ಜಿಪಂ, ತಾಪಂ ಚುನಾವಣೆ ದಿನಾಂಕ ಘೋಷಣೆ ಯಾಗದಿದ್ದರೂ ಕ್ಷೇತ್ರಾದ್ಯಂತ ಈಗಾಗಲೇ ಕೆಲ ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದ್ದಾರೆ. ಪ್ರತಿ ಜಿಪಂ, ಗ್ರಾಪಂ ಮತ್ತು ಹೋಬಳಿ ವ್ಯಾಪ್ತಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಆಯೋಜಿಸಿ ಅಂತಿಮವಾಗಿ ಅಭ್ಯರ್ಥಿಗಳನ್ನು ತೀರ್ಮಾನಿಸಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ಮುಂದಿನ ದಿನಗಳಲ್ಲಿ ಎದುರಾಗುವ ತಾಪಂ, ಜಿಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು, ಅಭ್ಯರ್ಥಿಗಳ ಗೆಲುವಿಗೆ ಈಗಾಗಲೇ ಕಾರ್ಯತಂತ್ರ ರೂಪಿಸುತ್ತಿರುವುದಾಗಿ ಶಾಸಕ ಕೆ.ಎಂ ಉದಯ್ ತಿಳಿಸಿದರು.

ನಗರದ‌ ‌ಪ್ರವಾಸಿ‌ ಮಂದಿರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಪಂ, ತಾಪಂ ಚುನಾವಣೆ ದಿನಾಂಕ ಘೋಷಣೆ ಯಾಗದಿದ್ದರೂ ಕ್ಷೇತ್ರಾದ್ಯಂತ ಈಗಾಗಲೇ ಕೆಲ ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದ್ದಾರೆ. ಪ್ರತಿ ಜಿಪಂ, ಗ್ರಾಪಂ ಮತ್ತು ಹೋಬಳಿ ವ್ಯಾಪ್ತಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಆಯೋಜಿಸಿ ಅಂತಿಮವಾಗಿ ಅಭ್ಯರ್ಥಿಗಳನ್ನು ತೀರ್ಮಾನಿಸುವುದಾಗಿ ಹೇಳಿದರು.

ಕೆಲ ಕ್ಷೇತ್ರಗಳಲ್ಲಿ ಮೂರ್ನಾಲ್ಕು ಮಂದಿ ಪೈಪೋಟಿ ಇರುವುದು ಕಂಡುಬಂದರೆ ಪಕ್ಷದ ವರಿಷ್ಠರ ಗಮನಕ್ಕೆ ತರುವ ಜತೆಗೆ ಆಂತರಿಕ ಸರ್ವೇ ನಡೆಸಿ ಅಂತಿಮವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದರು.

ಕ್ಷೇತ್ರಾದ್ಯಂತ ತಾವು ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಪ್ರತಿ ಗ್ರಾಮಕ್ಕೂ ಮೂಲ ಸೌಲಭ್ಯವನ್ನು ಕಲ್ಪಿಸಿ ರಸ್ತೆ ಚರಂಡಿ ಕುಡಿಯುವ ನೀರು, ಬೀದಿ ದೀಪ ಇನ್ನಿತರೆ ಸವಲತ್ತು ಒದಗಿಸಿದ್ದೇನೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ತಮ್ಮನ್ನು ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಲ ತಾಂತ್ರಿಕ ತೊಂದರೆಗಳು ಮತ್ತು ತೊಡಕುಗಳು ಉಂಟಾದ ಕಾರಣ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಮತ್ತು ನಾಲೆ ಆಧುನೀಕರಣ ಕಾಮಗಾರಿ ವಿಳಂಬವಾಗಿವೆ. ಈಗಾಗಲೇ ಹಲವು ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ. ಮುಂದಿನ ದಿನಗಳಲ್ಲಿ ತ್ವರಿತ ಗತಿಯಲ್ಲಿ ಕಾಮಗಾರಿ ಕೈಗೊಂಡು ಸ್ಥಳೀಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದೆಂದರು.

ತಾಲೂಕಿನಲ್ಲಿರುವ ವಿಶೇಷ ಚೇತನರಿಗೆ ಹಲವು ಸೌಲಭ್ಯ ಕಲ್ಪಿಸುವ ಜೊತೆಗೆ ಮುಂದಿನ ದಿನಗಳಲ್ಲಿ ನೂರು ಮಂದಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ಮತ್ತು ಇನ್ನಿತರೆ ಸೌಲಭ್ಯ ವಿತರಿಸಲು ಕ್ರಮ ವಹಿಸಲಾಗಿದೆ ಎಂದರು.

ಬಿಡುಗಡೆಗೊಂಡಿರುವ‌ ಶಾಸಕರ‌ ಅನುದಾನದಲ್ಲಿ ಐದು ಮಂದಿಗೆ ತ್ರಿಚಕ್ರ ವಾಹನ ಮತ್ತು ಶ್ರವಣದೋಷವುಳ್ಳ ಒಬ್ಬ ವ್ಯಕ್ತಿಗೆ ಅಗತ್ಯ ಸಲಕರಣೆ ವಿತರಿಸಿದ್ದೇನೆ. ವಿಶೇಷ ಚೇತನರು ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಸಿಗುವ ಹಲವು ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಬದುಕು ಕಂಡುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.

ಈ ವೇಳೆ ನಿಗಮದ ನಿರ್ದೇಶಕ ಸಿಪಾಯಿ ಶ್ರೀನಿವಾಸ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಸೊಸೈಟಿ ಅಧ್ಯಕ್ಷ ಸಿ.ಟಿ.ಶಂಕರ್, ರವೀಶ್, ಡೆವಲಪರ್ಸ್ ಹಳ್ಳಿಕೆರೆ ಸತೀಶ್, ವಿಕಲಚೇತನರ ತಾಲೂಕು ಅಧ್ಯಕ್ಷ ಎಸ್.ಸಿ.ರಮೇಶ್, ಪಣ್ಣೆದೊಡ್ಡಿ ಸುಧಾಕರ್, ಸತೀಶ್, ಹಾಜರಿದ್ದರು.