ಹೂವಿನಹಡಗಲಿ: ಶಾಲಾ ಕೊಠಡಿ ದುರಸ್ತಿ ಕಾಮಗಾರಿ ಅರೆಬರೆ

KannadaprabhaNewsNetwork |  
Published : Jun 25, 2026, 02:15 AM IST
ಹೂವಿನಹಡಗಲಿ ತಾಲೂಕಿನ ಮಾಗಳದ ಸರ್ಕಾರಿ ಪ್ರೌಢ ಶಾಲೆಯ ತಗಡು ಭಾರಿ ಪ್ರಮಾಣದ ಗಾಳಿ ರಭಸಕ್ಕೆ ಕಿತ್ತು ಹೋಗಿರುವುದು.  | Kannada Prabha

ಸಾರಾಂಶ

ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಡಿ ₹4.70 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದ ಕಾಮಗಾರಿಗಳು ಈಗ ಅರೆಬರೆಯಾಗಿವೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಶಾಲೆಗಳು ಮಳೆಗೆ ಸೋರುತ್ತಿದ್ದವು. ಇವುಗಳ ದುರಸ್ತಿಗಾಗಿ ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಡಿ ₹4.70 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದ ಕಾಮಗಾರಿಗಳು ಈಗ ಅರೆಬರೆಯಾಗಿವೆ.

ಶೈಕ್ಷಣಿಕ ಕ್ಷೇತ್ರಕ್ಕೆ ಶಾಸಕ ಕೃಷ್ಣನಾಯ್ಕ ಹೆಚ್ಚು ಒತ್ತು ನೀಡಿದ್ದಾರೆ. ಮಳೆಗಾಲದಲ್ಲಿ ಸರ್ಕಾರಿ ಶಾಲೆಗಳು ಸೋರುತ್ತಿದ್ದವು. ಮಕ್ಕಳಿಗೆ ಕನಿಷ್ಠ ಕೋಣೆ ಒಳಗೆ ಕುಳಿತು ಅಭ್ಯಾಸ ಮಾಡಬೇಕೆಂಬ ಕಾರಣಕ್ಕಾಗಿ ಈ ಹಿಂದೆ 2024-25ನೇ ಸಾಲಿನಲ್ಲಿ ಜಿಲ್ಲಾಧಿಕಾರಿ ಜತೆಗೆ ಚರ್ಚಿಸಿ, ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಲ್ಲಿ ಮಳೆಗೆ ಸೋರುತ್ತಿರುವ ಶಾಲೆಗಳ ಪಟ್ಟಿ ಮಾಡಿದ್ದರು. 70ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಚಾವಣಿ ಮೇಲೆ ತಗಡಿನ ಸೀಟ್‌ಗಳನ್ನು ಹಾಕಿ ಮಳೆ ನೀರಿಗೆ ಸೋರದಂತೆ ದುರಸ್ತಿ ಕಾರ್ಯ ನಡೆಯುತ್ತಿದೆ.

ಮಾಗಳ ಸರ್ಕಾರಿ ಪ್ರೌಢ ಶಾಲೆ ಸೇರಿದಂತೆ ಇತರೆ 9 ಹಳ್ಳಿ, ಹಿರೇಮಲ್ಲನಕೆರೆ ಸರ್ಕಾರಿ ಶಾಲೆ ಸೇರಿದಂತೆ ಇತರೆ 14 ಹಳ್ಳಿ, ಕಳಸಾಪುರ ಸರ್ಕಾರಿ ಶಾಲೆ ಸೇರಿದಂತೆ ಇತರೆ 11 ಹಳ್ಳಿ, ನಂದಿಹಳ್ಳಿ ಸರ್ಕಾರಿ ಶಾಲೆ ಸೇರಿದಂತೆ ಇತರೆ 20 ಹಳ್ಳಿ, ಹೊಳಲು ಸರ್ಕಾರಿ ಶಾಲೆ ಸೇರಿದಂತೆ ಇತರೆ 16 ಹಳ್ಳಿ ಸೇರಿದಂತೆ 70ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಕೋಣೆ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಬಹುತೇಕ ಶಾಲೆಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಆದರೆ ಮಾಗಳ, ಬ್ಯಾಲಹುಣ್ಸಿ, ಬನ್ನಿಮಟ್ಟಿ, ನಂದಿಗಾವಿ ಸರ್ಕಾರಿ ಶಾಲೆಗಳ ತಗಡು ಭಾರಿ ಪ್ರಮಾಣದ ಗಾಳಿ-ಮಳೆಗೆ ಕಿತ್ತು ಹೋಗಿದ್ದವು.

