ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ವ್ಯಕ್ತಿಯೋರ್ವನ ಕಿರುಕುಳದಿಂದ ಮಹದೇವನಾಯಕನ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಮಹದೇವನಾಯಕ ಮತ್ತು ಆತನ ಪುತ್ರಿ ಲೀಲಾವತಿ ಮೃತಪಟ್ಟಿದ್ದು, ಪತ್ನಿ ಗೌರಮ್ಮ ಅಪ್ರಾಪ್ತ ಬಾಲಕಿ ಬದುಕುಳಿದಿದ್ದು, ಈ ಪ್ರಕರಣದಲ್ಲಿ ಗ್ರಾಮದ ಮುಖಂಡರು ಮತ್ತು ನಾಯಕ ಸಮಾಜದ ಯಜಮಾನರ ಮಾತಿನಂತೆ ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕುಟುಂಬಕ್ಕೆ ತೊಂದರೆ ನೀಡಿದ ಚೀರನಹಳ್ಳಿ ಗ್ರಾಮದ ಲೋಕೇಶ್ ವಿರುದ್ದ ಪೋಕ್ಸೋ, ಎಸ್ಸಿ, ಎಸ್ಟಿ ದೌರ್ಜನ್ಯ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕಾಯ್ದೆಯಡಿ ಕೇಸು ದಾಖಲಿಸಿ, ಘಟನೆ ನಡೆದ ದಿನವೇ ಆತನನ್ನು ಬಂಧಿಸುವುದರ ಜತೆಗೆ ನಿರ್ಲಕ್ಷ್ಯವಹಿಸಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಪಿ.ಪಿ. ಸಂತೋಷ್, ಎಎಸ್.ಐ ಗಿರೀಶ್, ಮುಖ್ಯಪೇದೆ ರಾಘವೇಂದ್ರ ಅವರನ್ನು ಅಮಾನತು ಮಾಡಲಾಗಿದೆ ಎಂದರು.ಇದರ ಜತೆಗೆ ಇಡೀ ಪ್ರಕರಣದ ಬಗ್ಗೆ ನಾನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ ದೊರೆಯುವ ಎಲ್ಲ ಪರಿಹಾರವನ್ನು ಕೊಡಿಸಲು ಗಮನಹರಿಸಿದ್ದು, ಮೃತಪಟ್ಟ ಮಹದೇವನಾಯಕ ಮತ್ತು ಪುತ್ರಿ ಲೀಲಾವತಿ ಅವರಿಗೆ ಈಗ ತಲಾ 4.15 ಲಕ್ಷ ರು. ಪರಿಹಾರದ ಚೆಕ್ ಕೊಡಿಸಿದ್ದು, ಆ ನಂತರ 4.15 ಲಕ್ಷ ಮೊತ್ತದ ಚೆಕ್ ಕೊಡಿಸಿ ಇತರ ಅನುಕೂಲಗಳನ್ನು ಮಾಡಿಕೊಡುತ್ತೇನೆ ಎಂದು ಮಾಹಿತಿ ನೀಡಿದರು.
ಘಟನೆ ನಡೆದ ಕ್ಷಣದಿಂದ ಈವರೆಗೂ ನಾನು ಶಾಸಕನಾಗಿ ಜವಾಬ್ದಾರಿಯಿಂದ ವರ್ತಿಸಿದ್ದು ಇದಕ್ಕೆ ಸರ್ವರ ಸಹಕಾರವನ್ನು ಪಡೆದಿದ್ದೇನೆ ಮತ್ತು ಇದು ನನ್ನ ಕರ್ತವ್ಯವಾಗಿದ್ದು, ಇಂತಹ ವಿಚಾರಗಳಲ್ಲಿಯೂ ರಾಜಕೀಯ ಮಾಡುವವರಿಗೆ ದೇವರು ಒಳ್ಳೆಯ ಬುದ್ದಿಯನ್ನು ಕೊಡಲೆಂದು ಹಾರೈಸಿದರು.
ಶವವನ್ನು ಮುಂದಿಟ್ಟುಕೊಂಡು ಹೀನ ರಾಜಕಾರಣ ಮಾಡುವ ಪರಿಸ್ಥಿತಿ ನನಗೆ ಬಂದಿಲ್ಲ. ಅದು ಪ್ರಚಾರಕ್ಕಾಗಿ ರಾಜಕೀಯ ಮಾಡುವವರ ಜಾಯಮಾನ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಅವರ ವಿರುದ್ಧ ಶಾಸಕ ಡಿ.ರವಿಶಂಕರ್ ಪರೋಕ್ಷ ವಾಗ್ದಾಳಿ ನಡೆಸಿದರು.ಚಂದಗಾಲು ಗ್ರಾಮದ ಮಹದೇವನಾಯಕನ ಕುಟುಂಬದ ಆತ್ಮಹತ್ಯೆ ವಿಚಾರದಲ್ಲಿ ಅವರು ಅನಗತ್ಯವಾಗಿ ಕೆಟ್ಟ ರಾಜಕಾರಣ ಮಾಡುತ್ತಿದ್ದು, ಇದು ಯಾರಿಗೂ ಶೋಭೆ ತರುವ ವಿಚಾರವಲ್ಲ, ಈ ಹಿಂದೆ ನೀವು ಶಾಸಕರಾಗಿದ್ದ 15 ವರ್ಷಗಳ ಅವಧಿಯಲ್ಲಿ ಇಂತಹ ಹತ್ತಾರು ಘಟನೆಗಳು ನಡೆದಿದ್ದವು, ಆಗ ನಾವು ನಿಮಗೆ ಸಹಕಾರ ನೀಡಿರಲಿಲ್ಲವೇ ಎಂದು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಸೋಮವಾರ ಮಧ್ಯಾಹ್ನ ಮೃತ ಮಹದೇವನಾಯಕನ ಶವದ ಮುಂದೆ ಗಿಮಿಕ್ ರಾಜಕಾರಣ ಮಾಡಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ನಾನು ಮಾತನಾಡಿ ಬರೆಯಿಸಿದ್ದ ಪರಿಹಾರದ ಚೆಕ್ಕನ್ನು ಅಧಿಕಾರಿಗಳಿಗೆ ಬೆದರಿಸಿ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡರ ಮೂಲಕ ಕೊಡಿಸಿದ್ದು ಎಷ್ಟು ಸರಿ ಎಂದು ಕೇಳಿದರು.ಮೃತ ಕುಟುಂಬಕ್ಕೆ ಪರಿಹಾರದ ಚೆಕ್ ಕೊಡಿಸಲು ನೀವೇನು ಕ್ಷೇತ್ರದ ಶಾಸಕರೋ ಅಥವಾ ಉನ್ನತ ಅಧಿಕಾರಿಯೋ ಎಂದ ಅವರು, ಮುಂದಾದರೂ ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡಿ ಇಲ್ಲವಾದರೆ ನನಗೆ ಕೆಲಸ ಮಾಡುವುದು ಗೊತ್ತಿದೆ ಎಂದರು.