ಹೂವಿನಹಡಗಲಿ ಪುರಸಭೆ ಬಿಜೆಪಿ ತೆಕ್ಕೆಗೆ

KannadaprabhaNewsNetwork |  
Published : Feb 21, 2025, 12:46 AM IST
ಹೂವಿನಹಡಗಲಿ ಪುರಸಭೆಯ ನೂತನ ಅಧ್ಯಕ್ಷರಾಗಿ ಗಂಟಿ ಜಮಾಲ್‌ ಬೀ, ಉಪಾಧ್ಯಕ್ಷರಾಗಿ ಮಂಜುನಾಥ ಸೊಪ್ಪಿನ ಅವಿರೋಧ ಆಯ್ಕೆಯಾಗಿದ್ದಾರೆ. ಇವರೊಂದಿಗೆ ಶಾಸಕ ಕೃಷ್ಣನಾಯ್ಕ ಇವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.  | Kannada Prabha

ಸಾರಾಂಶ

ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ ಮೊದಲು 14 ಕಾಂಗ್ರೆಸ್‌, 9 ಬಿಜೆಪಿ ಸದಸ್ಯರಿದ್ದರು. ನಂತರದಲ್ಲಿ ಬಿಜೆಪಿಯ 3 ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿ ಅದೇ ಪಕ್ಷದಲ್ಲೆ ಗುರುತಿಸಿಕೊಂಡಿದ್ದರು

ಹೂವಿನಹಡಗಲಿ: ಇಲ್ಲಿನ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ 10 ಜನ ಸದಸ್ಯರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದರಿಂದ ಅಧ್ಯಕ್ಷರಾಗಿ ಗಂಟಿ ಜಮಾಲ್‌ ಬೀ, ಉಪಾಧ್ಯಕ್ಷರಾಗಿ ಸೊಪ್ಪಿನ ಮಂಜುನಾಥ ಅವಿರೋಧ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ಗಂಟಿ ಜಮಾಲ್‌ ಬೀ, ಉಪಾಧ್ಯಕ್ಷ ಸ್ಥಾನಕ್ಕೆ ಸೊಪ್ಪಿನ ಮಂಜುನಾಥ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಇವರು ಅವಿರೋಧ ಆಯ್ಕೆಯಾಗಿದ್ದಾರೆ.

ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ ಮೊದಲು 14 ಕಾಂಗ್ರೆಸ್‌, 9 ಬಿಜೆಪಿ ಸದಸ್ಯರಿದ್ದರು. ನಂತರದಲ್ಲಿ ಬಿಜೆಪಿಯ 3 ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿ ಅದೇ ಪಕ್ಷದಲ್ಲೆ ಗುರುತಿಸಿಕೊಂಡಿದ್ದರು. ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಫೆ. 20 ರಂದು ಚುನಾವಣೆ ನಿಗಧಿಯಾಗಿತ್ತು. ಆ ವೇಳೆ ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ವಿರೋಧಿಸಿ ಕಾಂಗ್ರೆಸ್‌ನ 10 ಜನ ಸದಸ್ಯರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದರಿಂದ ಬಿಜೆಪಿಯ ಪಕ್ಷಕ್ಕೆ 16 ಜನ ಸದಸ್ಯರಿದ್ದಾರೆ. ಇದರಿಂದ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಲು ಸಾಧ್ಯವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೃಷ್ಣನಾಯ್ಕ, ಇಲ್ಲಿನ ಪುರಸಭೆಯ ಸದಸ್ಯರು ವಿವಿಧ ಪಕ್ಷಗಳಲ್ಲಿ ಗೆದ್ದು, 4 ವರ್ಷ ಕಳೆದರೂ ಅವರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ, ಕಾಂಗ್ರೆಸ್‌ ಸದಸ್ಯರು ಬಿಜೆಪಿ ಸೇರ್ಪಡೆಯಾಗಿ ಅಭಿವೃದ್ಧಿಗೆ ಬೆಂಬಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಮಾಡಲು ಸಹಕಾರಿಯಾಗಿದೆ ಎಂದರು.

