ಸಚಿವ ಎಸ್‌ಎಸ್‌ಎಂ ಮನೆ ಮುತ್ತಿಗೆಗೆ ಮುನ್ನ ನೂರಾರು ರೈತರ ವಶ

KannadaprabhaNewsNetwork |  
Published : Nov 18, 2026, 01:30 AM IST
17ಎಚ್.ಎಲ್.ಐ1  ಸರ್ಕಾರದ ಆದೇಶ ಇಲ್ಲದೆ ಭದ್ರಾ ಡ್ಯಾಂನಿಂದ ನೀರು ಬಿಡುಗಡೆ ಮಾಡಿದ್ದಕ್ಕೆ ಸಂಸದೆ ಹಾಗೂ ಶಾಸಕರು ಅಧಿಕಾರಿಯನ್ನು ದಿಶಾ ಸಭೆಯಲ್ಲಿಯೇ ತೀವ್ರ  ತರಾಟೆತೆಗದುಕೊಂಡ ಘಟನೆ ನಡೆಯಿತು. | Kannada Prabha

ಸಾರಾಂಶ

ಭದ್ರಾ ಡ್ಯಾಂನಿಂದ ಎಡ ಮತ್ತು ಬಲ ದಂಡೆ ನಾಲೆಗಳಿಗೆ 10 ದಿನ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ಭಾರತೀಯ ರೈತ ಒಕ್ಕೂಟ ಹಾಗೂ ಬಿಜೆಪಿ ರೈತ ಮೋರ್ಚಾ ಮುಖಂಡರು, ಅಚ್ಚುಕಟ್ಟು ರೈತರನ್ನು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ನಗರದಲ್ಲಿ ವಶಕ್ಕೆ ಪಡೆದರು.

- ಭದ್ರಾ ಎಡ, ಬಲ ನಾಲೆಗಳಿಗೆ ನೀರು ಹರಿಸೋದು ನಿಲ್ಲಿಸಲು ರೈತರ ಪಟ್ಟು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಡ್ಯಾಂನಿಂದ ಎಡ ಮತ್ತು ಬಲ ದಂಡೆ ನಾಲೆಗಳಿಗೆ 10 ದಿನ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ಭಾರತೀಯ ರೈತ ಒಕ್ಕೂಟ ಹಾಗೂ ಬಿಜೆಪಿ ರೈತ ಮೋರ್ಚಾ ಮುಖಂಡರು, ಅಚ್ಚುಕಟ್ಟು ರೈತರನ್ನು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ನಗರದಲ್ಲಿ ವಶಕ್ಕೆ ಪಡೆದರು.

ನಗರದ ಶಾಬನೂರು ಗ್ರಾಮದ ಕೆಳ ಸೇತುವೆಯಿಂದ ಪ್ರತಿಭಟನಾ ಮೆರವಣಿಗೆ ಹೊರಟು ಶಾಬನೂರು ರಸ್ತೆ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಸಜ್ಜಾಗುತ್ತಿದ್ದ ರೈತರನ್ನು ಬೆಳಿಗ್ಗೆಯೇ ತೀವ್ರ ಪ್ರತಿರೋಧದ ಮಧ್ಯೆಯೂ ಪೊಲೀಸರು ವಶಕ್ಕೆ ಪಡೆದು, ಕವಾಯಿತು ಮೈದಾನಕ್ಕೆ ಕರೆದೊಯ್ದು, ನಂತರ ಬಿಡುಗಡೆ ಮಾಡಿದರು.

ಇದೇ ವೇಳೆ ಮಾತನಾಡಿದ ಭಾರತೀಯ ರೈತ ಒಕ್ಕೂಟದ ಶಾಬನೂರು ಎಚ್.ಆರ್. ಲಿಂಗರಾಜ, ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪೂಜಾರ ಮಾತನಾಡಿ, ಭದ್ರಾವತಿ ಶಾಸಕ ಸಂಗಮೇಶ್‌ರ ಒತ್ತಡಕ್ಕೆ ಒಳಗಾಗಿ ರಾಜ್ಯ ಸರ್ಕಾರವು ಭದ್ರಾ ಡ್ಯಾಂನಿಂದ ಎಡ ಮತ್ತು ಬಲ ನಾಲೆಗಳಿಗೆ 10 ದಿನಗಳ ಕಾಲ ನೀರು ಹರಿಸುತ್ತಿದ್ದಾರೆ. ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯನ್ನೇ ಕರೆಯದೇ ಏಕಾಏಕಿ ಡ್ಯಾಂನಿಂದ ಎರಡೂ ನಾಲೆಗಳಿಗೆ ನೀರು ಹರಿಸುತ್ತಿರುವುದು ಸರಿಯಲ್ಲ. ತಕ್ಷಣವೇ ನಾಲೆಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.

