ಕೊಪ್ಪಳ:ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಮಾತುಕೊಟ್ಟಿದ್ದಾರೆ.ಮೊದಲ ಹಂತದಲ್ಲಿಯೇ ಸಚಿವ ಸ್ಥಾನ ದೊರೆಯುತ್ತದೆ ಎನ್ನುವ ಭರವಸೆ ಹುಸಿಯಾಗಿದೆ. ಆದರೆ, ಎರಡನೇ ಹಂತದಲ್ಲಿ ಖಂಡಿತ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸವಿದೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕದ 41 ಶಾಸಕರ ಪೈಕಿ ನಮ್ಮ ಸಮಾಜದಲ್ಲಿ ನಾನೊಬ್ಬನೇ ಇರುವುದು. ಹೀಗಾಗಿ, ಆದ್ಯತೆ ಮೇಲೆ ನೀಡುತ್ತಾರೆ ಎನ್ನುವ ನಂಬಿಕೆ ಇತ್ತು. ಆದರೆ, ಕೊನೆಗಳಿಗೆಯಲ್ಲಿ ನನ್ನ ಹೆಸರು ಬರಲೇ ಇಲ್ಲ ಎಂದರು.
ಕೇಳದೆ ಯಾರು ಕೊಡುವುದಿಲ್ಲ, ಅದಕ್ಕೋಸ್ಕರ ನಾನು, ನನ್ನ ಸಹೋದರ ಹಾಗೂ ನನ್ನ ತಂದೆಯವರು ಸೇರಿದಂತೆ ಎಲ್ಲರೂ ಕೇಳಿದ್ದೇವೆ. ಹೈಕಮಾಂಡ್ ನಾಯಕರೊಂದಿಗೆ ಮಾತನಾಡಿದ್ದೇವೆ. ಅವರೆಲ್ಲರೂ ಸಕಾರಾತ್ಮಕವಾಗಿಯೇ ಹೇಳಿದ್ದರು. ಆದರೂ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಈ ಹಿಂದೆಯೇ ಸಿದ್ದರಾಮಯ್ಯ ತಾವೇ ಸಿಎಂ ಆಗಿದ್ದ ವೇಳೆಯಲ್ಲಿ ಕೊನೆಯ ಎರಡು ವರ್ಷ ನಿನ್ನನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದರು. ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ. ಹೀಗಾಗಿ, ನನ್ನನ್ನು ಎರಡನೇ ಹಂತದಲ್ಲಿಯಾದರೂ ಮಂತ್ರಿ ಮಾಡುತ್ತಾರೆ ಎಂದು ನಂಬಿದ್ದೇನೆ ಎಂದರು.
ಹಿರಿತನ ಇದೆ, ಮೂರು ಬಾರಿ ಶಾಸಕನಾಗಿ ಸತತವಾಗಿ ಆಯ್ಕೆಯಾಗಿದ್ದೇನೆ. ಪಕ್ಷ ಕಟ್ಟಲು ಶ್ರಮಿಸುತ್ತಿದ್ದೇನೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಉತ್ತರ ಕರ್ನಾಟಕಕ್ಕೆ ಬಂದಾಗಲೆಲ್ಲಾ ಸುತ್ತಾಡಿ, ಸಂಘಟನೆ ಮಾಡುವುದು, ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮಾಡಿದ್ದೇನೆ. ಆದರೆ, ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದೆ ಇರುವುದು ನೋವಾಗಿದೆ. ಆದರೆ, ಪಕ್ಷದ ಹೈಕಮಾಂಡ್ ಮುಂದಿನ ದಿನಗಳಲ್ಲಿ ಅವಕಾಶ ನೀಡುತ್ತದೆ ಎನ್ನುವ ನಂಬಿಕೆಯಲ್ಲಿದ್ದೇನೆ ಎಂದರು.