ಬ್ಯಾಡಗಿ ತಾಲೂಕಿನ ಕೆರವಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ ನೂರರ ಸಂಭ್ರಮ

KannadaprabhaNewsNetwork | Published : Mar 15, 2025 1:02 AM

ಸಾರಾಂಶ

100 ವರ್ಷಗಳಿಂದ ತನ್ನ ಅಸ್ತಿತ್ವ ಉಳಿಸಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ ನೀಡಿ ಬದುಕನ್ನು ಕಟ್ಟಿಕೊಟ್ಟ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದ ಸರ್ಕಾರಿ ಶಾಲೆ ನೂರರ ಸಂಭ್ರಮ ಆಚರಿಸುತ್ತಿದೆ.

ಬ್ಯಾಡಗಿ: ಶೈಕ್ಷಣಿಕ ಸ್ಪರ್ಧೆಯಲ್ಲಿ ಸರ್ಕಾರಿ ಶಾಲೆಗಳನ್ನೇ ಉಳಿಸಿಕೊಳ್ಳುವುದು ಕಷ್ಟದ ಕೆಲಸ. ಇದಕ್ಕಾಗಿ ಶಿಕ್ಷಣ ಇಲಾಖೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಖಾಸಗಿಯವರ ಜತೆ ಪೈಪೋಟಿ ನಡೆಸಲಾಗದೇ ಶಾಲೆಯನ್ನೇ ಮುಚ್ಚಿದ್ದಲ್ಲದೇ ಮಕ್ಕಳ ಸಂಖ್ಯೆ ಕೊರತೆಯಿಂದ ಎರಡೆರಡು ಶಾಲೆಗಳನ್ನು ವಿಲೀನ ಮಾಡಿದ ಉದಾಹರಣೆಗಳಿವೆ. ಇವೆಲ್ಲವುದರ ಮಧ್ಯೆ ಖಾಸಗಿ ಶಾಲೆಗಳ ಅಬ್ಬರವನ್ನು ಮೆಟ್ಟಿ ನಿಂತ ತಾಲೂಕಿನ ಕೆರವಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂರರ (ಶತಮಾನೋತ್ಸವ) ಸಂಭ್ರಮ ಆಚರಿಸಿಕೊಳ್ಳುವ ಮೂಲಕ ಶಿಕ್ಷಣ ಇಲಾಖೆಯೇ ಹುಬ್ಬೇರಿಸುವಂತೆ ಮಾಡಿದೆ.

ಶಿಕ್ಷಣವೆಂದರೇನು ಎಂದು ಕೇಳುವಂತಹ ದಿನಮಾನಗಳಲ್ಲಿ ಕುಗ್ರಾಮ ಕೆರವಡಿಯಲ್ಲಿ ಶಾಲೆಯೊಂದು ಆರಂಭವಾಗಿದ್ದು, ಗ್ರಾಮದ ಜನರಿಗೆ ಶಿಕ್ಷಣ ದಾಸೋಹ ನೀಡುವ ಮೂಲಕ ವಿದ್ಯಾವಂತರನ್ನು ಸೃಷ್ಟಿ ಮಾಡುತ್ತಿದೆಯಲ್ಲದೇ, ಅಂದಿನಿಂದ ಇಂದಿನವರೆಗೂ ಶಾಲೆಯು ಹಿಂದಿರುಗಿ ನೋಡಿದ್ದೇ ಇಲ್ಲ. ಅದರಲ್ಲೂ ಮಹಿಳೆಯರಿಗೆ ಶಿಕ್ಷಣ ಮರೀಚಿಕೆಯಾಗಿದ್ದ ಅಂದಿನ ಕಾಲಘಟ್ಟದಲ್ಲಿ 15ಕ್ಕೂ ಹೆಚ್ಚು ಹೆಣ್ಣುಮಕ್ಕಳು ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು ಇತಿಹಾಸ.