ಹಿರಿಯೂರು ಉಪ ಚುನಾವಣೆಗೆ ಭದ್ರಾ ಮೇಲ್ದಂಡೆಗೆ ದಾವಣಗೆರೆ, ಶಿವಮೊಗ್ಗ ಸೇರಿದಂತೆ ಭದ್ರಾ ಅಚ್ಚುಕಟ್ಟು ರೈತರ ಹಿತವನ್ನೇ ಬಲಿ ಕೊಟ್ಟು, ನೀರು ಹರಿಸಿದ್ದರು. ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳ ಅಚ್ಚುಕಟ್ಟು ರೈತರ ಬದುಕನ್ನೇ ಹಾಳು ಮಾಡುತ್ತಿರುವುದು ಸರಿಯಲ್ಲ. ಈಗ ಭದ್ರಾವತಿ ಶಾಸಕ ಸಂಗಮೇಶ್‌ರ ಒತ್ತಡಕ್ಕೆ ಮಣಿದು, ಐಸಿಸಿ ಸಭೆಯಲ್ಲಿ ಚರ್ಚಿಸದೇ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ 10 ದಿನಗಳ ನೀರು ಹರಿಸಲು ಆದೇಶಿಸಿದ್ದಾರೆ ಎಂದು ಕಿಡಿಕಾರಿದರು.

ಭದ್ರಾ ಡ್ಯಾಂನಿಂದ 10 ದಿನ ನೀರು ಹರಿಸಿದರೆ ಬಲ ದಂಡೆ ನಾಲೆ ಕೊನೆ ಭಾಗದ ರೈತರು ಏನು ಮಾಡಬೇಕು? ಐಸಿಸಿ ಸಭೆ ಕರೆದು, ಜನವರಿ ಮೊದಲ ವಾರದಿಂದ ಸತತ 120 ದಿನ ನೀರು ಬಿಡುವಂತೆ ಒತ್ತಾಯಿಸಿ ನಾವು ಹಿಂದಿನಿಂದಲೂ ಹೋರಾಟ ನಡೆಸಿದ್ದೇವೆ. ನಾಲೆ ಮೇಲ್ಭಾಗದ ಅಡಕೆ ಇತರೆ ತೋಟಗಳ ರೈತರಿಗೆ ಅನುಕೂಲ ಮಾಡಿಕೊಡಲು ಶೇ.60ರಷ್ಟು ಅಚ್ಚುಕಟ್ಟು ಹೊಂದಿರುವ ದಾವಣಗೆರೆ ಜಿಲ್ಲೆಯ ರೈತರ ಜೀವನದೊಂದಿಗೆ ಚೆಲ್ಲಾಟ ಸರಿಯಲ್ಲ ಎಂದು ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು.

