ಹಾವೇರಿ: ಕರ್ನಾಟಕ ವ್ಯವಸಾಯ ಕಾರ್ಮಿಕರ ವೃತ್ತಿಪರ ಯೂನಿಯನ್‌ನಿಂದ ವಿಶ್ವ ಹಸಿವಿನ ದಿನಾಚರಣೆ ಅಂಗವಾಗಿ ಅ. ೧೪ರಂದು ಜಿಲ್ಲಾಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಂಘಟನೆ ರಾಜ್ಯಾಧ್ಯಕ್ಷ ಶೇಖಪ್ಪ ಶಿವಕ್ಕನವರ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಗಾ ಕೂಲಿ ಹಣ ₹೪೨೩ ಕಾನೂನುಬದ್ಧವಾಗಿ ನೀಡಬೇಕು. ನರೇಗಾ ೧೦೦ ಮಾನವ ದಿನಗಳ ಬದಲು ೨೦೦ ದಿನಗಳನ್ನು ನೀಡಬೇಕು. ಪ್ರತಿ ಕುಟುಂಬಕ್ಕೆ ಜಾಬ್‌ಕಾರ್ಡ ಬದಲಿ ಒಬ್ಬ ವ್ಯಕ್ತಿಗೆ ೧ ಜಾಬ್‌ಕಾರ್ಡ್ ನೀಡಬೇಕು. ಎಸ್‌ಸಿ, ಎಸ್ಟಿ ದಲಿತರಿಗೆ ಭೂಮಿ, ಮನೆ ನೀಡಬೇಕು. ತಾಲೂಕಿನಲ್ಲಿ ಅನೇಕ ಪ್ರದೇಶದಲ್ಲಿ ಜನರಿಗೆ ಪಟ್ಟಾ ನೀಡಿಲ್ಲ, ಅವರಿಗೆ ಪಟ್ಟಾವನ್ನು ನೀಡಬೇಕು. ನರೇಗಾ ಮೇಟ್ ಪ್ರೋತ್ಸಾಹಧನ ತುರ್ತಾಗಿ ಬಿಡುಗಡೆ ಮಾಡಬೇಕು. ಸಾಮಾಜಿಕ ಭದ್ರತೆ ಅಡಿಯಲ್ಲಿ ಕೆಲಸಗಾರರನ್ನು ಗುರುತಿಸಿ ನೋಂದಾಯಿಸಬೇಕು. ₹೫೦ ಸಾವಿರ ಹೆರಿಗೆ ಭತ್ಯೆ ಪರಿಹಾರ ನೀಡಬೇಕು. ಐದು ಮುಖ್ಯ ಅರ್ಹತೆಗಳೊಂದಿಗೆ ಉದ್ಯೋಗಿಗಳ ರಾಜ್ಯ ವಿಮೆಗೆ ನಮ್ಮನ್ನು ಲಿಂಕ್ ಮಾಡಬೇಕು. ಪ್ರತಿ ತಿಂಗಳು ₹೫ ಸಾವಿರ ಪಿಂಚಣಿ ಪಾವತಿಸಬೇಕು. ಅಂಗವೈಕಲ್ಯ ಮತ್ತು ಸಾವಿಗೆ ಕನಿಷ್ಠ ಪರಿಹಾರ ₹೫ ಲಕ್ಷ ಪಾವತಿಸಬೇಕು ಎಂದು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದರು.ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಕಾಮಾಕ್ಷಿ ರೇವಣಕರ ಮಾತನಾಡಿ, ಗ್ರಾಪಂ ಮಟ್ಟದಲ್ಲಿರುವ ಸ್ವಚ್ಛವಾಹಿನಿಯವರಿಗೆ ಯಾವುದೇ ತರಹದ ಸೌಲಭ್ಯಗಳು ಮತ್ತು ೬ ತಿಂಗಳಿನಿಂದ ವೇತನ ಇಲ್ಲ. ಇದರ ಬಗ್ಗೆ ಗಮನಹರಿಸಬೇಕು. ಪ್ರತಿ ಗ್ರಾಪಂಗಳಲ್ಲಿ ಕೆಲಸಕ್ಕೆ ನಮೂನೆ ೬ ಕೊಟ್ಟ ತಕ್ಷಣವೇ ಕೆಲಸ ನೀಡಬೇಕು. ಕಳೆದ ಆರು ತಿಂಗಳಿನಿಂದ ಬಾಕಿ ಇರುವ ಹಾಲಿನ ಸಹಾಯಧನ ಹಣವನ್ನು ಬಿಡುಗಡೆಗೊಳಿಸಬೇಕು. ನರೇಗಾ ಯೋಜನೆಯನ್ನು ಪಪಂ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದರು.
ನಾಗರಾಜ ಮಾಳೂರ, ಬಸವಣ್ಣೆಮ್ಮ ಚಲವಾದಿ, ನಾಗಪ್ಪ ಮಾಳಗಿ, ರವಿ ಹುಲ್ಲತ್ತಿ ಇದ್ದರು.