ಪಾರಂಪರಿಕ ಕಲ್ಲು ಒಡೆದು ಜೀವನ ನಡೆಸುವವರ ಪರವಾಗಿದ್ದೇನೆ: ಶಾಸಕ

KannadaprabhaNewsNetwork | Published : Jan 22, 2024 2:21 AM

ಸಾರಾಂಶ

ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕಲ್ಲು ಕೆಲಸ ಮಾಡುವವರ ಸಮಸ್ಯೆ ಕುರಿತು ಶಾಸಕ ಕೆ.ಎಸ್‌.ಆನಂದ್‌ ಚರ್ಚೆ ನಡೆಸಿದರು. ಅವರಿಗೆ ನೀಡಿರುವ ಅನುಮತಿ ನವೀಕರಿಸಲು ತೊಂದರೆ ಎದುರಾಗಿವೆ ಇದಕ್ಕೆ ಪರಿಹಾರ ಹುಡುಕಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಕಡೂರು

ತಾಲೂಕಿನಲ್ಲಿ ಈಗಾಗಲೆ ಪಾರಂಪರಿಕವಾಗಿ ಕಲ್ಲು ಒಡೆಯುವ ಕಾರ್ಯ ಮಾಡುತ್ತಿರುವವರು ನವೀಕರಣದ ಅರ್ಜಿಯನ್ನು ಮತ್ತೋಮ್ಮೆ ಪರಿಶೀಲನೆ ಮಾಡಿ ಅವರನ್ನೇ ಮುಂದುವರೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಾಗಬೇಕು ಎಂದು ಶಾಸಕ ಕೆ.ಎಸ್.ಆನಂದ್ ಒತ್ತಾಯಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪಾರಂಪರಿಕ ಕಲ್ಲು ಕೆಲಸ ಮಾಡುವವರ ಸಮಸ್ಯೆ ಕುರಿತ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಸುಮಾರು 86ಕ್ಕೂ ಹೆಚ್ಚಿನ ಬಡವರು ರಾಯಧನ ಪಾವತಿಸಿ ಕಲ್ಲುಭೂಮಿ(ಕೋರೆ) ಗುತ್ತಿಗೆ ಪಡೆದು ಕಲ್ಲು ಒಡೆದು ಜೀವನ ಮಾಡುತ್ತಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಅರ್ಜಿ ಹಾಕಿ ನವೀಕರಣಕ್ಕಾಗಿ ಕಾಯುತ್ತಿರುವ ಅರ್ಹ ಕಲ್ಲು ಒಡೆಯುವ ಕಾಯಕದವರಿಗೆ ಅನುಮತಿ ಮುಂದುವರೆಸಬೇಕಿದೆ. ಪಾರಂಪರಿಕವಾಗಿ ಕಲ್ಲು ಒಡೆದು ಜೀವನ ನಡೆಸುವವರ ಪರವಾಗಿ ನಾನಿದ್ದೇನೆ. ಈಗಿನ ಜಾಗದಲ್ಲೆ ಅವರು ಕಾಯಕ ಮುಂದುವರೆಸಲು ಯಾವ ತೊಂದರೆಯೂ ಇಲ್ಲ. ಆದರೆ ಅವರಿಗೆ ನೀಡಿರುವ ಅನುಮತಿ ನವೀಕರಿಸಲು ತೊಂದರೆ ಎದುರಾಗಿವೆ ಇದಕ್ಕೆ ಪರಿಹಾರ ಹುಡುಕಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಕೆಲವೆಡೆ ಕಲ್ಲು ಕೆಲಸದವರು ರಾಯಧನ ಪಾವತಿಸಿ ಕಲ್ಲು ಒಡೆಯಲು ಅನುಮತಿ ಪಡೆಯಲು ಹೊಸದಾಗಿ ಅಥವಾ ನವೀಕರಣಕ್ಕಾಗಿ ಅರ್ಜಿ ಹಾಕಿದ್ದಾರೆ. ಆದರೆ ಕೆಲ ಜಾಗಗಳು ಅರಣ್ಯ ಎಂದು ಅಥವಾ ಇನ್ಯಾವುದೋ ಇಲಾಖೆಗೆ ಸೇರಿ ಒಂದಿಷ್ಟು ಗೊಂದಲವಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಈ ಜಾಗಗಳು ಉಳ್ಳವರ ಪಾಲಾಗದೆ ಕಷ್ಟಜೀವಿಗಳಿಗೆ ಜೀವನಾಧಾರವಾಗಬೇಕೆಂಬ ಆಶಯ ನನ್ನದಾಗಿದೆ. ನಾನು ಶಾಸಕನಾಗಿರುವ ತನಕ ಈಗ ಕಲ್ಲು ಒಡೆಯುತ್ತಿರುವವರ ಜಾಗಕ್ಕೆ ಬೇರೆಯವರು ಬರುವುದು ಸಾಧ್ಯವಿಲ್ಲ ಇದು ಖಚಿತ ಎಂದು ತಿಳಿಸಿದರು.

