ರಾಣಿಬೆನ್ನೂರು: ತಮ್ಮ ಒಪ್ಪಿಗೆ ಇಲ್ಲದೆಯೇ ಗರ್ಭಕೋಶ ಶಸ್ತ್ರ ಚಿಕಿತ್ಸೆಗೆ ಗುರಿಯಾದ ಸಂತ್ರಸ್ತೆಯರು ವಿಶೇಷ ಆರ್ಥಿಕ ನೆರವು ಘೋಷಣೆ ಮತ್ತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಅ. 2ರಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಹೀಗೆ ಆಪರೇಷನ್ ಗೆ ಒಳಗಾದ ಮಹಿಳೆಯರು ಇದೀಗ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ವಿಚಾರವಾಗಿ ಸಂತ್ರಸ್ತ ಮಹಿಳೆಯರು 2016ರಿಂದ ಹೋರಾಟ ನಡೆಸುತ್ತಾ ಬಂದಿದ್ದರೂ ಇದುವರೆಗೂ ಸರ್ಕಾರದಿಂದ ಯಾವುದೇ ರೀತಿ ನ್ಯಾಯ ದೊರಕಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯರ ಪೈಕಿ ಎಂಟು ಜನರು ಈಗಾಗಲೇ ಸಾವನ್ನಪ್ಪಿದ್ದಾರೆ. ಆದ್ದರಿಂದ ಅ. 2ರಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ವಿವಿಧ ಸಂಘಟನೆಗಳು, ಮಠಾಧೀಶರುಗಳ ಬೆಂಬಲದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ. ಲಲಿತವ್ವ ಲಮಾಣಿ, ಶೈಲಾ ರಂಗರೆಡ್ಡಿ, ಪಕ್ಕೀರವ್ವ ಮಲ್ಲಾಪುರ, ಲಕ್ಷ್ಮವ್ವ ಲಮಾಣಿ, ಗಿರಿಜವ್ವ ಚಕ್ರಸಾಲಿ, ಲಲಿತಾ ಘಂಟಿ, ಗಂಗವ್ವ ಲಮಾಣಿ, ಶಂಕ್ರಮ್ಮ ಹಾವೇರಿ, ಲಕ್ಷ್ಮವ್ವ ಮಣಕೂರ, ಡ್ಯಾಮವ್ವ ಲಮಾಣಿ, ಶಾಂತವ್ವ ಲಮಾಣಿ, ಬಸವ್ವ ಮಣಕೂರ, ಗೀತಾ ಲಮಾಣಿ, ಸುಮಂಗಲ ಪಾಟೀಲ, ಕಾಮಾಕ್ಷಿವ್ವ ಮಣಕೂರ ಮತ್ತಿತರರಿದ್ದರು.