ಅಚ್ಚುಕಟ್ಟು ಮೇಲ್ಭಾಗದ ಅಡಕೆ ಬೆಳೆಗಾರರ ರಕ್ಷಣೆಗೆ ನ.15ರ ಮಧ್ಯ ರಾತ್ರಿಯಿಂದಲೇ ಬಲದಂಡೆ ನಾಲೆಗೆ 10 ದಿನ 1 ಸಾವಿರ ಕ್ಯುಸೆಕ್, ಎಡದಂತೆ ನಾಲೆಗೆ 500 ಕ್ಯುಸೆಕ್ ನೀರು ಹರಿಸಲು ಸರ್ಕಾರ ಆದೇಶ ಹೊರಡಿಸಿದ್ದು ಖಂಡನೀಯ. ಭದ್ರಾವತಿ ಶಾಸಕ ಸಂಗಮೇಶ್, ಎಚ್.ಆರ್.ಬಸವರಾಜಪ್ಪ ಒತ್ತಡಕ್ಕೆ ಮಣಿದು ನೀರು ಹರಿಸುವುದನ್ನು ನೋಡಿದರೆ ನಮ್ಮ ಜಿಲ್ಲೆಯ ಜನ ಪ್ರತಿನಿಧಿಗಳು ದುರ್ಬಲರಾಗಿದ್ದಾರೇನೋ ಎಂಬ ಅನುಮಾನ ಕಾಡುತ್ತಿದೆ. ಐಸಿಸಿ ಸಭೆ ತೀರ್ಮಾನದಂತೆ ನಾಲೆಗೆ ನೀರು ಹರಿಸಬೇಕು. ಆದರೆ, ಭದ್ರಾ ನೀರಾವರಿ ಸಲಹಾ ಸಮಿತಿ ಅನ್ನುವುದೇ ಇಲ್ಲಿ ಸತ್ತುಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿಕೊಂಡು ಅಚ್ಚುಕಟ್ಟು ರೈತರಿಗೆ ಘೋರ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರವೇ ಮೇಲ್ಭಾಗದ ರೈತರು, ಕೆಳಭಾಗದ ರೈತರೆಂದು ವಿಭಜಿಸುವ ಕೆಲಸ ಮಾಡುತ್ತಿದೆ. ಅಚ್ಚುಕಟ್ಟು ವ್ಯಾಪ್ತಿಯ ಮೇಲ್ಭಾಗದಲ್ಲಿ ಮಾತ್ರವಲ್ಲ, ಕೆಳಭಾಗದಲ್ಲೂ ಅಡಕೆ ತೋಟಗಳಿವೆ. ಈಗ ಇಬ್ಬನಿ ಬೀಳುತ್ತಿರುವುದರಿಂದ ಹೇಗೋ ನಿರ್ವಹಣೆಯೂ ಆಗುತ್ತದೆ. ಬೇಸಿಗೆಯಲ್ಲಿ ನೀರು ಬಿಡದಿದ್ದರೆ ಸಾಕಷ್ಟು ಅನ್ಯಾಯವಾಗುತ್ತದೆ ಎಂದು ಸಮಸ್ಯೆ ತೆರೆದಿಟ್ಟರು.

ಜಿಲ್ಲಾ ಮಂತ್ರಿಗಳು ತಕ್ಷಣವೇ ಸಿಎಂ ಸೇರಿದಂತೆ ಸಂಬಂಧಿಸಿದ ಸಚಿವರು, ಅಧಿಕಾರಿಗಳ ಜೊತೆ ಚರ್ಚಿಸಿ, ನೀರು ಹರಿಸುತ್ತಿರುವ ಆದೇಶ ಹಿಂಪಡೆಯಬೇಕು. ಸರ್ಕಾರದ ಈಗಿನ ನಡೆಯು ದಾವಣಗೆರೆ ರೈತರ ಪಾಲಿಗೆ ಮರಣ ಶಾಸನವಾಗಿದೆ. ನೀರು ದೊರೆಯದೇ ರೈತರು ಆತ್ಮಹತ್ಯೆ ಹಾದಿ ಹಿಡಿದರೆ ಅಂತಹ ಸಾವುಗಳಿಗೆ ಸರ್ಕಾರವೇ ನೇರ ಹೊಣೆ ಎಂದೂ ಎಚ್ಚರಿಸಿದರು.

ಒಕ್ಕೂಟದ ಮುಖಂಡರಾದ ಆವರಗೊಳ್ಳ ಬಿ.ಎಂ.ಷಣ್ಮುಖಯ್ಯ, ಆರನೇಕಲ್ಲು ವಿಜಯಕುಮಾರ, ಎ.ಎಂ.ಮಂಜುನಾಥ, ಕುಂದುವಾಡ ಅಣ್ಣಪ್ಪ, ಕಂಚಿಕಟ್ಟೆ ಹನುಮಂತಪ್ಪ, ತ್ಯಾವಣಿಗೆ ಶಿವರಾಜ ಸೇರಿದಂತೆ ನೂರಾರು ರೈತರು, ಅಚ್ಚುಕಟ್ಟು ರೈತರು, ಮುಖಂಡರು ಹೋರಾಟದಲ್ಲಿದ್ದರು.