ತಾಲೂಕಿನ 70ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ತಗಡಿನ ಸೀಟ್‌ ಅಳವಡಿಸಿ, ಸುಣ್ಣ ಬಣ್ಣ ಮಾಡುವ ಕಾಮಗಾರಿಯನ್ನು ಬೆಂಗಳೂರು ಮೂಲದ "ಕರ್ನಾಟಕ ರಾಜ್ಯ ಹ್ಯಾಬಿಟೇಟ್‌ ಕೇಂದ್ರ " ಎಂಬ ಎನ್‌ಜಿಒ ಗುತ್ತಿಗೆ ಪಡೆದಿದೆ. ಗಾಳಿ-ಮಳೆಗೆ ತಗಡಿನ ಸೀಟ್‌ ಕಿತ್ತು ಹೋಗಿರುವ ಸರ್ಕಾರಿ ಶಾಲೆಗಳಲ್ಲಿ ಮತ್ತೆ ಮರು ಕಾಮಗಾರಿ ಮಾಡುವಂತೆ ಶಾಸಕ ಕೃಷ್ಣನಾಯ್ಕ ಸೂಚನೆ ನೀಡಿದ್ದಾರೆ. ಈಗಾಗಲೇ ಶಾಲೆಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಕೆಲ ಶಾಲೆಗಳಲ್ಲಿ ಈವರೆಗೂ ಕಾಮಗಾರಿ ಮಾಡಲು ಮುಂದಾಗಿಲ್ಲ ಎಂಬ ದೂರು ಕೇಳಿ ಬರುತ್ತಿವೆ.

ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಗಳ ಉನ್ನತೀಕರಣ ಹೆಸರಿನಲ್ಲಿ ಕಾಮಗಾರಿ ನಡೆಯುತ್ತಿದೆ. ವರ್ಷ ಕಳೆಯುತ್ತಾ ಬಂದರೂ ಈವರೆಗೂ ಕೆಲವು ಕಡೆ ಕಾಮಗಾರಿ ಪೂರ್ಣಗೊಂಡಿಲ್ಲ.

ಕೋಟ್‌:

ಸರ್ಕಾರಿ ಶಾಲೆಗಳು ಮಳೆಗೆ ಸೋರುತ್ತಿದ್ದವು. ಇವುಗಳ ದುರಸ್ತಿಗೆ ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಲ್ಲಿ ಅನುದಾನ ಬಿಡುಗಡೆ ಮಾಡಿಸಿ, ರಾಜ್ಯ ಹ್ಯಾಬಿಟೇಟ್‌ ಕೇಂದ್ರ ಬೆಂಗಳೂರು ಸಂಸ್ಥೆಗೆ ಗುತ್ತಿಗೆ ವಹಿಸಲಾಗಿದೆ. ಗಾಳಿ-ಮಳೆ ರಭಸಕ್ಕೆ ಕಿತ್ತು ಹೋಗಿರುವ ಕಡೆಗಳಲ್ಲಿ ಮತ್ತೆ ಕಾಮಗಾರಿ ಪೂರ್ಣ ಮಾಡುವಂತೆ ಸೂಚನೆ ನೀಡಿದ್ದೇವೆ. ಎಲ್ಲ ಶಾಲೆಗಳ ಕಾಮಗಾರಿ ಪರಿಶೀಲನೆ ಮಾಡಲಾಗುವುದು ಎನ್ನುತ್ತಾರೆ ಶಾಸಕ ಕೃಷ್ಣನಾಯ್ಕ.

ಅಕ್ಷರ ಆವಿಷ್ಕಾರ ಯೋಜನೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ದುರಸ್ತಿ ಕಾಮಗಾರಿ ಕಳೆದ ವರ್ಷ ನಡೆದಿತ್ತು. ಕಾಮಗಾರಿ ಅರೆಬರೆಯಾಗಿರುವ ಮಾಹಿತಿಯನ್ನು ಸಂಗ್ರಹಿಸಿ, ಇದನ್ನು ಶಾಸಕರ ಗಮನಕ್ಕೆ ತಂದು ಪೂರ್ಣಗೊಳಿಸುವಂತೆ ಮನವಿ ಮಾಡುತ್ತೇವೆ ಎನ್ನುತ್ತಾರೆ ಹೂವಿನಹಡಗಲಿ ಬಿಇಒ ಕೆ.ಮಂಗಳಾ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸದ ನಿರ್ಮೂಲನೆಗೆ ಮಹಾನಗರ ಪಾಲಿಕೆ ಕಸರತ್ತು
ಅನಧಿಕೃತ ವೈದ್ಯಕೀಯ ವೃತ್ತಿ ತಡೆಗೆ ವಿಶೇಷ ಪಡೆ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್