ಕಾಂಗ್ರೆಸ್‌ ಪಕ್ಷದಿಂದ 10 ಜನ ಬಿಜೆಪಿಗೆ ಬಂದಿದ್ದಾರೆ, 6 ಜನ ಬಿಜೆಪಿ ಪಕ್ಷದ ಸದಸ್ಯರು ಸೇರಿ ಒಟ್ಟು 16 ಜನ, ಸದಸ್ಯರ ಬಲ ಬಿಜೆಪಿ ಹೊಂದಿದೆ. ಶಾಸಕರೊಂದಿಗೆ ಇದ್ದರೇ ವಾರ್ಡ್‌ಗಳ ಜನರಿಗೆ, ನ್ಯಾಯ ಕೊಡಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕಾಗಿ ಬಂದಿದ್ದಾರೆ ಎಂದರು.

ನೂತನ ಅಧ್ಯಕ್ಷೆ ಜಮಾಲ್‌ ಬೀ ಮಾತನಾಡಿ, ನಮಗೆ ಕಾಂಗ್ರೆಸ್‌ ಪಕ್ಷದಲ್ಲಿ ಬೇಸರ ತಂದಿತ್ತು. ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಇದ್ದರೂ ಕಾಂಗ್ರೆಸ್‌ ಅವಕಾಶ ನೀಡಲಿಲ್ಲ, ನಮಗೆ ಸಹಾಯ ಕೂಡಾ ಮಾಡಲಿಲ್ಲ, ನೀವು ತಿಂದು ತೇಗಿದ್ದೀರಿ ಎಂದು ಮಾಜಿ ಶಾಸಕರು ಆರೋಪಿಸಿದ್ದರು. ತಿಂದು ತೇಗಿರುವುದು ಯಾರು ಎಂಬುದನ್ನು ಅವರೇ ಹೇಳಲಿ, ನಾವು ಅಮಾಯಕರು, ಅವರಿಂದ ನಾವು ಒಂದು ರೂಪಾಯಿ ಕೂಡಾ ನೋಡಿಲ್ಲ, ನಮ್ಮ ವಾರ್ಡ್‌ಗಳಲ್ಲಿ ಸಣ್ಣ ಕೆಲಸವೂ ಕೂಡಾ ಆಗಿಲ್ಲ. ಆದರಿಂದ ನಾವು ಬಿಜೆಪಿ ಸೇರ್ಪಡೆಯಾಗಿದ್ದೇವೆ ಎಂದರು.

ಚುನಾವಣೆಯ ಪ್ರಕ್ರಿಯೆಯಲ್ಲಿ ಶಾಸಕ ಕೃಷ್ಣನಾಯ್ಕ ಸೇರಿ 17 ಜನ ಸದಸ್ಯರು ಉಪಸ್ಥಿತರಿದ್ದರು. ಚುನಾವಣಾಧಿಕಾರಿ ತಹಸೀಲ್ದಾರ್‌ ಜಿ.ಸಂತೋಷಕುಮಾರ್‌ ಕರ್ತವ್ಯ ನಿರ್ವಹಿಸಿದರು.

ಇಲ್ಲಿನ ಪುರಸಭೆಗೆ ಬಿಜೆಪಿಯ ಗಂಟಿ ಜಮಾಲ್‌ ಬೀ, ಉಪಾಧ್ಯಕ್ಷರಾಗಿ ಸೊಪ್ಪಿನ ಮಂಜುನಾಥ, ಅವಿರೋಧ ಆಯ್ಕೆಯಾಗುತ್ತಿದಂತೆಯೇ ಪಟ್ಟಣದ ತುಂಬೆಲ್ಲ ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್‌, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.

PREV

Recommended Stories

ಛಾಯಾಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ
ಹಿಂದೂ ಸಮಾಜ ಸಂಘಟನೆಗೆ ಆರ್‌ಎಸ್ಎಸ್‌ ಪಾತ್ರ ಅಗಾಧ