ನಿವೇಶನಕ್ಕಾಗಿ ನಾಳೆಯಿಂದ ಉಪವಾಸ ಸತ್ಯಾಗ್ರಹ

KannadaprabhaNewsNetwork |  
Published : Nov 23, 2025, 01:45 AM IST
ಪೊಟೋ: 22ಎಸ್‌ಎಂಜಿಕೆಪಿ05ಶಿವಮೊಗ್ಗದ ಪತ್ರಿಕಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್‌.ರಾಜು ಮಾತನಾಡಿದರು.  | Kannada Prabha

ಸಾರಾಂಶ

ಭದ್ರಾವತಿ ತಾಲೂಕು ಬಿಳಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವುಲೇ ಬಸಾಪುರ ಗ್ರಾಮದ ಅರ್ಹ ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಡಿಸಿ ಕಚೇರಿ ಮುಂದೆ ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ಗಂಭೀರವಾಗಿ ಪರಿಗಣಿಸದ ಜಿಲ್ಲಾಡಳಿತದ ನಿಲರ್ಕ್ಷ್ಯದ ಧೋರಣೆ ಖಂಡಿಸಿ, ನ.24 ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್‌.ರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭದ್ರಾವತಿ ತಾಲೂಕು ಬಿಳಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವುಲೇ ಬಸಾಪುರ ಗ್ರಾಮದ ಅರ್ಹ ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಡಿಸಿ ಕಚೇರಿ ಮುಂದೆ ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ಗಂಭೀರವಾಗಿ ಪರಿಗಣಿಸದ ಜಿಲ್ಲಾಡಳಿತದ ನಿಲರ್ಕ್ಷ್ಯದ ಧೋರಣೆ ಖಂಡಿಸಿ, ನ.24 ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್‌.ರಾಜು ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನವಲೇ ಬಸಾಪುರ ಗ್ರಾಮದ ಸರ್ವೇ ನಂಬರ್ 999ರಲ್ಲಿ 5 ಎಕರೆ 35 ಗುಂಟೆ ಗ್ರಾಮ ಠಾಣ ಜಾಗವಿದ್ದು, ಅಲ್ಲಿ ಅರ್ಹ ಬಡವರಿಗೆ ನಿವೇಶನ ನೀಡುವಂತೆ ಅಲ್ಲಿನ ಬಡವರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈ ಹೋರಾಟದ ಹಿನ್ನೆಲೆಯಲ್ಲಿ 125 ನಿವೇಶನ ರಚಿಸಿ, 30 ಬಡವರಿಗೆ ನಿವೇಶನ ನೀಡುವುದಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಬಿಳಿಕಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಪ್ಪು ದಾಖಲೆಗಳನ್ನು ನೀಡಿದ ಪರಿಣಾಮ ಜಿಲ್ಲಾ ಪಂಚಾಯಿತಿಯಿಂದ ಆಯ್ಕೆ ಪಟ್ಟಿ ವಾಪಾಸ್ ಆಗಿದೆ. ಇದಕ್ಕೆ ಪಂಚಾಯಿತಿ ಅಧಿಕಾರಿಗಳೇ ಹೊಣೆಗಾರರು ಎಂದು ದೂರಿದರು.

ಆಯ್ಕೆ ಪಟ್ಟಿಯನ್ನು ಪರಿಗಣಿಸಿ, ಅನುಮತಿ ನೀಡುವಂತೆ ಒತ್ತಾಯಿಸಿ ಅನೇಕ ಬಾರಿ ಮನವಿ ಮಾಡಿದ್ದರೂ ಉಪಯೋಗ ಆಗಲಿಲ್ಲ. ಅದೇ ಕಾರಣಕ್ಕೆ ನ.18 ರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಗಲು ರಾತ್ರಿ ಎನ್ನದೆ ಬಡ ಮಹಿಳೆಯರು ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ನಿರ್ಲಕ್ಷ್ಯ ಮಾಡಿದ ಬಿಳಿಕಿ ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರೂ, ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ಮಾನವ ಹಕ್ಕುಗಳ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ಬಿಳಿಕಿ ಗ್ರಾಮ ಪಂಚಾಯಿತಿ ಪಿಡಿಒ ಭಾಗ್ಯ ಬಾಯಿ ಅವರ ನಿರ್ಲಕ್ಷ್ಯದಿಂದಲೇ ಈಗ ನವುಲೇ ಬಸಾಪುರ ಗ್ರಾಮದ ಬಡವರಿಗೆ ನಿವೇಶನ ಸಿಗದಂತಾಗಿದೆ. ಹಾಗಾಗಿ ಅವರನ್ನು ಸೇವೆಯಿಂದ ತಕ್ಷಣವೇ ವಜಾ ಮಾಡುವಂತೆ ಒತ್ತಾಯಿಸಿ ಮತ್ತು ನವಲೇ ಬಸಾಪುರ ಗ್ರಾಮದ ಸರ್ವೇ ನಂಬರ್ 999 ರಲ್ಲಿ 5 ಎಕರೆ 35 ಗುಂಟೆ ಗ್ರಾಮ ಠಾಣ ಜಾಗದಲ್ಲಿ ಬಡವರಿಗೆ ಕೂಡಲೇ ನಿವೇಶನ ಹಂಚುವಂತೆ ಆಗ್ರಹಿಸಿ ನ.24 ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ. ಮುಂದೆ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಬಡವರಿಗೆ ಯಾವುದೇ ತೊಂದರೆಯಾದರೂ, ಅದರ ಹೊಣೆಯನ್ನು ಜಿಲ್ಲಾಡಳಿತವೇ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ವರಲಕ್ಷ್ಮಿ, ಶಾರದಮ್ಮ, ಸರೋಜಮ್ಮ, ಲಕ್ಷ್ಮಮ್ಮ, ಬಸವರಾಜ್ ಇದ್ದರು.

PREV

Recommended Stories

ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಬಳಸಿ: ಶಾಸಕ ಅಶೋಕ ಪಟ್ಟಣ
ಸೈಕ್ಲಿಂಗ್‌ ಪಟುಗಳಿಗೆ ಸಂವಿಧಾನ ಪಾಠ ಮಾಡಿದ ಸಚಿವ ಸಂತೋಷ ಲಾಡ್