ಗಣೇಶಗುಡಿ ಹತ್ತಿರ ಕಾಣಿಸಿಕೊಂಡ ಕತ್ತೆಕಿರುಬ

KannadaprabhaNewsNetwork |  
Published : Nov 07, 2025, 02:45 AM IST
ಎಚ್‌06.11-ಡಿಎನ್‌ಡಿ3: ಗಣೇಶಗುಡಿ ಹತ್ತಿರ ಕತ್ತೆಕಿರುಬು (ಹೈನಾ) ಕಾಣಿಸಿಕೊಂಡಿದೆ. | Kannada Prabha

ಸಾರಾಂಶ

ಅಪಾರ ಪ್ರಮಾಣದಲ್ಲಿ ವನ್ಯ ಸಂಪತ್ತು ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಷ್ಟೇ ಪ್ರಮಾಣದ ಜೀವ ಪ್ರಪಂಚವಿದೆ. ಸದ್ಯ ದಾಂಡೇಲಿ ಗಣೇಶಗುಡಿಯ ಬಳಿ ವಿಚಿತ್ರ ಪ್ರಾಣಿಯೊಂದು ಕಾಣಿಸಿದೆ.

ದಾಂಡೇಲಿ:

ಅಪಾರ ಪ್ರಮಾಣದಲ್ಲಿ ವನ್ಯ ಸಂಪತ್ತು ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಷ್ಟೇ ಪ್ರಮಾಣದ ಜೀವ ಪ್ರಪಂಚವಿದೆ. ಸದ್ಯ ದಾಂಡೇಲಿ ಗಣೇಶಗುಡಿಯ ಬಳಿ ವಿಚಿತ್ರ ಪ್ರಾಣಿಯೊಂದು ಕಾಣಿಸಿದೆ.

ಬೆಕ್ಕಿನ ಸ್ವಭಾವ, ನಾಯಿಗಳ ಹೋಲಿಕೆಯಿರುವ ಅಪರೂಪದ ಹೈನಾ (ಕತ್ತೆಕಿರುಬ) ಎಂಬ ಪ್ರಾಣಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕಾಣಿಸಿದೆ. ಗಣೇಶಗುಡಿಯಲ್ಲಿ ಮಂಗಳವಾರ ರಾತ್ರಿ ಅಪರೂಪದ ಕತ್ತೆಕಿರುಬ ಓಡಾಡುತ್ತಿರುವುದನ್ನು ಜನ ನೋಡಿದ್ದಾರೆ. ಗಣೇಶಗುಡಿ ಸೇತುವೆ ಬಳಿ ಸಂಚರಿಸುವವರು ಆ ಪ್ರಾಣಿಯನ್ನು ಮೊಬೈಲ್ ಕ್ಯಾಮರಾ ಮೂಲಕ ಚಿತ್ರಿಕರಿಸಿದ್ದಾರೆ.

ಹೈನಾ ಬಗೆಯ ಪ್ರಾಣಿಗಳು ಈ ಪ್ರದೇಶದಲ್ಲಿ ಕಾಣುವುದು ತೀರಾ ಅಪರೂಪ. ಮಾಂಸಹಾರಿ ಸಸ್ತನಿ ಪ್ರಾಣಿಯಾದ ಹೈನಾ ಆಫ್ರಿಕಾ ಹಾಗೂ ಏಷ್ಯಾದ ಮಹಾ ದ್ವೀಪ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿವೆ. ನಾಲ್ಕು ಪ್ರಭೇದದ ಹೈನಾಗಳನ್ನು ಈವರೆಗೆ ಗುರುತಿಸಲಾಗಿದೆ. ಹೈನಾಗಳ ಶರೀರ ನಾಯಿಗಳಿಗೆ ಹೋಲುವ ರೀತಿಯಿದ್ದರೂ ಅವುಗಳ ನಡವಳಿಕೆ ಬೆಕ್ಕಿಗೆ ಹತ್ತಿರವಾಗಿರುತ್ತದೆ.