ಶ್ರೀಮಂತ ಕ್ರಷರ್ ಮಾಲೀಕರು ಪಾರಂಪರಿಕ ಕೆಲಸಗಾರರು ಕಲ್ಲು ಕೆಲಸ ಮಾಡುತ್ತಿರುವ ಜಾಗವನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಇದು ಸಲ್ಲದು. ಯಾವುದೇ ಕಾರಣಕ್ಕೂ ಅವರಿಗೆ ಈ ಜಾಗಗಳನ್ನು ನೀಡಬಾರದು. ಇದರಿಂದ ಕಷ್ಟಜೀವಿಗಳಿಗೆ ಅನ್ಯಾಯವಾಗುತ್ತದೆ ಎಂದರು.

ಹಳೇ ಅರ್ಜಿಗಳನ್ನು ಪುನರ್ಪರಿಶೀಲನೆ ಮಾಡುವುದು, ಅಥವಾ ಇರುವ ಭೂಮಿಯನ್ನು ಬ್ಲಾಕ್‌ಗಳಾಗಿ ವಿಂಗಡಿಸಿ ಪಾರಂಪರಿಕ ಕಲ್ಲು ಕೆಲಸಗಾರರಿಗೆ ಅರ್ಹರಿಗೆ ಹಂಚಿಕೆ ಮಾಡುವ ಅವಕಾಶವಿದೆ ಕಾನೂನು ಪ್ರಕಾರ ಹಂಚಿಕೆಯಾಗಬೇಕು. ಜೊತೆಗೆ ಕಲ್ಲುಕೆಲಸ ಮಾಡುವ ಕಾಯಕಜೀವಿಗಳ ಜೀವನ ನಡೆಯುವಿಕೆಯನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು. ಒಟ್ಟಾರೆ ಸಮಸ್ಯೆಗೆ ಪರಿಹಾರ ದೊರೆಯುವ ತನಕ ಈಗ ನವೀಕರಣಕ್ಕಾಗಿ ದೊಡ್ಡ ಕ್ರಷರ್‌ಗಳಿಂದ ಬಂದಿರುವ ಅರ್ಜಿಗಳಿಗೆ ಹೊಸದಾಗಿ ನಿರಪೇಕ್ಷಣಾ ಪತ್ರ ನೀಡಬಾರದು. ಇಂದಿನ ಸಭಾ ನಡಾವಳಿಗಳನ್ನು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಗೆ ನೀಡಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ವಿಂಧ್ಯಾ ಅವರಿಗೆ ಸೂಚಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಎಂ.ಪಿ.ಕವಿರಾಜ್, ಕಲ್ಲು ಕೆಲಸಗಾರರ ಮತ್ತು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಆರ್.ಶಿವಕುಮಾರ್, ಕಾರ್ಯದರ್ಶಿ ಗೋಪಿ, ಮಹೇಂದ್ರ, ಬಾಬು, ಅರುಣ್‍ಕುಮಾರ್, ಗಿರೀಶ್, ರಾಜಣ್ಣ ಷಣ್ಮುಖಾಭೋವಿ, ಸುಬ್ರಮಣ್ಯ ಇದ್ದರು.

Share this article