ಕಿಡ್ನಿ ದಾನ ಮಾಡಿ ಪತ್ನಿಯನ್ನು ಉಳಿಸಿಕೊಂಡಿದ್ದ ಪತಿ: ವಿಧಿಯಾಟಕ್ಕೆ ಬಲಿಯಾದ ಮಹಿಳೆ

KannadaprabhaNewsNetwork |  
Published : Nov 21, 2026, 01:15 AM IST
ಪೋಟೋ 1 : ಅಪಘಾತದಲ್ಲಿ ಮೃತಪಟ್ಟ ವೀಣಾಬಾಯಿ | Kannada Prabha

ಸಾರಾಂಶ

ಪೂಜೆ ಮುಗಿಸಿಕೊಂಡು ಬೈಕಿನಲ್ಲಿ ವಾಪಸ್ ಲಗ್ಗೆರೆಗೆ ಮರಳುತ್ತಿದ್ದ ವೇಳೆ ಎಡೇಹಳ್ಳಿ ಗ್ರಾಮದ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ತೀವ್ರತೆಗೆ ವೀಣಾ ಬಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಕಿಡ್ನಿ ದಾನ ಮಾಡುವ ಮೂಲಕ ಸಾವಿನ ದವಡೆಯಲ್ಲಿದ್ದ ಪತ್ನಿಯನ್ನು ಬದುಕಿಸಿಕೊಂಡಿದ್ದ ಪತಿಯೊಬ್ಬರು, ಇದೀಗ ಭೀಕರ ರಸ್ತೆ ಅಪಘಾತದಲ್ಲಿ ಆಕೆಯನ್ನು ಶಾಶ್ವತವಾಗಿ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಸೋಂಪುರ ಹೋಬಳಿಯ ಎಡೇಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ- 48ರಲ್ಲಿ ನಡೆದಿದೆ. ಬೆಂಗಳೂರಿನ ಲಗ್ಗೆರೆ ನಿವಾಸಿ ವೀಣಾ ಬಾಯಿ (38) ಮೃತ ದುರ್ದೈವಿ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಶಿವಾಜಿ ರಾವ್ ಮತ್ತು ವೀಣಾ ಬಾಯಿ ದಂಪತಿ ಗುರುವಾರ ರಾತ್ರಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲು ತೆರಳಿದ್ದರು. ಪೂಜೆ ಮುಗಿಸಿಕೊಂಡು ಬೈಕಿನಲ್ಲಿ ವಾಪಸ್ ಲಗ್ಗೆರೆಗೆ ಮರಳುತ್ತಿದ್ದ ವೇಳೆ ಎಡೇಹಳ್ಳಿ ಗ್ರಾಮದ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ತೀವ್ರತೆಗೆ ವೀಣಾ ಬಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರು ವರ್ಷಗಳ ಹಿಂದೆ ತೀವ್ರ ಲೋ ಬಿಪಿ (ಕಡಿಮೆ ರಕ್ತದೊತ್ತಡ) ಸಮಸ್ಯೆಯಿಂದ ವೀಣಾ ಬಾಯಿ ಅವರ ಎರಡೂ ಕಿಡ್ನಿಗಳು ವಿಫಲವಾಗಿದ್ದವು. ಪತ್ನಿಯ ಪ್ರಾಣ ಉಳಿಸಲು ಮುಂದಾಗಿದ್ದ ಪತಿ ಶಿವಾಜಿ ರಾವ್, ತಮ್ಮದೇ ಒಂದು ಕಿಡ್ನಿಯನ್ನು ದಾನ ಮಾಡಿ ಆಕೆಗೆ ಮರುಜನ್ಮ ನೀಡಿದ್ದರು. ಅಂದಿನಿಂದ ಸುಖವಾಗಿ ಸಂಸಾರ ನಡೆಸುತ್ತಿದ್ದ ಈ ದಂಪತಿಯ ಬದುಕಿನಲ್ಲಿ ವಿಧಿ ಮತ್ತೆ ಕ್ರೂರ ಆಟವಾಡಿದೆ. ಕಣ್ಣಮುಂದೆಯೇ ಪತ್ನಿಯ ಪ್ರಾಣಪಕ್ಷಿ ಹಾರಿಹೋಗಿರುವುದನ್ನು ಕಂಡು ಪತಿ ಶಿವಾಜಿ ರಾವ್ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಎಸಗಿ ಪರಾರಿಯಾದ ವಾಹನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಪದಗ್ರಹಣ
ಬ್ರಹ್ಮಾವರ ರುಡ್‌ಸೆಟ್‌ನಲ್ಲಿ ಕೆನರಾ ಬ್ಯಾಂಕ್ ಸಂಸ್ಥಾಪಕರ ಜನ್ಮದಿನಾಚರಣೆ