ವಿಶಿಷ್ಟ ನಗುಮುಖದ ಕತ್ತೆಕಿರುಬ (ಹೈನಾ) ಗುರುತಿಸಿಕೊಂಡಿದೆ. ಗುಂಪಿನಲ್ಲಿ ವಾಸಿಸುವ ಈ ಜೀವಿ ಸದ್ಯ ದಾಂಡೇಲಿಯಲ್ಲಿ ಒಂಟಿಯಾಗಿ ಕಾಣಿಸಿಕೊಂಡಿದೆ. ಭಾರತದ ಹಲವು ಕಡೆ ಹೈನಾ ಜೀವಿಸುತ್ತಿದ್ದು, ದಾಂಡೇಲಿ ಭಾಗದಲ್ಲಿ ಕಾಣಿಸಿಕೊಂಡಿದ್ದು ಅಪರೂಪ. ಅದರಲ್ಲಿಯೂ ಸ್ಥಳೀಯರ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದು ಇದೇ ಮೊದಲು. ಆಹಾರ ಅರೆಸಿ ಬಂದ ಹೈನಾ ಪ್ರಾಣಿಯೂ ರಸ್ತೆಯ ಮೇಲೆ ಓಡಾಡಿದ್ದು, ಅದರ ವಿಡಿಯೋ ಹರಿದಾಡುತ್ತಿದೆ.ಆತಂಕ ಪಡುವ ಅಗತ್ಯವಿಲ್ಲ: ನಿಲೇಶ ಶಿಂಧೆ ಸ್ಪಷ್ಟನೆ

ದಾಂಡೇಲಿ ತಾಲೂಕಿನ ಕುಳಗಿ ಹಾಗೂ ಜೋಯಿಡಾ ತಾಲೂಕಿನ ಗಣೇಶಗುಡಿ ಭಾಗದಲ್ಲಿ ಅಪರೂಪದ ಪ್ರಾಣಿಯಾದ ಕತ್ತೆಕಿರುಬ (ಹೈನಾ) ಕಾಣಿಸಿಕೊಂಡಿದ್ದು, ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಇದನ್ನು ವನ್ಯಜೀವಿ ಇಲಾಖೆ ತಂದು ಬಿಟ್ಟಿಲ್ಲ ಎಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ ಶಿಂಧೆ ಸ್ಪಷ್ಟಪಡಿಸಿದ್ದಾರೆ.ಗುರುವಾರ ನಗರದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕಚೇರಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.ಈ ಪ್ರಾಣಿ ಮಾನವನ ಮೇಲೆ ದಾಳಿ ಮಾಡುವಂತಹದ್ದಲ್ಲ. ಇದು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಬಹುಮೂಲ್ಯ ಕೊಡುಗೆ ನೀಡುತ್ತಾ ಬಂದಿದೆ. ಇದನ್ನು ನಮ್ಮ ಇಲಾಖೆ ತಂದು ಬಿಟ್ಟಿರುವುದಿಲ್ಲ. ನೆರೆಯ ಜಿಲ್ಲೆಯ ಕಾಡಿನಿಂದ ನಮ್ಮ ಭಾಗದ ಕಾಡಿಗೆ ಇದು ಬಂದಿದೆ. ಈ ಬಗ್ಗೆ ನಾವು ನಿಗಾ ವಹಿಸಿದ್ದೇವೆ. ಇದರ ಬಗ್ಗೆ ಯಾರಿಗೂ ಯಾವುದೇ ರೀತಿಯ ಭಯ ಬೇಡ. ಈ ಪ್ರಾಣಿ ಎಲ್ಲಿಯಾದರೂ, ಯಾರಿಗಾದರೂ ಕಂಡು ಬಂದಲ್ಲಿ ಹತ್ತಿರದ ವಲಯ ವಲಯಾರಣ್ಯಾಧಿಕಾರಿ ಇಲ್ಲವೇ ನಮ್ಮ ಇಲಾಖೆಯ ಸಿಬ್ಬಂದಿ ಗಮನಕ್ಕೆ ತರಬೇಕೆಂದು ವಿನಂತಿಸಿದ ನಿಲೇಶ ಶಿಂಧೆ ಅವರು ಭಯದಿಂದ ಈ ಪ್ರಾಣಿಯ ಜೀವಕ್ಕೆ ಯಾರೂ ಕೂಡ ತೊಂದರೆ ಕೊಡದೆ ವನ್ಯಜೀವಿಗಳ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.

ದಾಂಡೇಲಿ ತಾಲೂಕಿನ ಕುಳಗಿ ಮತ್ತು ಜೋಯಿಡಾ ತಾಲೂಕಿನ ಗಣೇಶಗುಡಿ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕತ್ತೆ ಕಿರುಬ ಪ್ರಾಣಿ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ‌. ಇದನ್ನು ವನ್ಯಜೀವಿ ಇಲಾಖೆಯವರೇ ತಂದು ಬಿಟ್ಟಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಟಲ್‌ ಬಿಹಾರಿ ವಾಜಪೇಯಿ ನವಭಾರತದ ಶಿಲ್ಪಿ: ವಿಪ ಸದಸ್ಯ ಸಿ.ಟಿ. ರವಿ
ಸತ್ಕರ್ಮ,ಸದ್ವಿಚಾರದಿಂದ ಮೋಕ್ಷ: ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