ಚಿತ್ರದುರ್ಗ ಲೋಕಸಭೆ ಕೈ ಟಿಕೆಟ್‌ಗೆ ನಾನೂ ಆಕಾಂಕ್ಷಿ

KannadaprabhaNewsNetwork |  
Published : Oct 06, 2023, 01:09 AM IST
ಚಿತ್ರದುರ್ಗ ಎರಡನೇ ಪುಟದಲೀಡ್ | Kannada Prabha

ಸಾರಾಂಶ

ಕಾಂಗ್ರೆಸ್ ಹೈಕಮಾಂಡ್ ಅನುಮತಿಸಿದರೆ ಸ್ಪರ್ಧೆ । ಕೆಪಿಸಿಸಿ ಕಾರ್ಯಾಧ್ಯಕ್ಷ , ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಸ್ಪಷ್ಟೋಕ್ತಿ

ಕಾಂಗ್ರೆಸ್ ಹೈಕಮಾಂಡ್ ಅನುಮತಿಸಿದರೆ ಸ್ಪರ್ಧೆ । ಕೆಪಿಸಿಸಿ ಕಾರ್ಯಾಧ್ಯಕ್ಷ , ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಸ್ಪಷ್ಟೋಕ್ತಿ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ. ಕಾಂಗ್ರೆಸ್ ಹೈಕಮಾಂಡ್ ಅನುಮತಿಸಿದರೆ ಕಣಕ್ಕಿಳಿಯಲು ಸಿದ್ಧವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಬಿ.ಎನ್ .ಚಂದ್ರಪ್ಪ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯರಿಗೆ ಟಿಕೆಟ್ ಎಂಬ ವದಂತಿಗಳ ಅಲ್ಲಗಳೆದರು. ಡಿ.ವಿ.ಸದಾನಂದಗೌಡ, ಶೋಭಾ ಕರಂದ್ಲಾಜೆ ಇವರೆಲ್ಲ ಎಲ್ಲಿಯವರು. ಸ್ಥಳೀಯರಾ ಎಂದು ಪ್ರಶ್ನಿಸಿದರು. ಯಾರು ಎಲ್ಲಿಯಾದರೂ ಚುನಾವಣೆಗೆ ಸ್ಪರ್ಧಿಸಬಹುದು ಇದಕ್ಕೆ ಎಲ್ಲೆ, ಗಡಿಗಳಿಲ್ಲವೆಂದರು.

ಜಾತ್ಯತೀತ ಜನತಾದಳ ತನ್ನ ನಿಲುವು ಬದಲಾಯಿಸಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಹಿಂದೊಮ್ಮೆ ಕೋಮುವಾದಿಗಳ ಅಧಿಕಾರದಿಂದ ದೂರ ಇಡಬೇಕೆಂದು ಕಾಂಗ್ರೆಸ್ ಜೊತೆ ಕೈ ಜೋಡಿಸಿ ಸರ್ಕಾರವನ್ನು ರಚನೆ ಮಾಡಲಾಗಿತ್ತು. ಇದೀಗ ಕೋಮುವಾದಿ ಬಿಜೆಪಿಯ ಅಪ್ಪಿಕೊಂಡಿದೆ. ಅಲ್ಲಿನ ಕೆಲವು ನಾಯಕರುಗಳಿಗೆ ಇದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಬೇಸತ್ತು ಕಾಂಗ್ರೆಸ್ ಸೇರುವ ಆತುರದಲ್ಲಿದ್ದಾರೆ. ಕಳೆದ ೩೦ ವರ್ಷದಿಂದ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸಿದ ಬಿಜೆಪಿ ಈಗ ಏಕಾಏಕಿಯಾಗಿ ಕೋಮುವಾದಿ ಪಕ್ಷವನ್ನು ಬೆಂಬಲಿಸ ಹೊರಟಿರುವುದು ಅಚ್ಚರಿಯ ಸಂಗತಿ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನತೆ ಗ್ಯಾರಟಿಯನ್ನು ನಂಬಿ ಕಾಂಗ್ರೆಸ್ ನ 136 ಮಂದಿ ಶಾಸಕರ ಗೆಲ್ಲಿಸಿ ಅಧಿಕಾರ ಕೊಟ್ಟಿದ್ದಾರೆ. ಐದು ಗ್ಯಾರಂಟಿಗಳಲ್ಲಿ ನಾಲ್ಕು ಈಡೇರಿಸಿ ಬದ್ಧತೆ ಮೆರೆದಿದ್ದೇವೆ. ಸಿಎಂ ಸಿದ್ದರಾಮಯ್ಯ ಅತ್ಯುತ್ತಮ ಆರ್ಥಿಕ ಸಚಿವ ಹಾಗೂ ಮುಖ್ಯಮಂತ್ರಿಗಳೂ ಕೂಡಾ ಹೌದು. ಸಂಕಷ್ಟ ಪರಿಸ್ಥಿತಿಯ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬರಗಾಲ ಬಂದಿದೆ. ಜಿಲ್ಲಾ ಸಚಿವರು ರೈತರ ಸಮಸ್ಯೆ ಅರ್ಥ ಮಾಡಿಕೊಂಡು ಸರ್ಕಾರ ಮತ್ತು ವಿಮಾ ಕಂಪನಿಗಳ ಜೊತೆ ಮಾತನಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಈ ಬಗ್ಗೆ ಸಚಿವರ ಗಮನ ಸೆಳೆಯಲಾಗುವುದು. ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬಳಿ ಚರ್ಚಿಸಲಾಗುವುದು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಫೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಜಿ.ಎಸ್ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಡಿ.ಎನ್.ಮೈಲಾರಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಜಯ್ಯಮ್ಮ, ಜಿಪಂ ಮಾಜಿ ಅಧ್ಯಕ್ಷ ಬಾಲರಾಜ್, ಕೆಪಿಸಿಸಿ ವಕ್ತಾರ ಬಾಲಕೃಷ್ಣ ಯಾದವ್, ಮೈಲಾರಪ್ಪ, ರಾಮನಾಯ್ಕ್, ಮಹಿಳಾ ಘಟಕದ ಅಧ್ಯಕ್ಷ ಗೀತಾ ನಂದಿನಿ ಗೌಡ, ಬಿ.ಟಿ.ಜಗದೀಶ್, ಲಕ್ಷ್ಮೀಕಾಂತ್, ಮುರುಳಾರಾಧ್ಯ, ಪ್ರಕಾಶ್ ಇದ್ದರು. ಶೋಭಾ, ಕಟಿಲ್‌ ಹೇಳಿಕೆ ಖಂಡನೀಯ