- - -

(ಬಾಕ್ಸ್‌-1)

* ಐಸಿಸಿಯಿಂದ ಮಧು ಬಂಗಾರಪ್ಪಗೆ ವಜಾ ಮಾಡಿ

ಸ್ವಪ್ರತಿಷ್ಠೆಗಾಗಿ ದಾವಣಗೆರೆ ಭಾಗದ ಅಚ್ಚುಕಟ್ಟು ರೈತರಿಗೆ ಘೋರ ಅನ್ಯಾಯ ಮಾಡಲಾಗುತ್ತಿದೆ. ಭದ್ರಾ ಕಾಡಾ ಸಮಿತಿ ಅಧ್ಯಕ್ಷ ಸ್ಥಾನದಿಂದ ತಕ್ಷಣವೇ ಸಚಿವ ಮಧು ಬಂಗಾರಪ್ಪಗೆ ವಜಾ ಮಾಡಬೇಕು. ಕಾಡಾ ಅಧ್ಯಕ್ಷ ಸ್ಥಾನವನ್ನು ಅಚ್ಚುಕಟ್ಟು ಬಗ್ಗೆ ಅರಿವಿದ್ದವರಿಗೆ ನೀಡಲಿ. ಭದ್ರಾ ಡ್ಯಾಂನಲ್ಲಿ 55.52 ಟಿಎಂಸಿ ನೀರು ಸಂಗ್ರಹವಿದೆ. ಬೇಸಿಗೆ ಕುಡಿಯುವ ನೀರಿಗೆಂದು 8.5 ಟಿಎಂಸಿ ನೀರು ಸಾಕು. ಆದರೆ, ಅಧಿಕಾರಿಗಳು 13.5 ಟಿಎಂಸಿ ಬೇಕೆಂಬುದಾಗಿ ಸುಳ್ಳು ಲೆಕ್ಕ ನೀಡುತ್ತಿದ್ದಾರೆ. ಆವಿ, ಇಂಗುವ ನೀರು ಎಲ್ಲ ತೆಗೆದರೂ ಡ್ಯಾಂನಲ್ಲಿ 44.5 ಟಿಎಂಸಿ ನೀರು ಇದ್ದೇ ಇರುತ್ತದೆ. ಬೇಸಿಗೆ ಹಂಗಾಮಿಗೆ ನಿರಂತರವಾಗಿ ನೀರು ಹರಿಸಲು 30 ಟಿಎಂಸಿ ನೀರು ಸಾಕು. ಆದರೆ, ಇಂದಿಗೂ ಸರ್ಕಾರ ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸುತ್ತಿಲ್ಲ ಎಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಎಚ್.ಆರ್.ಲಿಂಗರಾಜ ಶಾಬನೂರು ಸಿಡಿಮಿಡಿಗೊಂಡರು.

- - -

(ಬಾಕ್ಸ್‌-2)

* ಸಚಿವರ ಮನೆ ಬಳಿ ರೈತ ಮುಖಂಡರ ಆಕ್ರೋಶ

- ಮಟ್ಕಾ, ಇಸ್ಪೀಟಾಡೋರಿಗೆ ಹಿಡಿಯೋದು ಬಿಟ್ಟು ನಮ್ಮನ್ನು ಹಿಡಿತೀರಾ?

- ನಮಗೆ ಗಾಂಜಾನಾದರೂ ಬೆಳೆಯಲು ಅವಕಾಶ ಮಾಡಿಕೊಡುತ್ತೀರಾ?!

ದಾವಣಗೆರೆ: ಭದ್ರಾ ಎಡ ಮತ್ತು ಬಲ ನಾಲೆಗಳಿಗೆ 10 ದಿನಗಳ ಕಾಲ ನೀರು ಹರಿಸುತ್ತಿರುವುದನ್ನು ತಡೆಯುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತ ಮುಖಂಡ ಬಿ.ನಾಗೇಶ್ವರ ರಾವ್ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾಲೆಗೆ ನೀರು ಹರಿಸುವುದನ್ನು ತಡೆಯುವಂತೆ ಒತ್ತಾಯಿಸಿ ಜಿಲ್ಲಾ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ರೈತ ಮುಖಂಡರು, ರೈತರನ್ನು ಪೊಲೀಸರು ಮಾರ್ಗ ಮಧ್ಯೆಯೇ ಬಂಧಿಸಿದ್ದರಿಂದ ಬಿ.ನಾಗೇಶ್ವರ ರಾವ್ ಇತರರೆ ಐವರು ರೈತರು ಸಚಿವರ ಮನೆಗೆ ಮುತ್ತಿಗೆ ಮುಂದಾಗಿದ್ದ ವೇಳೆ ತೀವ್ರ ಮಾತಿನ ಚಕಮಕಿ ನಡೆಯಿತು.

