ಶ್ರೀರಂಗಪಟ್ಟಣ: ತಾಲೂಕಿನ ಪಿ.ಹೊಸಹಳ್ಳಿ ಬಳಿಯ ದೇವರಾಯ ನಾಲೆಯಲ್ಲಿ ನೂರಾರು ಸತ್ತ ಕೋಳಿಗಳು ತೇಲಿ ಬಂದಿರುವುದು ಸ್ಥಳೀಯ ಜನರಲ್ಲಿ ಹಕ್ಕಿ ಜ್ವರದ ಆತಂಕ ಎದುರಾಗಿದೆ.
ಮಂಗಳವಾರ ಪಟ್ಟಣದ ಸುತ್ತಮುತ್ತಲಿನ ಕೋಳಿ ಫಾರಂಗಳಲ್ಲಿ ಸತ್ತ ಕೋಳಿಗಳನ್ನು ನಾಲೆಗಳಿಗೆ ಎಸೆಯಲಾಗುತ್ತಿದೆ. ನಾಲೆಯಲ್ಲಿ ತೇಲಿ ಬಂದ ಸತ್ತ ಕೋಳಿಗಳನ್ನು ನೋಡಿದ ಸಾರ್ವಜನಿಕರು ಹಕ್ಕಿ ಜ್ವರದಿಂದ ಕೋಳಿಗಳು ಸತ್ತಿವೆ. ಅವುಗಳನ್ನು ನಾಲೆಗೆ ಎಸೆಯಲಾಗಿದೆ ಎಂದು ದೂರಿದ್ದಾರೆ.
ಪಿ.ಹೊಸಹಳ್ಳಿ ಬಳಿ ಹರಿಯುವ ಈ ನಾಲೆ ಕಾರೇಕುರು, ಪಾಲಹಳ್ಳಿ ಗ್ರಾಮಗಳ ಮಾರ್ಗವಾಗಿ ಹಾದು ಹೋಗಲಿದೆ. ಈ ಗ್ರಾಮಗಳ ಜನರಿಗೆ ಕುಡಿಯಲು ಇದೇ ನೀರನ್ನು ಪಂಪ್ ಮೂಲಕ ಸರಬರಾಜು ಮಾಡಲಾಗುತ್ತದೆ. ಜೊತೆಗೆ ನಾಲೆ ಕೆಳಭಾಗದಲ್ಲಿನ ರೈತರು ತಮ್ಮ ದನ- ಕರುಗಳು ಕುಡಿಯಲು ಕೊಳೆತ ನೀರನ್ನೇ ಬಳಸಲಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಈ ಸಂಬಂಧ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್.ಜೆ.ಸುರೇಶ್ ಪ್ರತಿಕ್ರಿಯಿಸಿ, ನಾಲೆಯಲ್ಲಿ ಸತ್ತ ಕೋಳಿಗಳು ತೇಲಿ ಬರುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಇಲಾಖೆ ತಂಡ ಹಾಗೂ ವನ್ಯಜೀವಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಹಕ್ಕಿ ಜ್ವರ ಪರೀಕ್ಷೆ ನಡೆಸಲಾಗಿದೆ. ಹಕ್ಕಿ ಜ್ವರದ ಬಗ್ಗೆ ಯಾವುದೇ ಆತಂಕ ಪಡಬಾರದು. ಬೇಸಿಗೆ ಬಿಸಿಲು ಹೆಚ್ಚಾದಂತೆ ಕೋಳಿ ಫಾರಂಗಳಲ್ಲಿ ಕೋಳಿಗಳು ಮೃತಪಟ್ಟಿವೆ. ಅವುಗಳನ್ನ ನದಿಗೆ ಎಸೆದಿರಬಹುದು ಎಂದು ತಿಳಿಸಿದ್ದಾರೆ.