ಅರಬಗಟ್ಟೆ ದಿಶಾ ಸಭೆಯಲ್ಲಿ ನೀರಾವರಿ ಅಧಿಕಾರಿ ರವಿಕುಮಾರ್‌ಗೆ ಸಂಸದೆ, ಶಾಸಕ ತರಾಟೆ

KannadaprabhaNewsNetwork |  
Published : Nov 18, 2026, 01:15 AM IST
17ಎಚ್.ಎಲ್.ಐ1  ಸರ್ಕಾರದ ಆದೇಶ ಇಲ್ಲದೆ ಭದ್ರಾ ಡ್ಯಾಂನಿಂದ ನೀರು ಬಿಡುಗಡೆ ಮಾಡಿದ್ದಕ್ಕೆ ಸಂಸದೆ ಹಾಗೂ ಶಾಸಕರು ಅಧಿಕಾರಿಯನ್ನು ದಿಶಾ ಸಭೆಯಲ್ಲಿಯೇ ತೀವ್ರ  ತರಾಟೆತೆಗದುಕೊಂಡ ಘಟನೆ ನಡೆಯಿತು. | Kannada Prabha

ಸಾರಾಂಶ

ಸರ್ಕಾರದ ಆದೇಶ ಇಲ್ಲದೇ ಭದ್ರಾ ಡ್ಯಾಂನಿಂದ ನೀರು ಬಿಡುಗಡೆ ಮಾಡಿದ್ದಕ್ಕೆ ಸಂಸದೆ ಡಾ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಶಾಸಕ ಡಿ.ಜಿ.ಶಾಂತನಗೌಡ ಅವರು ನೀರಾವರಿ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಹೊನ್ನಾಳಿ ಅರಬಗಟ್ಟೆ ಗ್ರಾಮದ ದಿಶಾ ಸಭೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸರ್ಕಾರದ ಆದೇಶ ಇಲ್ಲದೇ ಭದ್ರಾ ಡ್ಯಾಂನಿಂದ ನೀರು ಬಿಡುಗಡೆ ಮಾಡಿದ್ದಕ್ಕೆ ಸಂಸದೆ ಡಾ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಶಾಸಕ ಡಿ.ಜಿ.ಶಾಂತನಗೌಡ ಅವರು ನೀರಾವರಿ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಹೊನ್ನಾಳಿ ಅರಬಗಟ್ಟೆ ಗ್ರಾಮದ ದಿಶಾ ಸಭೆಯಲ್ಲಿ ನಡೆಯಿತು.

ಸೋಮವಾರ ಬೆಳಗ್ಗೆ ಪೂರ್ವ ನಿಗದಿಯಂತೆ ತಾಲೂಕಿನ ಅರಬಗಟ್ಟೆ ಸಮೀಪದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲಾ ಸಭೆ ನಡೆಯುತ್ತಿತ್ತು. ಸಂಜೆ ಸಭೆ ಮುಗಿಯವ ಹಂತಕ್ಕೆ ಬಂದಾಗ ಭದ್ರಾ ಜಲಾಶಯದ ನೀರಾವರಿ ಇಲಾಖೆ ಸೂಪರಿಂಟೆಂಡೆಂಟ್ ಎಂಜಿನಿಯರ್ ರವಿಕುಮಾರ್ ಅವರನ್ನು ಶಾಸಕ ಡಿ.ಜಿ.ಶಾಂತನಗೌಡ ಹಾಗೂ ಸಂಸದೆ ಡಾ.ಪ್ರಭಾ ಸಭೆಗೆ ಕರೆಸಿದರು.

ಭದ್ರಾ ಡ್ಯಾಂನಿಂದ ನೀರು ಬಿಡಲು ಮುಖ್ಯಮಂತ್ರಿ ಅಥವಾ ಜಲಸಂಪಲ್ಮೂಲ ಸಚಿವರಿಂದಾಗಲಿ ಲಿಖಿತವಾಗಿ ಆದೇಶ ಇತ್ತ ಎಂದು ಪ್ರಶ್ನಿಸಿದರು. ಆಗ ಇಲ್ಲ, ಭದ್ರಾವತಿ ಶಾಸಕರ ಮೌಖಿಕ ಆದೇಶದ ಮೇರೆಗೆ ನೀರು ಬಿಟ್ಟಿರುವುದಾಗಿ ಅಧಿಕಾರಿ ತಿಳಿಸಿದರು. ಆಗ ಶಾಸಕ ಡಿ.ಜಿ.ಶಾಂತನಗೌಡ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ನಾವೂ ಮೌಖಿಕವಾಗಿ ಹೇಳುತ್ತೇವೆ, ನೀರು ಬಿಡುತ್ತೀರಾ ಎಂದು ಎಂಜಿನಿಯರ್ ರವಿಕುಮಾರ್ ಅವರನ್ನು ಪ್ರಶ್ನಿಸಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಕೂಡಲೇ ಡ್ಯಾಂ ನೀರು ಹರಿವು ನಿಲ್ಲಿಸಬೇಕು ಎಂದು ಎಂಜಿನಿಯರ್‌ಗೆ ಸೂಚಿದ್ದೇವೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೂ ತಿಳಿಸಿದ್ದೇವೆ. ಈಗಾಗಲೇ ಸಚಿವರು ಸಿಎಂ ಗಮನಕ್ಕೆ ಕೂಡ ತಂದಿದ್ದಾರೆ ಎಂದರು, ನೀರು ನಿಲ್ಲಿಸುತ್ತೇನೆ ಎಂದು ಅಧಿಕಾರಿ ಒಪ್ಪಿಕೊಂಡಿದ್ದಾರೆ ಎಂದರು.