ಹೋರಾಟ ನಿರತ ರೈತರನ್ನು ಅರ್ಧ ದಾರಿಯಲ್ಲೇ ಬಂಧಿಸಿದ್ದಕ್ಕೆ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರ ಮನೆ ಗೇಟ್ ಬಳಿ ಕೆಲ ರೈತರೊಂದಿಗೆ ಆಗಮಿಸಿದ ಬಿ.ನಾಗೇಶ್ವರ ರಾವ್‌ ಜಿಲ್ಲಾ ಸಚಿವರು, ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಚಿವರನ್ನು ಕರೆಸುವಂತೆ ನಾಗೇಶ್ವರ ರಾವ್ ಪಟ್ಟು ಹಿಡಿದರು. ನೀವು ನನ್ನನ್ನು ತಡೆದರೆ ಹೇಗೆ? ಇಸ್ಪೀಟ್‌, ಮಟ್ಕಾ ಜೂಜಾಟ ಆಡುವವರ ತಂಟೆಗೆ ಹೋಗಬೇಡಿ. ರೈತರಾದ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಾ ಎಂದು ಅವರು ಕಿಡಿಕಾರಿದರು.

ನಾವೇನು ಗಾಂಜಾ ಮಾರಾಟಕ್ಕೆ ಬಂದಿದ್ದೆವಾ? ಅಪ್ಪಣ್ಣ ಅಂದರೂ ದಯಾ, ದಾಕ್ಷಿಣ್ಯ ಬೇಡವೇ ಪೊಲೀಸರಿಗೆ? ನಾವೇನು ಭಯೋತ್ಪಾದಕರಾ? ದಾವಣಗೆರೆ ಇತಿಹಾಸದಲ್ಲೇ ಇಂತಹದ್ದೆಲ್ಲಾ ಆಗಿರಲಿಲ್ಲ. ನನ್ನ ನಾಲ್ಕು ದಶಕಗಳ ರೈತ ಜೀವನದಲ್ಲಿ ಈಗ ಆಗುತ್ತಿರುವುದನ್ನು ಹಿಂದೆಂದೂ ಕಂಡಿರಲಿಲ್ಲ. ಐಸಿಸಿ ಸಭೆಗೆ ಈಗ ನಯಾಪೈಸೆ ಬೆಲೆ ಇಲ್ಲ. ಮಂತ್ರಿ, ಸಂಸದರ ಮಾತಿಗೆ ಕಿಮ್ಮತ್ತಿಲ್ಲ. ಯೂಸ್‌ಲೆಸ್ ಮಂತ್ರಿಗಳಿದ್ದಾರೆ. ನಮ್ಮನ್ನು ಅರೆಸ್ಟ್ ಮಾಡಿಸಿದರೆ ದೇವರು ಮೆಚ್ಚುತ್ತಾನಾ ಎಂದು ಅವರು ಪ್ರಶ್ನಿಸಿದರು.

ಮತ್ತೊಬ್ಬ ರೈತ ಮಾತನಾಡಿ, ಬತ್ತ ಬೆಳೆಯುವುದು ಬೇಡವಾ? ಹಾಗಾದರೆ ಗಾಂಜಾ ಬೆಳೆಯಲು ಅವಕಾಶ ಮಾಡಿಕೊಡಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

- - -

-(ಪೋಟೋಗಳಿವೆ).

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಲಾಶ್ರೀ ಉತ್ತಮ ವೇದಿಕೆ: ಜಿಪಂ ಸಿಇಒ
ತೋಂಟದ ಸಿದ್ಧಲಿಂಗ ಶ್ರೀಗೆ ಮಕ್ಕಳ ಬಗ್ಗೆ ಅಪಾರ ಕಾಳಜಿ ಇತ್ತು: ಈಶಣ್ಣ ಬೆಟಗೇರಿ