ಚನ್ನಪಟ್ಟಣ: ಆಧುನಿಕತೆ ಹೆಸರಿನಲ್ಲಿ ಮರಗಳನ್ನು ಕಡಿದು ನಾಶ ಮಾಡುತ್ತಿದ್ದು, ಇದರಿಂದ ಪರಿಸರದ ಮೇಲಿನ ಸಮತೋಲನ ಹಾಳಾಗುತ್ತಿದೆ. ಅರಣ್ಯ ನಾಶವಾದಲ್ಲಿ ಮುಂದೆ ಮನುಕುಲದ ನಾಶ ನಿಶ್ಚಿತ ಎಂದು ವಲಯ ಅರಣ್ಯಾಧಿಕಾರಿ ಮಲ್ಲೇಶ್ ತಿಳಿಸಿದರು.
ಪ್ರಕೃತಿಯ ಸಮತೋಲನಕ್ಕೆ ಪರಿಸರದಲ್ಲಿ ಶೇ. ೩೫ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ಆಧುನಿಕತೆ ಹೆಸರಲ್ಲಿ ಕಾಡನ್ನು ನಾಶ ಮಾಡುತ್ತಿದ್ದು, ಇಂದು ಕಾಡಿನ ಪ್ರಮಾಣ ಶೇ.೨೯ರಷ್ಟಾಗಿದೆ. ಈ ನಿಟ್ಟಿನಲ್ಲಿ ಪರಿಸರದ ಸಮತೋಲನ ಕಾಪಾಡಲು ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪೋಷಿಸಬೇಕು. ನಮಗೆ ಗಾಳಿ, ನೀರು ಎಲ್ಲವೂ ಮರಗಳಿಂದಲೇ ಸಿಗುತ್ತದೆ. ಪ್ರತಿಯೊಬ್ಬರು ಮರಗಳನ್ನು ಬೆಳೆಸಿ ಕಾಡು ರಕ್ಷಿಸಬೇಕು ಎಂದರು.
ಮ್ಯಾರಾಥಾನ್‌ಗೆ ಬಮೂಲ್ ಮತ್ತು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಪರಿಸರ ರಕ್ಷಣೆಗೂ ನೀಡಬೇಕು. ಈ ನಿಟ್ಟಿನಲ್ಲಿ ಮರ ಕಡಿದರೆ ಸಸಿ ನೆಟ್ಟು ಬೆಳೆಸುವ ಮನೋಭಾವ ಪ್ರತಿಯೊಬ್ಬರ ಮೇಲಿದೆ. ಈ ನಿಟ್ಟಿನಲ್ಲಿ ರಮೇಶ್‌ಗೌಡರು ನೀಡಿರುವ ಹಸಿರಿದ್ದರೆ ಉಸಿರು ಆಂದೋಲನ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಿ ಕೊಡುವುದಾಗಿದೆ. ಈ ಆಂದೋಲನಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ, ಉತ್ತಮ ಪರಿಸರ ನಿರ್ಮಾಣ ಮಾಡುವ ಜೊತೆಗೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಗಿಡಮರಗಳನ್ನು ನೆಟ್ಟು ಪೋಷಿಸುವ ಜೊತೆಗೆ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲಾ ಸಂಕಲ್ಪ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮನೆಗೊಂದು ಮರ, ದೇಶಕ್ಕೆ ವರ ಎಂಬ ಘೋಷ ವಾಕ್ಯ ನಮ್ಮೆಲ್ಲರ ಸಂಕಲ್ಪವಾಗಬೇಕು ಎಂದರು.
ಪೊಟೋ೨೨ಸಿಪಿಟಿ೨: ಚನ್ನಪಟ್ಟಣದಲ್ಲಿ ನಮ್ಮ ನಡಿಗೆ-ಹಸಿರಿನ ಕಡೆಗೆ ಅಭಿಯಾನ ನಡೆಯಿತು.