ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಪುರಸಭೆಯ ಎಂ.ಪಿ. ಪ್ರಕಾಶ ಸಭಾಂಗಣದಲ್ಲಿ ಜರುಗಿದ ಬಜೆಟ್ ಸಭೆಯಲ್ಲಿ ₹23,61,87,181 ಒಟ್ಟು ನಿರೀಕ್ಷಿತ ಆದಾಯವಾಗಿದ್ದು, ಇದರಲ್ಲಿ ₹ 22,99,85,738 ನಿರೀಕ್ಷಿತ ವೆಚ್ಚ ಸೇರಿ ₹62,01,443 ಉಳಿತಾಯ ಬಜೆಟ್ ಮಂಡಿಸಿದ್ದಾರೆ.
ಪುರಸಭೆಯ ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ ಆಯವ್ಯಯದ ಅಂದಾಜು ಸಾರಾಂಶ ಮಂಡಿಸುತ್ತಾ, 2025-26ನೇ ಸಾಲಿನ ಬಜೆಟ್‌ನಲ್ಲಿ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಈ ಬಾರಿಯ ಬಜೆಟ್ ದಿಕ್ಸೂಚಿಯಾಗಿದೆ ಎಂದರು.ಸರ್ವೋದಯ, ಸಮನ್ವಯದ ಸುಸ್ಥಿರ ಅಭಿವೃದ್ಧಿ ಹಾಗೂ ದಕ್ಷ ಆಡಳಿತವನ್ನು ನೀಡುವ ದೃಷ್ಠಿಯಿಂದ ಎಲ್ಲ ಜವಾಬ್ದಾರಿಗಳನ್ನು ಅರಿತು ಮೂಲ ಸೌಲಭ್ಯ, ತ್ಯಾಜ್ಯ ನಿರ್ವಹಣೆಯಿಂದ ಸ್ವಚ್ಛ ನಗರ ನಿರ್ಮಾಣಕ್ಕೆ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ ಎಂದರು.
ಶಾಸಕ ಕೃಷ್ಣನಾಯ್ಕ ಮಾತನಾಡಿ, ಪುರಸಭೆಯ ಅಧ್ಯಕ್ಷೆ ಗಂಟಿ ಜಮಾಲ್ ಬೀ ಮಂಡಿಸಿರುವ ಬಜೆಟ್ ಅದ್ಬುತವಾಗಿದೆ. ಸುಂದರ ಸ್ವಚ್ಛ ನಗರ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ. ಕುಡಿವ ನೀರು, ಚರಂಡಿ, ರಸ್ತೆ, ವಿದ್ಯುತ್ ದೀಪಗಳ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡಿದ್ದಾರೆಂದು ಹೇಳಿದರು.
ಶಾಸಕರ ಅನುದಾನದಲ್ಲಿ ₹1 ಕೋಟಿ ವೆಚ್ಚದ ಸ್ವಿಪಿಂಗ್ ಮಿಷನ್ ವಾಹನ ಖರೀದಿಸಿ ಪುರಸಭೆಗೆ ನೀಡುತ್ತೇನೆ. ನಿಮ್ಮ ಪ್ರತಿ ಸಮಸ್ಯೆಗಳಿಗೂ ನಾನು ಸ್ಪಂದಿಸುತ್ತೇನೆ. ವೆಚ್ಚ ಕಡಿತಗೊಳಿಸಿ ಉಳಿತಾಯದ ಬಜೆಟ್ ಮಂಡನೆ ಸ್ವಾಗತಾರ್ಹವಾಗಿದೆ ಎಂದರು.
ಈ ಸಂದರ್ಭ ಪುರಸಭೆಯ ಮುಖ್ಯಾಧಿಕಾರಿ ಇಮಾಮ್ ಸಾಹೇಬ್ ಉಪಸ್ಥಿತರಿದ್ದರು.