ಕಳೆದ 1918 ರಲ್ಲಿ ಆರಂಭವಾದ ಶಾಲೆ: ಮಲೆನಾಡ ಸೆರಗಿನಲ್ಲಿರುವ ಕೆರವಡಿ ಗ್ರಾಮದಲ್ಲಿನ ದ್ವಾಮವ್ವ ದೇವಸ್ಥಾನದಲ್ಲಿ 1918ರಲ್ಲಿ ಕೇವಲ 3 ಮಕ್ಕಳಿಂದ ಆರಂಭವಾದ ಶಾಲೆಯು ನಂತರ 1920ರಲ್ಲಿ ಗ್ರಾಮದಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಸುಮಾರು 25 ವರ್ಷಗಳ ಕಾಲ ಮಕ್ಕಳಿಗೆ ಅಕ್ಷರ ಜ್ಞಾನ ನೀಡಿತು. 1951ರಲ್ಲಿ ಗ್ರಾಮದ ರೈತ ರುದ್ರಪ್ಪ ವೀರಬಸಪ್ಪ ಮಲ್ಲಾಡದ ಅವರ ಸ್ವಂತ 39 ಗುಂಟೆ ಜಾಗೆ ಶಾಲೆ ನಿರ್ಮಾಣಕ್ಕೆ ನೀಡಿದ ಪರಿಣಾಮದಿಂದ ಇಂದಿನವರೆಗೂ ಗ್ರಾಮದ ಜನರು ವಿದ್ಯಾವಂತರಾಗುವಲ್ಲಿ ಸಹಕರಿಸಿತು.ನೂರರ ಸಾಲಿಗೆ ಕೆರವಡಿ: ತಾಲೂಕಿನಲ್ಲಿ ಬೆರೆಣಿಕೆಯಷ್ಟು ಶಾಲೆಗಳು ಶತಮಾನೋತ್ಸವ ಪೂರೈಸಿವೆ. ಅವುಗಳ ಸಾಲಿಗೆ ಇದೀಗ ಕೆರವಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದೆ. 100 ವರ್ಷಗಳಿಂದ ತನ್ನ ಅಸ್ತಿತ್ವ ಉಳಿಸಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ ನೀಡಿ ಬದುಕನ್ನು ಕಟ್ಟಿಕೊಟ್ಟ ತಾಲೂಕಿನ ಕೆರವಡಿ ಗ್ರಾಮದ ಸರ್ಕಾರಿ ಶಾಲೆ ನೂರರ ಸಂಭ್ರಮ ಆಚರಿಸುತ್ತಿದೆ.ಹಲವು ಸಾಧಕರಿಗೆ ಜನ್ಮ: ನೂರು ವರ್ಷಗಳ ಇತಿಹಾಸ ಹೊಂದಿರುವ ಶಾಲೆಯು ಸಾಕಷ್ಟು ಸಾಧಕರಿಗೆ ತನ್ಮೂಲಕ ಜನ್ಮ ನೀಡಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದವರು ಎಂಜಿನಿಯರ್, ವೈದ್ಯರು, ಶಿಕ್ಷಕರು, ಜನಪ್ರತಿನಿಧಿಗಳಾಗಿ, ಕ್ರೀಡಾಪಟುಗಳಾಗಿ ಹಾಗೂ ಅತ್ಯುತ್ತಮ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಧನ್ಯತಾ ಭಾವ: ಶತಮಾನೋತ್ಸವ ಆಚರಣೆಯಿಂದ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಗುರುತಿಸುವುದು, ಅವರಿಂದ ಶಾಲೆಗೆ ಸಹಕಾರ ಪಡೆಯುವುದು, ಕಲಿಸಿದ ಶಿಕ್ಷಕರನ್ನು ಸ್ಮರಿಸುವುದು ಎಲ್ಲರಲ್ಲಿ ಧನ್ಯತಾಭಾವ ಮೂಡಿಸುವುದು ಕಾರ್ಯಕ್ರಮದ ಹಿಂದಿನ ಉದ್ದೇಶವಾಗಿದೆ.ಸಚಿವರಿಂದ ಉದ್ಘಾಟನೆ: ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಅಮೃತಹಸ್ತದಿಂದ ಮಾ. 15ರಂದು ಕಾರ‍್ಯಕ್ರಮದ ಉದ್ಘಾಟನೆ ನೆರವೇರಲಿದೆ. ಸ್ಥಳೀಯ ಶಾಸಕ ಬಸವರಾಜ ಶಿವಣ್ಣನವರ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ವಿಧಾನಪರಿಷತ್‌ ಮುಖ್ಯಸಚೇತಕ ಸಲೀಂ ಅಹ್ಮದ್ ಸೇರಿದಂತೆ ಇತರರು ಭಾಗವಹಿಸುವರು. ಮೂರು ಸಾವಿರಕ್ಕೂ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.ಸಂತಸದ ಸಂಗತಿ: ತಾಲೂಕಿನ ಕೆರವಡಿ ಸರ್ಕಾರಿ ಶಾಲೆ ಶತಮಾನೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ. ನೂರು ವಸಂತ ತಲುಪಿದ ಶಾಲೆಗಳಲ್ಲಿ ಅದರ ಸ್ಮರಣಾರ್ಥವಾಗಿ ಶೈಕ್ಷಣಿಕ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೊಳಿಸಲಿದ್ದೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ನೂರು ವಸಂತ: ಗ್ರಾಮದ ಜನರ ಜ್ಞಾನದ ಹಸಿವು ನೀಗಿಸಿದ ಶಾಲೆಗೆ ನೂರರ ಸಂಭ್ರಮ, ಇದನ್ನು ಪದಗಳಲ್ಲಿ ವರ್ಣಿಸಲಸಾಧ್ಯ ದಾನಿಗಳು, ಶಿಕ್ಷಣ ಪ್ರೇಮಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರ ಸಹಕಾರದಿಂದ ಶಾಲೆಗೆ ನೂರು ವಸಂತ ತುಂಬಿದೆ. ನಮ್ಮಶಾಲೆ ನಮ್ಮಹೆಮ್ಮೆ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಶಶಿಧರ ದೊಡ್ಮನಿ ತಿಳಿಸಿದರು.

Share this article