ಯಾವುದೇ ಜಲಾಶಯದಿಂದ ನದಿಗೆ ನೀರು ಬಿಡಬೇಕಾದರೆ ತಕ್ಷಣಕ್ಕೆ ಸಮಿತಿ ಮುಂದೆ ವಿಷಯ ಮಂಡನೆ ಮಾಡಿ, ಅದರ ಸಾಧಕ- ಬಾಧಕಗಳನ್ನು ಚರ್ಚಿಸಿ ಅನಂತರ ನೀರು ಬಿಡುತ್ತಾರೆ. ಆದರೆ ಏಕಾಏಕಿ ನೀರು ಬಿಟ್ಟರೆ ಹೇಗೆ ಎಂದು ಅಧಿಕಾರಿಗೆ ಪ್ರಶ್ನಿಸಿದರು.

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, 10 ದಿನಗಳ ಕಾಲ ಬಲದಂಡೆ ನಾಲೆಗೆ 1500 ಕ್ಯುಸೆಕ್ ಹಾಗೂ ಎಡದಂಡೆ ನಾಲೆಗೆ 500 ಕ್ಯುಸೆಕ್ ನೀರನ್ನು ಬಿಟ್ಟರೆ ಅದು ಕೇವಲ ಭದ್ರಾವತಿ ತಾಲೂಕಿಗೆ ಹೋಗುತ್ತದೆ. ಹೊನ್ನಾಳಿ ಹಾಗೂ ಇತರೆ ತಾಲೂಕಿನವರು ಏನು ಮಾಡಬೇಕು? ಲಿಖಿತ ಆದೇಶವಿಲ್ಲದೆ ನೀರು ಬಿಟ್ಟಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಸೂಪರಿಂಟೆಂಡೆಂಟ್‌ ಎಂಜಿನಿಯರ್ ರವಿಕುಮಾರ್ ಅವರಿಗೆ ತಾಕೀತು ಮಾಡಿದರು.

ನೀರು ನಿಲ್ಲಿಸಲ್ಲಿಕ್ಕೆ ಸೂಚಿಸಿದ್ದೇನೆ:

ಭದ್ರಾ ಜಲಾಶಯದ ಸೂಪರಿಟೆಂಡೆಂಟ್ ಎಂಜಿನಿಯರ್ ರವಿಕುಮಾರ್ ಮಾತನಾಡಿ, ಭದ್ರಾವತಿ ಶಾಸಕರು ತನ್ನೊಂದಿಗೆ ಮಾತನಾಡಿ ಸರ್ಕಾರದ ಆದೇಶ ಬರುತ್ತದೆ, ಇಂದಿನಿಂದಲೇ ಭದ್ರಾ ಡ್ಯಾಂ ನೀರು ಹರಿಸಿ ಎಂದು ಹೇಳಿದ್ದರು. ಆದ್ದರಿಂದ ನಾನು ಜಲಾಶಯದಿಂದ ನೀರು ಬಿಟ್ಟೆ. ಆದರೆ ನೀರು ಬಿಡುವಂತೆ ಶಿವಮೊಗ್ಗ ಉಸ್ತುವಾರಿ ಸಚಿವರು ಹೇಳಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಕೂಡಲೇ ಭದ್ರಾ ಜಲಾಶಯದಿಂದ ನೀರು ನಿಲ್ಲಿಸಲ್ಲಿಕ್ಕೆ ಸೂಚಿಸಿದ್ದೇನೆ ಎಂದೂ ಉತ್ತರಿಸಿದರು.

ಈ ಸಂದರ್ಭ ದಾವಣಗೆರೆ ಜಿಲ್ಲಾಧಿಕಾರಿ ಗಂಗಾ ಸ್ವಾಮಿ, ಜಿಪಂ ಸಿಇಒ, ಸಾಹಿತ್ಯ ಅಲದಕಟ್ಟೆ, ಜಿಲ್ಲಾ ಎಎಸ್‌ಪಿ ಪರಮೇಶರ್ ಹೆಗಡೆ, ಅರಣ್ಯ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿ ಹರ್ಷವರ್ಧನ್ ಮತ್ತಿತರರು ಇದ್ದರು.

- - -

-17ಎಚ್.ಎಲ್.ಐ1:

ಸರ್ಕಾರದ ಲಿಖಿತ ಆದೇಶ ಇಲ್ಲದೇ ಭದ್ರಾ ಡ್ಯಾಂನಿಂದ ನೀರು ಬಿಡುಗಡೆ ಮಾಡಿದ್ದ ನೀರಾವರಿ ಇಲಾಖೆ ಅಧಿಕಾರಿಯನ್ನು ದಿಶಾ ಸಭೆಯಲ್ಲಿಯೇ ಸಂಸದೆ ಹಾಗೂ ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭ್ಯರ್ಥಿಗಳ ಗೆಲುವಿಗೆ ಈಗಾಗಲೇ ಕಾರ್ಯತಂತ್ರ ಸಿದ್ಧ: ಶಾಸಕ ಕೆ.ಎಂ.ಉದಯ್
ಕಾಡಾನೆಗಳ ಸ್ಥಳಾಂತರಕ್ಕೆ ಬೃಹತ್ ಕಾರ್ಯಾಚರಣೆ