ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಕಾಡಾನೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕುರಿತು ಅರಣ್ಯ, ಕಂದಾಯ, ಆರೋಗ್ಯ, ಪೊಲೀಸ್ ಹಾಗೂ ವಿದ್ಯುತ್ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಾಥಮಿಕ ಸಭೆ ನಡೆಸಲಾಗಿದೆ. ಕಾರ್ಯಾಚರಣೆಗೆ ಅಗತ್ಯವಿರುವ ಕಡೆಗಳಲ್ಲಿ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಇತರ ಪ್ರದೇಶಗಳಿಂದ ಕುಂಕಿ ಆನೆಗಳನ್ನು ಕರೆಸಿಕೊಳ್ಳಲಾಗಿದ್ದು, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಕಾರ್ಯಾಚರಣೆ ಯಶಸ್ವಿಯಾಗಲು ಗ್ರಾಮಸ್ಥರು ಅರಣ್ಯ ಇಲಾಖೆಯೊಂದಿಗೆ ಸಹಕರಿಸಿ, ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಕನ್ನಡಪ್ರಭವಾರ್ತೆ, ಹಾಸನ

ಜಿಲ್ಲೆಯ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ಹಾವಳಿ ನಿಯಂತ್ರಿಸಿ, ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಕಾಡಾನೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅರಣ್ಯ ಇಲಾಖೆ ಬೃಹತ್ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಂಡಿದೆ. ಆರು ಆನೆಗಳ ಗುಂಪುಗಳಿಗೆ ಆರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸುಮಾರು ೪೦೦ ಸಿಬ್ಬಂದಿ ನಿಯೋಜಿಸಲಾಗುತ್ತಿದೆ ಎಂದು ಯೋಜನಾ ಆನೆ ವಿಭಾಗದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್ ಮತ್ತು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು.

ನಗರದ ಬಿ.ಎಂ. ರಸ್ತೆಯ ಅರಣ್ಯ ಭವನದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಂಗಳವಾರ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್ ಸುದೀರ್ಘ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಆನೆಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸುವುದು ಸಾಮಾನ್ಯ ಕಾರ್ಯಾಚರಣೆಯಲ್ಲ. ಆನೆಗಳ ವರ್ತನೆ, ಗುಂಪಿನ ಸ್ವರೂಪ, ತಾಯಿ ಆನೆ, ಮರಿಯಾನೆ ಹಾಗೂ ಗಂಡಾನೆಗಳ ಚಲನವಲನವನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಂಡು ಅತ್ಯಂತ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಬೇಕಿದೆ ಎಂದರು.

ಕರ್ನಾಟಕದಲ್ಲಿ ವಾರ್ಷಿಕವಾಗಿ ಸುಮಾರು ೩೫ ಸಾವಿರದಿಂದ ೪೦ ಸಾವಿರ ಬೆಳೆ ಹಾನಿ ಪ್ರಕರಣಗಳು ಆನೆಗಳಿಂದ ಸಂಭವಿಸುತ್ತಿವೆ. ಈ ಸಂಕೀರ್ಣ ಸಮಸ್ಯೆ ನಿಯಂತ್ರಣಕ್ಕೆ ಅರಣ್ಯ ಇಲಾಖೆಯೊಂದಿಗೆ ಪೊಲೀಸ್, ಕಂದಾಯ, ಆರೋಗ್ಯ ಸೇರಿದಂತೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯವಾಗಿದೆ. ರೈಲ್ವೆ ಬ್ಯಾರಿಕೇಡ್, ಸೋಲಾರ್ ಬೇಲಿ, ಕಂದಕ ಹಾಗೂ ಎಲಿಫೆಂಟ್ ಟಾಸ್ಕ್‌ಫೋರ್ಸ್ ಮೂಲಕ ಸಂಘರ್ಷ ತಡೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.ಆರು ವಿಶೇಷ ತಂಡಗಳ ರಚನೆ:

ಸದ್ಯ ಗುರುತಿಸಲಾಗಿರುವ ಆರು ಆನೆಗಳ ಗುಂಪುಗಳಿಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವ ವಹಿಸಲಿದ್ದು, ಆರ್‌ಎಫ್‌ಒಗಳು ಉಪಕಮಾಂಡರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಪಶುವೈದ್ಯರು, ಡ್ರೋನ್ ತಂಡ ಹಾಗೂ ಆನೆಗಳ ಚಲನವಲನ ಪತ್ತೆಹಚ್ಚುವ ಟ್ರ್ಯಾಕರ್‌ಗಳನ್ನು ನಿಯೋಜಿಸಲಾಗುತ್ತದೆ.

