ಮನೆಗಳಿಂದ ಕಳವು: ಇಬ್ಬರು ಕುಖ್ಯಾತರ ಬಂಧನ

KannadaprabhaNewsNetwork |  
Published : Nov 18, 2026, 01:15 AM IST
17ಕೆಪಿಆರ್‌ಸಿಆರ್ 01 | Kannada Prabha

ಸಾರಾಂಶ

ಸ್ಥಳೀಯ ಪಶ್ಚಿಮ, ರಾಯಚೂರು ಗ್ರಾಮೀಣ ಹಾಗೂ ಶಕ್ತಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಐದು ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದು, 45.95 ಲಕ್ಷ ರು. ಮೌಲ್ಯದ ಒಡವೆ ಹಾಗೂ ಬೈಕ್‌ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಸ್ಥಳೀಯ ಪಶ್ಚಿಮ, ರಾಯಚೂರು ಗ್ರಾಮೀಣ ಹಾಗೂ ಶಕ್ತಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಐದು ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದು, 45.95 ಲಕ್ಷ ರು. ಮೌಲ್ಯದ ಒಡವೆ ಹಾಗೂ ಬೈಕ್‌ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಚಂದ್ರಬಂಡಾ ರಸ್ತೆಯ ನಿವಾಸಿಗಳಾದ ಅಮರ್ ಸಿಂಗ್ (29) ಹಾಗೂ ಧನರಾಜ್ ಸಿಂಗ್ ಅಲಿಯಾಸ್ ಧನ್ಯಾ (24) ಬಂಧಿತರಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದರು.

ವಿವಿಧೆಡೆ ಕಳ್ಳತನ: ಜು.7ರಂದು ಯರಮರಸ್ ಗ್ರಾಮದಲ್ಲಿ ನಡೆದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಜು.30ರಂದು ಶಕ್ತಿನಗರದ ಜನತಾ ಲೇಔಟ್ನಲ್ಲಿ, ಸೆ.18ರಂದು ಶಕ್ತಿನಗರದ ಕೆಪಿಸಿ ಕಾಲೋನಿಯಲ್ಲಿ, ಸೆ.19ರಂದು ರಾಯಚೂರಿನ ಅಶ್ರಫಿಯಾ ಕಾಲೋನಿಯಲ್ಲಿ ಹಾಗೂ ಅ.20ರಂದು ರಾಯಚೂರಿನ ರಾಘವೇಂದ್ರ ಕಾಲೋನಿಯಲ್ಲಿ ಕಳ್ಳತನ ನಡೆಸಿದ್ದರು. ಆರೋಪಿಗಳು ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು, ಬೀಗ ಹಾಗೂ ಬಾಗಿಲುಗಳನ್ನು ಮುರಿದು ಒಳನುಗ್ಗಿ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಕದಿಯುತ್ತಿದ್ದರು

ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸುವುದಕ್ಕಾಗಿ ಡಿವೈಎಸ್ಪಿ ಶಾಂತವೀರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಕಳ್ಳತನ ಪ್ರಕರಣಗಳ ಪತ್ತೆ ಕಾರ್ಯ ಕೈಗೊಳ್ಳಲಾಗಿತ್ತು. ರಾಯಚೂರು ಗ್ರಾಮೀಣ ವೃತ್ತದ ಸಿಪಿಐ ನಿಂಗಪ್ಪ ಎನ್.ಆರ್. ಹಾಗೂ ಪಶ್ಚಿಮ ವೃತ್ತದ ಸಿಪಿಐ ಉಮೇಶ ಕಾಂಬಳೆ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ತಾಂತ್ರಿಕ ಮಾಹಿತಿ ಹಾಗೂ ವಿವಿಧ ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ, ಮಂಗಳವಾರ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 300 ಗ್ರಾಂ ಚಿನ್ನ ಆಭರಣ, 500 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ ವಶಪಡಿಸಿಕೊಳ್ಳಲಾಗಿದೆ ಎಂದರು.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ ರಾಯಚೂರು ಗ್ರಾಮೀಣ ವೃತ್ತದ ಸಿಪಿಐ ನಿಂಗಪ್ಪ ಎನ್.ಆರ್. ನೇತೃತ್ವದ ತಂಡ ಹಾಗೂ ಪಶ್ಚಿಮ ವೃತ್ತದ ಸಿಪಿಐ ಉಮೇಶ ಕಾಂಬಳೆ ನೇತೃತ್ವದ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯ ಶ್ಲಾಘನೀಯವಾಗಿದ್ದು ಅವರಿಗೆ 25 ಸಾವಿರ ರು. ಪ್ರೋತ್ಸಹ ಧನ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮಾದಗ ವಸ್ತುಗಳ ನಿಯಂತ್ರಣಕ್ಕಾಗಿ ರಚಿಸಿರುವ ತಂಡಗಳಿಂದ ನಿರಂತರವಾಗಿ ಪ್ಯಾಟ್ರೋಲಿಂಗ್‌ ಮಾಡುತ್ತಿದ್ದು, ವಾಹನಗಳ ತಪಾಸಣೆ ಸಹ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೇ ಜಿಲ್ಲೆ ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ತುರ್ವಿಹಾಳ, ಸಿಂಧನೂರು ಗ್ರಾಮೀಣ, ಮಸ್ಕಿ ಹಾಗೂ ಬಳಗಾನೂರಿನಲ್ಲಿ ಅಕ್ರಮ ನೀರಾವರಿ ಮಾಡುತ್ತಿರುವವರ ವಿರುದ್ಧ 12 ಪ್ರಕರಣಗಳನ್ನು ದಾಖಲಿಸಲಾಗಿದೆ. ರಾಯಚೂರಿನ ಜಿಲ್ಲಾ ಕೇಂದ್ರ ಬಸ್‌ ನಿಲ್ದಾಣದ ಮುಂಭಾಗದ ಪದಾಚಾರಿ ರಸ್ತೆಯನ್ನು ಅತಿಕ್ರಮಿಸಿ ವ್ಯಾಪಾರ ಮಾಡುತ್ತಿರುವವರ ತೆರವುಗೊಳಿಸಲಾಗುವುದು, ಸಂಚಾರ ನಿಯಂತ್ರಣಕ್ಕೆ ವಿಶೇಷ ಕಾಳಜಿ ವಹಿಸುವುದಾಗಿ ಎಸ್ಪಿ ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರೀಶ್, ಡಿವೈಎಸ್ಪಿ ಶಾಂತವೀರ ಈ. ಹರೀಶ್‌ ಸೇರಿ ಸಿಪಿಐ, ಪಿಎಸ್‌ಐ, ಅಧಿಕಾರಿ, ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭ್ಯರ್ಥಿಗಳ ಗೆಲುವಿಗೆ ಈಗಾಗಲೇ ಕಾರ್ಯತಂತ್ರ ಸಿದ್ಧ: ಶಾಸಕ ಕೆ.ಎಂ.ಉದಯ್
ಕಾಡಾನೆಗಳ ಸ್ಥಳಾಂತರಕ್ಕೆ ಬೃಹತ್ ಕಾರ್ಯಾಚರಣೆ