ಕನ್ನಡಪ್ರಭ ವಾರ್ತೆ ಸೊರಬ
ಶನಿವಾರ ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಹತ್ತಿರ ಲೋಕಸಭಾ ಚುನಾವಣೆಯ ರಾಷ್ಟ್ರ ಭಕ್ತ ಬಳಗದ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿ, ಚುನಾವಣೆಯಲ್ಲಿ ನನ್ನ ಸ್ಪರ್ಧೆ ನಿಶ್ಚಿತ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಹಿಂದೆ ಮೋದಿಯವರಿಗಾಗಿ ರಾಯಣ್ಣ ಬ್ರಿಗೇಡ್ ಮಾಡಿದ್ದೇವು. ಆದರೆ, ಅದನ್ನು ನಮ್ಮ ಪಕ್ಷದ ನಾಯಕರೇ ಹಿಂದೆ ಸರಿಸಿದರು, ಈ ಚುನಾವಣೆಯಲ್ಲಿ ರಾಜ್ಯದಲ್ಲಿ 27 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಶಿವಮೊಗ್ಗದಲ್ಲಿ ನಾನು ಗೆದ್ದು, ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುಬೇಕು ಎಂದರು.
ಬಿಜೆಪಿಯಲ್ಲಿ ಸಿದ್ಧಾಂತದ ವಿರುದ್ಧವಾಗಿ ಕಾರ್ಯ ಚಟುವಟಿಕೆ ನಡೆಯುತ್ತಿದ್ದು, ಒಂದು ಕುಟುಂಬಕ್ಕೆ ಒಂದು ಹುದ್ದೆ ಎನ್ನುವುದನ್ನು ಗಾಳಿಗೆ ತೂರಲಾಗಿದೆ. ಹಿಂದೂ ಹೋರಾಟಗಾರರನ್ನು ಹತ್ತಿಕ್ಕುವ ಹಾಗೂ ಹಿಂದೂ ಧರ್ಮದ ಪರವಾಗಿ ಧ್ವನಿ ಎತ್ತುವವರನ್ನು ತುಳಿಯುವ ಕೆಲಸ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.ರಾಜ್ಯದಲ್ಲಿ ನಾಯಕರು ನುಡಿದಂತೆ ನಡೆಯಲಿಲ್ಲ. ಪುತ್ರನಿಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿ ಅದರಂತೆ ನಡೆದುಕೊಳ್ಳಲಿಲ್ಲ. ಪಕ್ಷ ಸಂಘಟನೆಗಾಗಿ ಕಳೆದ ನಾಲ್ಕು ದಶಕದಿಂದ ಶ್ರಮಿಸಿದ್ದೇನೆ. ಇದೀಗ ಪಕ್ಷದಲ್ಲಿ ನಡೆಯುತ್ತಿರುವ ಕುಟುಂಬ ರಾಜಕಾರಣದ ವಿರುದ್ಧವಾಗಿ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯುವ ದಿಟ್ಟ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ದೆಹಲಿಯಲ್ಲಿ ಭೇಟಿಯಾಗಲು ಆಹ್ವಾನ ನೀಡಿದ್ದರು. ನಂತರ ಅವರ ಭೇಟಿ ಸಾಧ್ಯವಾಗಲಿಲ್ಲ. ಇದರಿಂದ ತಮ್ಮ ಸ್ಪರ್ಧೆಗೆ ಅವರು ಪರೋಕ್ಷವಾಗಿ ಒಪ್ಪಿಗೆ ಸೂಚಿಸಿ ಕಳುಹಿಸಿದ್ದಾರೆ. ಇದು ನನಗೆ ಲಾಭವಾಗುವ ಸಾಧ್ಯತೆ ಇದೆ. ತಮ್ಮ ಸ್ಪರ್ಧೆ ಏನಿದ್ದರೂ ಒಂದು ಕುಟುಂಬದ ವಿರುದ್ಧವೇ ಹೊರತು. ಕೇಂದ್ರದ ವಿರುದ್ಧವಲ್ಲ ಎಂದರು.