ಸಹಕಾರ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿರುವ ದಿ. ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರ 11ನೇ ಪುಣ್ಯಸ್ಮರಣೆ ಸೋಮವಾರ ಔರಾದ್ ತಾಲೂಕಿನ ಚಿಂತಾಕಿಯಲ್ಲಿರುವ ಸಮಾಧಿ ಸ್ಥಳದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಔರಾದ್
ಸಹಕಾರ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿರುವ ದಿ. ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರ 11ನೇ ಪುಣ್ಯಸ್ಮರಣೆ ಸೋಮವಾರ ಔರಾದ್ ತಾಲೂಕಿನ ಚಿಂತಾಕಿಯಲ್ಲಿರುವ ಸಮಾಧಿ ಸ್ಥಳದಲ್ಲಿ ನಡೆಯಿತು.ಪುಣ್ಯಸ್ಮರಣೆ ನಿಮಿತ್ತ ಪರಿವಾರದ ಸದಸ್ಯರು, ಬೆಂಬಲಿಗರು, ಕಾರ್ಯಕರ್ತರು ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಪ್ರಮುಖರು, ದಿ.ಗುರುಪಾದಪ್ಪ ನಾಗಮಾರಪಳ್ಳಿ ಅವರ ಸೇವೆ, ಕೊಡುಗೆ, ಸಾಧನೆ, ಬಡವರ ಮತ್ತು ರೈತರ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಕೊಂಡಾಡಿದರು.
ಸಹಕಾರಿ ಚಳುವಳಿಯನ್ನು ಸರ್ವರ ವಿಕಾಸಕ್ಕಾಗಿ ಬಳಸಿಕೊಂಡು, ಆ ಮೂಲಕ ರಾಜ್ಯ, ದೇಶದ ಗಮನ ಸೆಳೆಯುವಂತಹ ಅದ್ಭುತ ಸಾಧನೆ ಮಾಡಿದವರು ಡಾ. ಗುರುಪಾದಪ್ಪ ನಾಗಮಾರಪಳ್ಳಿ. ಅವರೊಬ್ಬ ಅಪರೂಪದ, ಜನಪರ ಕಾಳಜಿ ಇರುವ ಜನನಾಯಕರು. ಅವರ ಅವಿರತ ಶ್ರಮದ ಫಲವಾಗಿಯೇ ಸಹಕಾರ ಚಳುವಳಿಯು ಈ ಜಿಲ್ಲೆಯಲ್ಲಿ ಬೃಹತ್ತಾಗಿ ಬೆಳೆದಿದೆ ಎಂದರು.ಬ್ಯಾಂಕ್ ಹಣಕಾಸು ವ್ಯವಹಾರ ಮಾಡುವ ಸಂಸ್ಥೆ, ಆದರೆ, ಬ್ಯಾಂಕನ್ನು ಜಿಲ್ಲೆಯ ರೈತರ ಆರ್ಥಿಕ ವಿಕಾಸಕ್ಕಾಗಿ, ಮಹಿಳಾ ಸಶಕ್ತೀಕರಣಕ್ಕಾಗಿ, ಯುವಕರನ್ನು ಸ್ವಾವಲಂಬಿಯನ್ನಾಗಿ ಮಾಡುವದಕ್ಕಾಗಿ ಒಂದು ಸಶಕ್ತ ಸಂಸ್ಥೆಯನ್ನಾಗಿ ಬೆಳೆಸಿದ ಶ್ರೇಯಸ್ಸು ದಿ.ನಾಗಮಾರಪಳ್ಳಿ ಅವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.
ಸಹಕಾರ ಚಳವಳಿಯ ಮೂಲಕ ಜನರ ಬದುಕನ್ನು ಸುಧಾರಿಸಲು ಏನೆಲ್ಲ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟವರು ದಿ.ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರು, ಬ್ಯಾಂಕ್ನ್ನು ಹಣಕಾಸು ವ್ಯವಹಾರಕ್ಕೆ ಸೀಮಿತಗೊಳಿಸದೆ, ಅದರ ಕಾರ್ಯ ಕ್ಷೇತ್ರವನ್ನು ವಿಸ್ತಾರಗೊಳಿಸಿದವರು. ಸಹಕಾರದ ಮೂಲಕ ಸರ್ವರ ಕಲ್ಯಾಣ ಸಾಧಿಸಬಹುದು ಎನ್ನುವುದನ್ನು ಸ್ವತಃ ಸಾಧಿಸಿ ತೋರಿಸಿದವರು ಗುರುಪಾದಪ್ಪ ನಾಗಮಾರಪಳ್ಳಿಯವರು ಎಂದು ಕೊಂಡಾಡಿದರು.ಡಿಸಿಸಿ ಬ್ಯಾಂಕ್ ಹಾಗೂ ಎನ್ಎಸ್ಎಸ್ಕೆ ನಿರ್ದೇಶಕರಾದ ಉಮಾಕಾಂತ ನಾಗಮಾರಪಳ್ಳಿ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ ನಿರ್ದೇಶಕರಾದ ಆಕಾಶ ನಾಗಮಾರಪಳ್ಳಿ, ನಾರಂಜಾ ಕಾರ್ಖಾನೆ ಉಪಾಧ್ಯಕ್ಷ ಬಾಲಾಜಿ ಚವ್ಹಾಣ್, ನಿರ್ದೇಶಕರಾದ ಕುಶಾಲ ಯಾಬಾ, ಸಿದ್ರಾಮ್ ವಾಘಮಾರೆ, ವಿಜಯಕುಮಾರ್ ಪಾಟೀಲ್, ಸಂಜು ಸಿದ್ದಾಪುರೆ, ಸಂಗಮೇಶ ಪಾಟೀಲ್, ವೀರಶೆಟ್ಟಿ ಪಟ್ನೆ, ಅಂಬರೀಶ, ಬಾಲಾಜಿ ರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಹೆಬ್ಬಾಳೆ, ಕಿಶನರಾವ್ ಪಾಟೀಲ್, ಜಿಎನ್ ಆಸ್ಪತ್ರೆ ನಿರ್ದೇಶಕ ಡಿಕೆ ಸಿದ್ರಾಮ್ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಉಚಿತ ಆರೋಗ್ಯ ಶಿಬಿರ: ಪುಣ್ಯಸ್ಮರಣೆ ನಿಮಿತ್ತ ಬೀದರ್ ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ನಡೆಯಿತು, ರಕ್ತ ತಪಾಸಣೆ, ಸಕ್ಕರೆ ಕಾಯಿಲೆ, ಬಿಪಿ ತಪಾಸಣೆ ಮಾಡಲಾಯಿತು. ಜೊತೆಗೆ ಔಷಧಿ ಸಹ ವಿತರಿಸಲಾಯಿತು. ಶಿಬಿರದಲ್ಲಿ ಸುಮಾರು 240 ಜನ ಆರೋಗ್ಯ ತಪಾಸಣೆ ಮಾಡಲಾಯಿತು.