ಅಳ್ನಾವರ: ಹಸಿವು ಮುಕ್ತ ರಾಜ್ಯವನ್ನಾಗಿಸುವ ಕಾರ್ಯಯೋಜನೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ್ದಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ತಾಲೂಕುಗಳಲ್ಲೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿ ಅದರ ಮೂಲಕ ಬಡವರು, ಕಾರ್ಮಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ ಉಪಹಾರ ಒದಗಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಶನಿವಾರ ಇಂದಿರಾ ಕ್ಯಾಂಟೀನ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭರವಸೆಯ ಬೆಳಕಾಗಿರುವ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಇದರ ಪೈಕಿ ಇಂದಿರಾ ಕ್ಯಾಂಟೀನ್ ಸಹ ಒಂದಾಗಿದೆ. ದುಡಿಮೆ ಅರಸಿ ಆಗಮಿಸುವ ಕಾರ್ಮಿಕರು, ರೈತರು ಹೀಗೆ ಎಲ್ಲ ತರಹದ ಜನರು ಹಸಿವಿನಿಂದ ಬಳಲುವುದನ್ನು ತಪ್ಪಿಸಲು ಅತ್ಯಂತ ಕಡಿಮೆ ಹಣದಲ್ಲಿ ಗುಣಮಟ್ಟದ ಆಹಾರ ಒದಗಿಸಲಾಗುತ್ತಿದೆ. ಇದರಿಂದ ಬಹಳಷ್ಟು ಜನರಿಗೆ ಉಪಯುಕ್ತವಾಗಲಿದೆ ಎನ್ನುವ ಅಭಿಪ್ರಾಯವನ್ನು ಸಚಿವರು ವ್ಯಕ್ತಪಡಿಸಿದರು.
ತಾಲೂಕಿನಲ್ಲಿಯೂ ಬೆಳೆ ಹಾನಿಯಾಗಿರುವ ಬಗ್ಗೆ ರೈತರಿಂದ ದೂರುಗಳು ಬಂದಿವೆ. ಬೆಳೆಹಾನಿಗೊಳಗಾದ ಜಮೀನುಗಳಿಗೆ ತಹಸೀಲ್ದಾರ್‌ರು ಮತ್ತು ಕೃಷಿ ಅಧಿಕಾರಿಗಳು ಖುದ್ದಾಗಿ ತೆರಳಿ ಪರಿಶೀಲನೆ ಮಾಡಿ ವರದಿ ಸಲ್ಲಿಸಲು ನಿರ್ದೇಶಿಸಲಾಗಿದೆ. ರೈತರು ಆತಂಕಕ್ಕೆ ಒಳಗಾಗಬಾರದೆಂದು ತಿಳಿಸಿದರು.ಧಾರವಾಡ ಭಾಗದಲ್ಲಿ ಹೆಚ್ಚಾಗಿ ಹೆಸರು ಬೆಳೆ ಹಾಳಾಗಿದೆ. ಅಲ್ಲಲ್ಲಿ ಹತ್ತಿ, ಸೋಯಾ, ಮೆಕ್ಕೆ ಜೋಳವೂ ಸಹ ಹಾಳಾಗಿರುವ ವರದಿ ಇದೆ. ಸಮಿಕ್ಷೆ ನಡೆಸಿ ವರದಿ ಬಂದ ನಂತರ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಕೊಳ್ಳುವ ಭರಸವೆಯನ್ನು ಸಚಿವ ಸಂತೋಷ ಲಾಡ್ ನೀಡಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು, ಎಸ್.ಪಿ ಗುಂಜನ್ ಆರ್ಯ, ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ತಾಪಂ ಇಒ ಪ್ರಶಾಂತ ತುರಕಾಣಿ, ಮುಖ್ಯಾಧಿಕಾರಿ ಪ್ರಕಾಶ ಮಗದುಮ್, ಪಪಂ ಅಧ್ಯಕ್ಷ ಕೇಶವ ಗುಂಜೀಕರ, ಉಪಾಧ್ಯಕ್ಷ ಛಗನಲಾಲ ಪಟೇಲ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಸುರೇಶಗೌಡ ಪಾಟೀಲ, ಶ್ರೀಕಾಂತ ಗಾಯಕವಾಡ, ಪೈರೋಜಖಾನ ಪಠಾಣ, ಹಸನಅಲಿ ಶೇಖ, ಎಂ.ಎಂ. ತೇಗೂರ, ಕ್ಯಾಂಟೀನ್ ನಿರ್ವಾಹಕ ಹೇಮಂತ ದೇಸಾಯಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿನಾಯಕ ಕುರುಬರ, ಡಾ. ತನುಜಾ, ಕೃಷಿ ಅಧಿಕಾರಿ ರಾಜಶೇಖರ ಅಣ್ಣಗೌಡರ ಮತ್ತಿತರರಿದ್ದರು.ಮೋಸದಿಂದ ಗೆಲ್ಲುತ್ತಿರುವ ಮೋದಿ ಸರ್ಕಾರ: ಲಾಡ್
ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಮೋಸದಿಂದ ಗೆಲ್ಲುತ್ತಿದೆ. ಹರಿಯಾಣದಲ್ಲಿ ಸುಪ್ರಿಂಕೋರ್ಟ್ ಇವಿಎಂ ಯಂತ್ರವನ್ನು ಎಣಿಕೆ ಮಾಡಿದ್ದರಿಂದ ಅಲ್ಲಿ ಬಿಜೆಪಿ ಸೋಲು ಅನುಭವಿಸಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇದೀಗ ದೇಶದಲ್ಲಿ ಮೋಸದಿಂದ ರಾಜಕೀಯ ನಡೆಯುತ್ತಿದೆ. ಸಣ್ಣಸಣ್ಣ ಚುನಾವಣೆಗಳಲ್ಲಿಯೂ ಇವಿಎಂ ಯಂತ್ರಗಳ ಸಮಸ್ಯೆ ಕಂಡುಬರುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬ್ಯಾಲೆಟ್ ಮತದಾನ ಮಾಡಬಾರದು ಎಂದು ಎಲ್ಲಿಯೂ ಹೇಳಿಲ್ಲ. ಮುಂಬರುವ ಚುನಾವಣೆಗಳಲ್ಲಿ ಬ್ಯಾಲೆಟ್ ಮೂಲಕವೇ ಮತದಾನ ಮಾಡಲಾಗುತ್ತದೆ. ನಾವು ಕೂಡ ಈ ವ್ಯವಸ್ಥೆಯನ್ನು ಸ್ವಾಗತಿಸುತ್ತೇವೆ ಎಂದರು.