ಲೋಕಸಭಾ ಚುನಾವಣೆಗೆ ನಾನು ಅಭ್ಯರ್ಥಿಯಲ್ಲ: ಶಾಸಕ ಕೆ.ಎಂ. ಶಿವಲಿಂಗೇಗೌಡ ಸ್ಪಷ್ಟನೆ

KannadaprabhaNewsNetwork |  
Published : Jan 15, 2024, 01:50 AM ISTUpdated : Jan 15, 2024, 05:38 PM IST
ಕೆ.ಎಂ. ಶಿವಲಿಂಗೇಗೌಡ | Kannada Prabha

ಸಾರಾಂಶ

ಲೋಕಸಭಾ ಚುನಾವಣೆಗೆ ನಾನು ಯಾವುದೇ ಕಾರಣಕ್ಕೂ ಅಭ್ಯರ್ಥಿಯಲ್ಲ, ಮಾಜಿ ಸಚಿವ ಬಿ. ಶಿವರಾಂ ಈ ರೀತಿಯ ಹೇಳಿಕೆ ಅವರ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಶನಿವಾರ ಅರಸೀಕೆರೆಯಲ್ಲಿ ಕನ್ನಡಪ್ರಭಕ್ಕೆ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಲೋಕಸಭಾ ಚುನಾವಣೆಗೆ ನಾನು ಯಾವುದೇ ಕಾರಣಕ್ಕೂ ಅಭ್ಯರ್ಥಿಯಲ್ಲ, ಮಾಜಿ ಸಚಿವ ಬಿ. ಶಿವರಾಂ ಈ ರೀತಿಯ ಹೇಳಿಕೆ ಅವರ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ನಗರದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ‘ನಗರದಲ್ಲಿ ಬಿ. ಶಿವರಾಂ ನನ್ನನ್ನು ಹಾಸನ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಲಿ ಎಂಬ ಹೇಳಿಕೆ ಸರಿಯಲ್ಲ. ಬಿ. ಶಿವರಾಂ ೪ ಬಾರಿ ಶಾಸಕರಾಗಿ, ಜಿಲ್ಲಾ ಮಂತ್ರಿಯಾಗಿ ಅಧಿಕಾರ ಮಾಡಿದ್ದಾರೆ. 

ಅದರ ಜತೆಯಲ್ಲಿ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾಗಿ ಸಂಘಟಿಸಿರುವ ಇವರು ನಿಲ್ಲಲಿ, ಅದನ್ನು ಬಿಟ್ಟು ಇನ್ನೊಬ್ಬರ ಹೆಸರನ್ನು ಹೇಳುವುದು ಸರಿಯಲ್ಲ’ ಎಂದರು.

‘ಶಾಸಕರಾಗುವ ನಿಟ್ಟಿನಲ್ಲಿ ಹಾಸನ, ಅರಸೀಕೆರೆ, ಬೇಲೂರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋತಿರುವ ಅನುಭವ ಹೆಚ್ಚಿದೆ ಇವರಿಗೆ. ಈಗಾಗಲೇ ನನಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಿ ಎಂದು ಹೇಳಿಕೊಳ್ಳುತ್ತಿರುವ ಬಿ. ಶಿವರಾಂಗೆ ನನ್ನ ಹೆಸರು ಹೇಳುವ ಅಧಿಕಾರವನ್ನು ನೀಡಿದವರು ಯಾರು? ಈ ಬೆಳವಣಿಗೆ ಉತ್ತಮವಲ್ಲ’ ಎಂದು ಕಿಡಿಕಾರಿದರು.

‘ರಾಜಕಾರಣದಲ್ಲಿ ದೇವರ ಆಶೀರ್ವಾದ ಮತ್ತು ಜನರ ಆಶೀರ್ವಾದದಿಂದ ನಾನು ೪ ಬಾರಿ ಶಾಸಕನಾಗಿದ್ದೇನೆ. ನಾನು ಜನರ ಸೇವೆಗಾಗಿ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸಲು ಇಚ್ಛಿಸುತ್ತೇನೆ. 

ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಜತೆಯಲ್ಲಿ ಹೈಕಮಾಂಡ್ ಜಿಲ್ಲೆಯ ಉಸ್ತುವಾರಿ ನೀಡಿದರೆ ಜಿಲ್ಲೆಯ ಅಭಿವೃದ್ದಿ ದೃಷ್ಟಿಯಲ್ಲಿ ನನ್ನ ಹೋರಾಟವಿರುತ್ತದೆ’ ಎಂದರು.

‘ಬಿ. ಶಿವರಾಂ ಅವರು ಹೈಕಮಾಂಡ್‌ನ ಒಪ್ಪಿಸಿ ಟಿಕೆಟ್ ಪಡೆದು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿ. ಅದನ್ನು ಬಿಟ್ಟು ಇಲ್ಲಸಲ್ಲದ ಮಾತುಗಳು ಬೇಡ. ಒಂದು ವೇಳೆ ಟಿಕೆಟ್ ತಂದರೆ ನಾನು ಇವರ ಪರವಾಗಿ ಹೋರಾಟ ಮಾಡಲಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಜನರಲ್ಲಿ ಗೊಂದಲ ಮೂಡಿಸುವುದು ಬೇಡ’ ಎಂದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