ ಲಿಂಗತತ್ವ ದರ್ಶನ