ಸಂಸ್ಕೃತಿಯ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ರೂಢಿಸಿಕೊಂಡರೆ ಜಾತಿ ವ್ಯವಸ್ಥೆ ನಿರ್ಮೂಲನೆ ಸಾಧ್ಯ. ಜಾತಿ ವ್ಯವಸ್ಥೆಯಿಂದ ದೂರ ಸರಿಯಬೇಕಾದಲ್ಲಿ ವಿದ್ಯೆ, ಬುದ್ಧಿಯ ಜೊತೆಗೆ ಒಳ್ಳೆಯ ನಡೆ-ನುಡಿ, ಸಂಸ್ಕೃತಿಯನ್ನು ಬೆಳೆಸಿಕೊಂಡು ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು.
ಮಡಿಕೇರಿ : ಸಂಸ್ಕೃತಿಯ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ರೂಢಿಸಿಕೊಂಡರೆ ಜಾತಿ ವ್ಯವಸ್ಥೆ ನಿರ್ಮೂಲನೆ ಸಾಧ್ಯ. ಜಾತಿ ವ್ಯವಸ್ಥೆಯಿಂದ ದೂರ ಸರಿಯಬೇಕಾದಲ್ಲಿ ವಿದ್ಯೆ, ಬುದ್ಧಿಯ ಜೊತೆಗೆ ಒಳ್ಳೆಯ ನಡೆ-ನುಡಿ, ಸಂಸ್ಕೃತಿಯನ್ನು ಬೆಳೆಸಿಕೊಂಡು ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು.
ಅಕಾಡೆಮಿಯ 19ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮವನ್ನು ಕೈಕೇರಿಯಲ್ಲಿರುವ ಸವಿತಾ ಸಮಾಜ ಕಟ್ಟಡದಲ್ಲಿ ನೆರವೇರಿಸಿ ಮಾತನಾಡಿದ ಅವರು, ಸಂಘ, ಸಂಸ್ಥೆ, ಸಮಾಜ, ಐನ್‌ಮನೆಗಳಿಗೆ ಅಕಾಡೆಮಿ ವತಿಯಿಂದ ದುಡಿ, ತಾಳ, ಪರಿಕರಗಳನ್ನು ಕೊಡವ ಸಂಸ್ಕೃತಿಯ ಉನ್ನತಿಗೆ ಉಪಯೋಗವಾಗುವಂತೆ ಬಳಕೆ ಮಾಡಬೇಕಾಗಿ ಹೇಳಿದರು. ಆಯಾಯ ಸ್ಥಳಗಳಲ್ಲಿ ಬಾಳೋಪಾಟ್, ಉಮ್ಮತ್ತಾಟ್, ಕೋಲಾಟ್ ಅರಿತಿರುವವರು ‘ಆಟ್-ಪಾಟ್’ ಕಲಿಸಿಕೊಡಲು ಬಯಸಿದ್ದಲ್ಲಿ ಅಕಾಡೆಮಿಯಿಂದ ನೆರವು ನೀಡಲಾಗುವುದು ಎಂದರು.ಸವಿತಾ ಸಮಾಜದ ಅಧ್ಯಕ್ಷ ನಾಯಂದಿರ ಆರ್.ಶಿವಾಜಿ ಮಾತನಾಡಿ, ಕಲಿಯಲು ಬೇಕಾದಷ್ಟಿದೆ. ಕಲಿತದ್ದು ಎಂದಿಗೂ ಶಾಶ್ವತವಾಗಿರುತ್ತದೆ. ಅಕಾಡೆಮಿಯ ವತಿಯಿಂದ ಸವಿತಾ ಸಮಾಜದಲ್ಲಿ ಕೊಡವ ಪುಸ್ತಕ ಪತ್ತಾಯ ಸ್ಥಾಪಿಸಿರುವುದು ಹೆಮ್ಮೆಯ ವಿಚಾರ. ಸಮಾಜ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು. ಅಂತೆಯೇ, ಅಕಾಡೆಮಿ ವತಿಯಿಂದ ಸವಿತಾ ಸಮಾಜಕ್ಕೆ ಒಡಿಕತ್ತಿ, ದುಡಿತಾಳ ನೀಡಿರುವುದು ಸಮಾಜದಲ್ಲಿ ಕೊಡವ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗಲು ಕಾರಣೀಭೂತವಾಗಿದೆ ಎಂದರು. ನೋಂದಣಿ ಪತ್ರ: ಅಕಾಡೆಮಿಯಿಂದ ಸವಿತಾ ಸಮಾಜಕ್ಕೆ ಪುಸ್ತಕ ಪತ್ತಾಯದ ನೋಂದಣಿ ಪತ್ರವನ್ನು ನೀಡಲಾಯಿತು. ಅಂತೆಯೇ ಸವಿತಾ ಸಮಾಜ ವತಿಯಿಂದ ಅಕಾಡೆಮಿ ಅಧ್ಯಕ್ಷರಿಗೆ ಹತ್ತು ಸಾವಿರ ರು. ಚೆಕ್ ಹಸ್ತಾಂತರಿಸಿದರು. ಸವಿತಾ ಸಮಾಜದ ವೇದಪಂಡ, ಚೋಂದುವಂಡ ಹಾಗೂ ಮುಡುವಂಡ ಕುಟುಂಬಸ್ಥರಿಗೆ ದುಡಿ ನೀಡಲಾಯಿತು. ಸಮಾಜಕ್ಕೆ ಒಡಿಕತ್ತಿ ನೀಡಲಾಯಿತು.
ವೇದಪಂಡ ವಿನುತ ಲವ ಪ್ರಾರ್ಥಿಸಿದರು. ತಾಪನೆರ ಸುಷ್ಮಿ ವಿಠಲ ಸ್ವಾಗತಿಸಿ ನಿರೂಪಿಸಿದರು. ಸಮಾಜದ ಉಪಾಧ್ಯಕ್ಷ ಮುಡುವಂಡ ಎಸ್. ರಮೇಶ, ನಿರ್ದೇಶಕ ಹಾಗೂ ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಾಪನೆರ ಎಂ.ಸುರೇಶ್, ಅಕಾಡೆಮಿಯ ಸದಸ್ಯರಾದ ಚೆಪ್ಪುಡಿರ ಉತ್ತಪ್ಪ, ಕಂಬೆಯಂಡ ಡೀನಾ ಬೋಜಣ್ಣ, ಪೊನ್ನಿರ ಗಗನ್, ಚೊಟ್ಟೆಯಂಡ ಸಂಜು ಕಾವೇರಪ್ಪ, ಪಾನಿಕುಟ್ಟಿರ ಕುಟ್ಟಪ್ಪ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.