ಕಳೆದ ಹಲವು ವರ್ಷಗಳಿಂದ ಸೆಕ್ಷನ್ 4 ವ್ಯಾಪ್ತಿಗೆ ಒಳಪಟ್ಟಿವೆ ಎನ್ನಲಾದ ಗ್ರಾಮಗಳ ಜಮೀನುಗಳ ವಿಚಾರವಾಗಿ ಅರಣ್ಯ ಇಲಾಖೆ ರೈತರ ವಿರುದ್ಧ ಪ್ರಕರಣ ದಾಖಲಿಸುವುದು, ನೋಟಿಸ್ ನೀಡುವುದು ಸೇರಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿತ್ತು. ಸುಮಾರು 102 ವರ್ಷಗಳ ಹಿಂದಿನ ಆದೇಶಗಳನ್ನು ಉಲ್ಲೇಖಿಸಿ ರೈತರ ಜಮೀನುಗಳನ್ನು ಸೆಕ್ಷನ್ 4 ವ್ಯಾಪ್ತಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದ್ದವು. ಇದರಿಂದಾಗಿ ಕಾಫಿ ಬೆಳೆಗಾರರು ನಿರಂತರ ಆತಂಕ ಹಾಗೂ ಕಾನೂನು ಹೋರಾಟ ಎದುರಿಸುವಂತಾಗಿತ್ತು.

ಕನ್ನಡಪ್ರಭವಾರ್ತೆ, ಸಕಲೇಶಪುರ

ಮಲೆನಾಡು ಭಾಗದ ರೈತರು ಹಾಗೂ ಕಾಫಿ ಬೆಳೆಗಾರರನ್ನು ಹಲವು ವರ್ಷಗಳಿಂದ ಕಾಡುತ್ತಿದ್ದ ಸೆಕ್ಷನ್ 4 ವ್ಯಾಪ್ತಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಆದೇಶದಿಂದ ಸಕಲೇಶಪುರ ಭಾಗದ ಬೆಳೆಗಾರರಲ್ಲಿ ಸಂತಸ ಮೂಡಿದೆ.ಹೈಕೋರ್ಟ ವಿಚಾರಣೆಯಲ್ಲಿ 102 ವರ್ಷಗಳ ಹಿಂದಿನ ಆದೇಶದ ಆಧಾರದಲ್ಲಿ ಜಮೀನುಗಳನ್ನು ಸೆಕ್ಷನ್ 4 ವ್ಯಾಪ್ತಿಗೆ ಸೇರಿಸುವುದಾದರೆ ಅಂದಿನ ಸಂದರ್ಭದಲ್ಲೇ ಸೂಕ್ತ ಕ್ರಮಗಳನ್ನು ಏಕೆ ಕೈಗೊಂಡಿರಲಿಲ್ಲ ಎಂಬ ಪ್ರಶ್ನೆಯನ್ನು ಮುಂದಿಟ್ಟಿತ್ತು. ವಿಚಾರಣೆ ಬಳಿಕ ಬೆಳೆಗಾರರಿಗೆ ಅನುಕೂಲಕರವಾದ ಆದೇಶ ಹೊರಬಂದಿರುವು ಸಂತ ತಂದಿದೆ. ಸೆಕ್ಷನ್ 4 ಇದರ ಬಾಧಕ ಕುರಿತು ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕರಾದ ಎಚ್.ಎಂ. ವಿಶ್ವನಾಥ್, ಎಚ್.ಕೆ. ಕುಮಾರಸ್ವಾಮಿ, ನಾರ್ವೆ ಸೋಮಶೇಖರ್, ಮುರಳಿ ಮೋಹನ್ ಸೇರಿ ಹಲವು ರಾಜಕೀಯ ಮುಖಂಡರು ಹಾಗೂ ಹೋರಾಟಗಾರರು ವಿವಿಧ ಹಂತಗಳಲ್ಲಿ ಬೆಳೆಗಾರರ ಪರವಾಗಿ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದಿದ್ದರು.

ಕಳೆದ ಹಲವು ವರ್ಷಗಳಿಂದ ಸೆಕ್ಷನ್ 4 ವ್ಯಾಪ್ತಿಗೆ ಒಳಪಟ್ಟಿವೆ ಎನ್ನಲಾದ ಗ್ರಾಮಗಳ ಜಮೀನುಗಳ ವಿಚಾರವಾಗಿ ಅರಣ್ಯ ಇಲಾಖೆ ರೈತರ ವಿರುದ್ಧ ಪ್ರಕರಣ ದಾಖಲಿಸುವುದು, ನೋಟಿಸ್ ನೀಡುವುದು ಸೇರಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿತ್ತು. ಸುಮಾರು 102 ವರ್ಷಗಳ ಹಿಂದಿನ ಆದೇಶಗಳನ್ನು ಉಲ್ಲೇಖಿಸಿ ರೈತರ ಜಮೀನುಗಳನ್ನು ಸೆಕ್ಷನ್ 4 ವ್ಯಾಪ್ತಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದ್ದವು. ಇದರಿಂದಾಗಿ ಕಾಫಿ ಬೆಳೆಗಾರರು ನಿರಂತರ ಆತಂಕ ಹಾಗೂ ಕಾನೂನು ಹೋರಾಟ ಎದುರಿಸುವಂತಾಗಿತ್ತು.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕಾಡುಮನೆ ಗ್ರಾಮದಲ್ಲಿ ಬೆಳೆಗಾರರ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸುಮಾರು 150 ಮಂದಿ ಪೈಕಿ 85 ಮಂದಿ ನ್ಯಾಯಾಲಯದ ಮೊರೆ ಹೋಗಿ ತಮ್ಮ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ್ದರು. ಇದೇ ವೇಳೆ ಬೆಳೆಗಾರರ ಸಮಸ್ಯೆ ಕುರಿತು ಶಾಸಕ ಸಿಮೆಂಟ್ ಮಂಜು ಹಾಗೂ ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದರು. ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ನಾರ್ವೆ ಸೋಮಶೇಖರ್, ಮುರಳಿ ಮೋಹನ್ ಸೇರಿದಂತೆ ಇತರ ಮುಖಂಡರೂ ಬೆಳೆಗಾರರ ಹೋರಾಟಕ್ಕೆ ಬೆಂಬಲವಾಗಿ ಧ್ವನಿ ಎತ್ತಿದ್ದರು.

ಬೆಳೆಗಾರರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸುವ ಜವಾಬ್ದಾರಿಯನ್ನು ವಕೀಲ ಸುದೀಶ್ ಪರಮೇಶ್ ಅವರಿಗೆ ವಹಿಸಲಾಗಿತ್ತು. ಅವರು ಸಂಬಂಧಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಲ್ಲಿಸಲಾದ ದಾಖಲೆಗಳು ಹಾಗೂ ಪ್ರಕರಣದ ಅಂಶಗಳನ್ನು ಪರಿಶೀಲಿಸಿದ ನ್ಯಾಯಾಲಯ, 102 ವರ್ಷಗಳ ಹಿಂದಿನ ಆದೇಶದ ಆಧಾರದಲ್ಲಿ ಜಮೀನುಗಳನ್ನು ಸೆಕ್ಷನ್ 4 ವ್ಯಾಪ್ತಿಗೆ ಸೇರಿಸುವುದಾದರೆ ಅಂದಿನ ಸಂದರ್ಭದಲ್ಲೇ ಸೂಕ್ತ ಕ್ರಮಗಳನ್ನು ಏಕೆ ಕೈಗೊಂಡಿರಲಿಲ್ಲ ಎಂಬ ಪ್ರಶ್ನೆಯನ್ನು ಮುಂದಿಟ್ಟಿತ್ತು. ವಿಚಾರಣೆ ಬಳಿಕ ಬೆಳೆಗಾರರಿಗೆ ಅನುಕೂಲಕರವಾದ ಆದೇಶ ಹೊರಬಂದಿದೆ.

ಈ ಆದೇಶದಿಂದ ಕಾಡುಮನೆ, ಅಗ್ನಿ, ಕ್ಯಾಂಪ್, ಅಚ್ಚನಹಳ್ಳಿ, ವರ್ಗುಂದ ಸೇರಿದಂತೆ ಸೆಕ್ಷನ್ 4 ವಿವಾದದಿಂದ ಆತಂಕ ಎದುರಿಸುತ್ತಿದ್ದ ಹಲವು ಗ್ರಾಮಗಳ ಬೆಳೆಗಾರರಿಗೆ ನೆಮ್ಮದಿ ದೊರೆತಂತಾಗಿದೆ. ಹಲವು ವರ್ಷಗಳಿಂದ ತಾವು ಬೆಳೆಸಿಕೊಂಡು ಬಂದಿರುವ ಕಾಫಿ ತೋಟಗಳ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದ ರೈತರು ಇದೀಗ ನಿಟ್ಟುಸಿರು ಬಿಡುವಂತಾಗಿದೆ.

ಈ ಹೋರಾಟಕ್ಕೆ ಸಹಕರಿಸಿದ ಅಂದಿನ ಸಹಾಯಕ ಆಯುಕ್ತ ಪ್ರತೀಕ್ ಬಯಾಳ್ ಅವರು ಅಗತ್ಯ ದಾಖಲೆಗಳನ್ನು ಒದಗಿಸಲು ನೆರವಾಗಿದ್ದರು. ನ್ಯಾಯಾಲಯದ ಆದೇಶ ಹೊರಬರಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲ ಬೆಳೆಗಾರರು, ರೈತರು, ವಕೀಲರು, ಜನಪ್ರತಿನಿಧಿಗಳು ಹಾಗೂ ಹೋರಾಟಗಾರರ ಪ್ರಯತ್ನ ಮಹತ್ವದ್ದಾಗಿದೆ.

ಬೆಳೆಗಾರರು ಆತಂಕವಿಲ್ಲದೆ ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮುಂದುವರಿಸಿ ನೆಮ್ಮದಿಯಿಂದ ಕಾಫಿ ಬೆಳೆಯುವಂತಾಗಬೇಕು ಎಂಬುದು ಎಲ್ಲರ ಆಶಯವಾಗಿದೆ. ರೈತರ ಹಿತದೃಷ್ಟಿಯಿಂದ ಈ ಸಮಸ್ಯೆಗೆ ಪರಿಹಾರ ದೊರಕಿರುವುದು ಮಲೆನಾಡು ಭಾಗದ ಬೆಳೆಗಾರರಿಗೆ ಮಹತ್ವದ ಬೆಳವಣಿಗೆಯಾಗಿದೆ.