ಎಲ್ಲ ಧರ್ಮಗಳಿಗಿಂತಲೂ ಮಾನವ ಧರ್ಮವೇ ದೊಡ್ಡದು: ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ

KannadaprabhaNewsNetwork |  
Published : Nov 01, 2025, 01:45 AM IST
31ಕೆಎಂಎನ್‌ಡಿ17,18 | Kannada Prabha

ಸಾರಾಂಶ

ನಿಸ್ವಾರ್ಥದ ಬದುಕಿನಲ್ಲಿ ತೃಪ್ತಿ, ನೆಮ್ಮದಿ ಇರುತ್ತದೆ. ಯಾವುದೇ ನಿರೀಕ್ಷೆಗಳಿಲ್ಲದೆ ಸಮಾಜಕ್ಕೆ, ದುರ್ಬಲರಿಗೆ, ಬಡವರಿಗೆ, ಅಶಕ್ತರಿಗೆ ಸೇವೆ ಸಲ್ಲಿಸಬೇಕು. ಆ ಸೇವೆ ಭಗವಂತನನ್ನು ತಲುಪುತ್ತದೆ. ಕಣ್ಣಿಗೆ ಕಾಣದ ಆ ದೇವರನ್ನು ಸೇವೆಯ ಮೂಲಕ ಕಾಣಬೇಕು. ಮನಸ್ಸನ್ನು ಶುದ್ಧೀಕರಿಸಿಕೊಂಡು ನಿಷ್ಕಲ್ಮಶ ಮನಸ್ಸಿನಿಂದ ಮಾಡುವ ಕಾಯಕ ದೇವರ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಗತ್ತಿನಲ್ಲಿ ಎಲ್ಲಾ ಧರ್ಮಗಳಿಗಿಂತಲೂ ಮಾನವ ಧರ್ಮ ಶ್ರೇಷ್ಠವಾದುದು. ದ್ವೇಷ- ಅಸೂಯೆಯನ್ನು ತೊರೆದು ಪರಸ್ಪರ ಪ್ರೀತಿಯಿಂದ ಬದುಕನ್ನು ನಡೆಸಬೇಕು. ಸೇವೆಯ ಮೂಲಕ ದೇವರನ್ನು ಕಾಣಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಸ್ವರ್ಣಸಂದ್ರದಲ್ಲಿ ಶುಕ್ರವಾರ ಶ್ರೀ ಕಾಳಮ್ಮ ಮತ್ತು ಶ್ರೀ ಮಾರಮ್ಮ ದೇವಾಲಯದ ಜೀರ್ಣೋದ್ಧಾರ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿ, ಸೇವೆಗಿಂತ ದೊಡ್ಡ ಧರ್ಮವಿಲ್ಲ. ಧರ್ಮವನ್ನು ಯಾರು ರಕ್ಷಣೆ ಮಾಡುವರೋ ಧರ್ಮ ಅವರನ್ನು ರಕ್ಷಣೆ ಮಾಡುತ್ತದೆ. ಸ್ವಾರ್ಥಕ್ಕಾಗಿ ಬದುಕಿದರೆ ಯಾವುದೇ ಪ್ರಯೋಜನವಿಲ್ಲ, ಬೇರೆಯವರಿಗೋಸ್ಕರ ಬದುಕಿದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ ಎಂದು ಹೇಳಿದರು.

ನಿಸ್ವಾರ್ಥದ ಬದುಕಿನಲ್ಲಿ ತೃಪ್ತಿ, ನೆಮ್ಮದಿ ಇರುತ್ತದೆ. ಯಾವುದೇ ನಿರೀಕ್ಷೆಗಳಿಲ್ಲದೆ ಸಮಾಜಕ್ಕೆ, ದುರ್ಬಲರಿಗೆ, ಬಡವರಿಗೆ, ಅಶಕ್ತರಿಗೆ ಸೇವೆ ಸಲ್ಲಿಸಬೇಕು. ಆ ಸೇವೆ ಭಗವಂತನನ್ನು ತಲುಪುತ್ತದೆ. ಕಣ್ಣಿಗೆ ಕಾಣದ ಆ ದೇವರನ್ನು ಸೇವೆಯ ಮೂಲಕ ಕಾಣಬೇಕು. ಮನಸ್ಸನ್ನು ಶುದ್ಧೀಕರಿಸಿಕೊಂಡು ನಿಷ್ಕಲ್ಮಶ ಮನಸ್ಸಿನಿಂದ ಮಾಡುವ ಕಾಯಕ ದೇವರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದರು.

ಯಾರು ತಮಗೋಸ್ಕರ ಬದುಕಿರುತ್ತಾರೋ ಅವರು ಜೀವಂತವಾಗಿರುವಾಗಲೇ ಸತ್ತಿರುತ್ತಾರೆ. ಬೇರೆಯವರಿಗೋಸ್ಕರ ಬದುಕನ್ನು ನಡೆಸುವರೋ ಅವರು ಸತ್ತ ಮೇಲೂ ಬದುಕಿರುತ್ತಾರೆ. ಅದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಒಳ್ಳೆಯ ಮನಸ್ಸುಗಳು, ವಿಚಾರಗಳು, ಆಲೋಚನೆಗಳು ಎಲ್ಲರಲ್ಲೂ ಬೆಳವಣಿಗೆಯನ್ನು ಕಂಡಾಗ ಸಮಾಜವೂ ಒಳ್ಳೆಯ ದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿದರಷ್ಟೇ ಸಾಲದು. ದೇಗುಲದ ಸುತ್ತಮುತ್ತಲ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ಪ್ರಾಮಾಣಿಕತೆ, ದಕ್ಷತೆಯಿಂದ ದೇವಾಲಯದ ಆಡಳಿತ ವ್ಯವಹಾರಗಳನ್ನು ನಡೆಸಬೇಕು. ದೇವಾಲಯಗಳ ನಂಬಿಕೆ, ಪಾವಿತ್ರ್ಯತೆಯನ್ನು ಉಳಿಸಿಕೊಂಡು ಭಕ್ತರಿಗೆ ಅನುಕೂಲಗಳನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು.

ಅನ್ನಸಂತರ್ಪಣೆ

ದೇವಾಲಯದ ಆವರಣದಲ್ಲೇ ಭಕ್ತರಿಗೆ ಊಟದ ವ್ಯವಸ್ಥೆ ಆಯೋಜಿಸಲಾಗಿತ್ತು. ಮುದ್ದೆ, ಅವರೆಕಾಳು ಗೊಜ್ಜು, ಅನ್ನ-ಸಾಂಬಾರ್, ಬೂಂದಿ-ಪಾಯಸದ ಪ್ರಸಾದ ರೂಪದಲ್ಲಿ ಭಕ್ತರಿಗೆ ಉಣಬಡಿಸಲಾಯಿತು.ಕಾರ್ಯಕ್ರಮದಲ್ಲಿ ಕೊಮ್ಮೇರಹಳ್ಳಿ ಶ್ರೀ ಆದಿ ಚುಂಚನಗಿರಿ ಶಾಖಾಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ರಾಜ್ಯ ಒಕ್ಕಲಿಗರ ನಿಗಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಎಂ.ಸಿ.ಕೃಷ್ಣ, ಶಿವನಂಜು, ಎಂ.ಸಿ.ಮಹಾಲಿಂಗಯ್ಯ, ಚೌಡಪ್ಪ, ಕೆ.ರಾಜು ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