ಕಳೆದ ಏಳೆಂಟು ವರ್ಷಗಳ ಬೆಳೆ ಹಾನಿ ದಾಖಲೆಗಳು, ರೇಡಿಯೋ ಕಾಲರ್ ಮಾಹಿತಿ, ಎಐ ಕ್ಯಾಮೆರಾಗಳ ದೃಶ್ಯಗಳು ಹಾಗೂ ಆನೆಗಳ ಹಿಂದಿನ ಸಂಚಾರ ಮಾರ್ಗಗಳನ್ನು ಆಧರಿಸಿ ನೈಸರ್ಗಿಕ ಚಲನವಲನದ ಮಾರ್ಗ ಗುರುತಿಸಲಾಗುತ್ತಿದೆ. ಆನೆಗಳನ್ನು ಅವಸರದಲ್ಲಿ ಓಡಿಸುವುದರಿಂದ ಗುಂಪುಗಳು ಚದುರಿ ಬೇರೆ ಬೇರೆ ಗ್ರಾಮಗಳಿಗೆ ತೆರಳುವ ಅಪಾಯವಿರುವುದರಿಂದ ತಜ್ಞರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಅವರು ಹೇಳಿದರು.

ಚಿಕ್ಕಮಗಳೂರು, ಕೊಡಗು, ಭದ್ರಾ, ತುಮಕೂರು, ನಾಗರಹೊಳೆ ಮತ್ತು ಮಡಿಕೇರಿ ಸೇರಿದಂತೆ ವಿವಿಧ ಅರಣ್ಯ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರ ಪಡೆಯಲಾಗಿದೆ. ಐದು ಕಡೆಗಳಿಂದ ಪಶುವೈದ್ಯಕೀಯ ತಂಡಗಳನ್ನು ಕರೆಸಿಕೊಳ್ಳಲಾಗಿದ್ದು, ಆನೆಗಳ ವರ್ತನೆಯ ತಜ್ಞರು ಮತ್ತು ಎನ್‌ಸಿಎಫ್ ಫೌಂಡೇಶನ್‌ನ ಸಹಕಾರವನ್ನೂ ಪಡೆಯಲಾಗಿದೆ. ಕಾರ್ಯಾಚರಣೆಗೆ ಅರಣ್ಯ ಇಲಾಖೆಯ ೩೫೦ ಹಾಗೂ ಪೊಲೀಸ್ ಇಲಾಖೆಯ ೫೦ ಸಿಬ್ಬಂದಿ ಸೇರಿದಂತೆ ಒಟ್ಟು ೪೦೦ ಸಿಬ್ಬಂದಿ ನಿಯೋಜನೆಯಾಗಲಿದ್ದಾರೆ. ಆನೆಗಳ ಚಲನವಲನದ ಕುರಿತು ಪ್ರತಿ ತಂಡವೂ ಗಂಟೆಗೊಮ್ಮೆ ಜಿಲ್ಲಾ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಕ್ಕೆ ಮಾಹಿತಿ ನೀಡಲಿದೆ. ಅದರ ಆಧಾರದ ಮೇಲೆ ಅಪಾಯದ ಸಾಧ್ಯತೆ ಇರುವ ಗ್ರಾಮಗಳಿಗೆ ವಾಟ್ಸ್‌ ಆ್ಯಪ್ ಮೂಲಕ ಮುನ್ನೆಚ್ಚರಿಕೆ ನೀಡಲಾಗುವುದು. ಕಾರ್ಯಾಚರಣೆ ದೈನಂದಿನ ಮಾಹಿತಿ ಮಾಧ್ಯಮಗಳಿಗೂ ಅಧಿಕೃತ ಬುಲೆಟಿನ್ ಮೂಲಕ ಒದಗಿಸಲಾಗುವುದು ಎಂದು ತಿಳಿಸಿದರು. ಕಾರ್ಯಾಚರಣೆ ಅತ್ಯಂತ ಅಪಾಯಕಾರಿ ಮತ್ತು ಸೂಕ್ಷ್ಮವಾಗಿರುವುದರಿಂದ ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಆನೆಗಳನ್ನು ವೀಕ್ಷಿಸಲು ಅಥವಾ ಚಿತ್ರೀಕರಣ ಮಾಡಲು ಸ್ಥಳದಲ್ಲಿ ಗುಂಪುಗೂಡಬಾರದು. ಸುರಕ್ಷಿತ ಅಂತರ ಕಾಯ್ದುಕೊಂಡು ಅರಣ್ಯ ಇಲಾಖೆ ಸೂಚನೆ ಪಾಲಿಸಬೇಕು ಎಂದು ಮನವಿ ಮಾಡಿದರು.---- ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಕಾಡಾನೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕುರಿತು ಅರಣ್ಯ, ಕಂದಾಯ, ಆರೋಗ್ಯ, ಪೊಲೀಸ್ ಹಾಗೂ ವಿದ್ಯುತ್ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಾಥಮಿಕ ಸಭೆ ನಡೆಸಲಾಗಿದೆ. ಕಾರ್ಯಾಚರಣೆಗೆ ಅಗತ್ಯವಿರುವ ಕಡೆಗಳಲ್ಲಿ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಇತರ ಪ್ರದೇಶಗಳಿಂದ ಕುಂಕಿ ಆನೆಗಳನ್ನು ಕರೆಸಿಕೊಳ್ಳಲಾಗಿದ್ದು, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಕಾರ್ಯಾಚರಣೆ ಯಶಸ್ವಿಯಾಗಲು ಗ್ರಾಮಸ್ಥರು ಅರಣ್ಯ ಇಲಾಖೆಯೊಂದಿಗೆ ಸಹಕರಿಸಿ, ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.- ಕೆ.ಎಸ್. ಲತಾಕುಮಾರಿ, ಜಿಲ್ಲಾಧಿಕಾರಿ