ಶಿವಮೊಗ್ಗದಲ್ಲಿ ನಡೆದ ಕೋಮು ಸಂಘರ್ಷಕ್ಕೆ ಕಾಂಗ್ರೆಸ್ ಕಾರಣವೆಂದು ಅಧ್ಯಕ್ಷ ಕಟೀಲ್ ಮತ್ತು ಸಚಿವ ಶೋಭಾ ಹೇಳಿರುವುದು ಖಂಡನೀಯ ಎಂದು ಬಿ.ಎನ್‌.ಚಂದ್ರಪ್ಪ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ತನ್ನ ಮುಖಕ್ಕೆ ತಾನೇ ಮಸಿಯನ್ನು ಬಳಿದುಕೊಳ್ಳುವುದಿಲ್ಲ. ಬೇರೆಯ ವರು ಮಾಡಿದರೆ ಅದನ್ನು ಖಂಡಿಸಿ ಅದಕ್ಕೆ ಕಾರಣರಾದವರಿಗೆ ಶಿಕ್ಷೆಯನ್ನು ಕೊಡಿಸುತ್ತದೆ. ಅದು ಬಿಟ್ಟು ಗಲಭೆಯನ್ನು ಮಾಡುವಂತೆ ಪ್ರಚೋದನೆ ಮಾಡುತ್ತದೆ ಎಂಬ ಈ ನಾಯಕರ ಹೇಳಿಕೆ ರಾಜಕೀಯಕ್ಕೆ ಶೋಭೆ ತರುವಂತಹದ್ದಲ್ಲವೆಂದರು.

ಕೇಂದ್ರ ಸಚಿವರು ಏನು ಮಾಡ್ತಿದ್ದಾರೆ?

ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ವೇಳೆ ಚಿತ್ರದುರ್ಗಕ್ಕೆ ಆಗಮಿಸಿದಾಗ ಭದ್ರ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ 5300ಕೋಟಿ ರುಪಾಯಿ ಅನುದಾನ ಒದಗಿಸುವುದಾಗಿ ಹೇಳಿದ್ದರು. ಭದ್ರಾ ಯೋಜನಾ ವ್ಯಾಪ್ತಿಯಲ್ಲಿ ಇಬ್ಬರು ಕೇಂದ್ರ ಸಚಿವರಿದ್ದಾರೆ. ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ ಏನು ಮಾಡುತ್ತಾರೆ. ತಮ್ಮದೇ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ದೊರಕಿಸಿಕೊಡಲಿ. ಈ ಭಾಗದ ಜನರ ಆಶಯಗಳ ಈಡೇರಿಸಲಿ ಎಂದು ಚಂದ್ರಪ್ಪ ಸಲಹೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