ಶಾಸಕ ಉದಯ್‌ರನ್ನು ಹದ್ದುಬಸ್ತಿನಲ್ಲಿಡಿ: ಸಿಎಸ್ ಪಿ

KannadaprabhaNewsNetwork | Published : Apr 7, 2024 1:46 AM

ಸಾರಾಂಶ

ಮಂಡ್ಯ ಎಂದಾಗ ರಾಷ್ಟ್ರ, ರಾಜ್ಯ ತಿರುಗಿನೋಡುವಷ್ಟರ ಮಟ್ಟಿಗೆ ಜಿಲ್ಲೆಯ ರಾಜಕೀಯ ನಾಯಕರು ಆಡಳಿತ ನಡೆಸಿ ಹೋಗಿದ್ದಾರೆ. ಜಿಲ್ಲೆಯ ಗೌರವ-ಮರ್ಯಾದೆಯನ್ನು ಎತ್ತಿಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಗಂಡಸ್ತನ ವಿಚಾರದಲ್ಲಿ ಸಭ್ಯತೆಯ ಎಲ್ಲೆ ಮೀರಿ ಮಾತನಾಡಿರುವ ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಅವರನ್ನು ಕಾಂಗ್ರೆಸ್ ನಾಯಕರು ಹದ್ದುಬಸ್ತಿನಲ್ಲಿಡದಿದ್ದರೆ ಮುಂದಾಗುವ ಅನಾಹುತಗಳಿಗೆ ನೀವೇ ಹೊಣೆಯಾಗಬೇಕಾಗುತ್ತದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಎಚ್ಚರಿಕೆ ನೀಡಿದರು.

ರಾಜಕೀಯ ಜೀವನದಲ್ಲಿ ಟೀಕೆಗಳು ಎದುರಾಗುವುದು ಸಾಮಾನ್ಯ. ಆ ಟೀಕೆಗಳು ಆರೋಗ್ಯಕರವಾಗಿರಬೇಕು. ಕುಟುಂಬದ ಸದಸ್ಯರವರೆಗೆ ಬರಬಾರದು. ಜನಪ್ರತಿನಿಧಿಯಾದವರು ಮೂರನೇ ದರ್ಜೆಯ ವ್ಯಕ್ತಿಗಳು ಮಾತನಾಡಿದಂತೆ ಮಾತನಾಡಬಾರದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಂಡ್ಯ ಎಂದಾಗ ರಾಷ್ಟ್ರ, ರಾಜ್ಯ ತಿರುಗಿನೋಡುವಷ್ಟರ ಮಟ್ಟಿಗೆ ಜಿಲ್ಲೆಯ ರಾಜಕೀಯ ನಾಯಕರು ಆಡಳಿತ ನಡೆಸಿ ಹೋಗಿದ್ದಾರೆ. ಜಿಲ್ಲೆಯ ಗೌರವ-ಮರ್ಯಾದೆಯನ್ನು ಎತ್ತಿಹಿಡಿದಿದ್ದಾರೆ. ಅವರಂತೆ ನಡೆದುಕೊಳ್ಳಲು ನಮ್ಮಿಂದ ಸಾಧ್ಯವಾಗದಿದ್ದರೂ ಅವರ ಮಾರ್ಗದರ್ಶನದಲ್ಲಿ ಮುನ್ನಡೆದು ಆ ನಾಯಕರಿಗೆ ಅಗೌರವ ತರುವಂತಹ ರೀತಿಯಲ್ಲಿ ನಡೆದುಕೊಳ್ಳದಿದ್ದರೆ ಸಾಕು. ಯಾರೇ ಆಗಲಿ ಹದ್ದುಮೀರಿದ, ಸಭ್ಯತೆಯನ್ನು ಮೀರಿ ಮಾತುಗಳು ಯಾರಿಗೂ ಗೌರವ ತಂದುಕೊಡುವುದಿಲ್ಲ ಎಂದು ತಿಳಿಸಿದರು.

ರವೀಂದ್ರ ಶ್ರೀಕಂಠಯ್ಯನವರ ತಾತ ಚುಂಚೇಗೌಡರ ಧರ್ಮಕಾರ್ಯಗಳನ್ನು ಕಂಡು ಮಹಾರಾಜರೇ ಅವರ ಮನೆಗೆ ಬಂದು ಹೋಗಿದ್ದಾರೆ. ಆ ಕುಟುಂಬದ ಹಿನ್ನೆಲೆಯಲ್ಲಿ ಅರಿತುಕೊಳ್ಳದೆ ಅಧಿಕಾರ, ಹಣದ ಮದದಲ್ಲಿ ಬಾಯಿಗೆ ಬಂದಂತೆ ಮಾತನಾಡಬಾರದು. ನಾಲಿಗೆ ನಾಗರೀಕತೆ ಹೇಳುತ್ತದೆ. ಯಾರೇ ಆಗಲಿ ನಾಲಿಗೆಯ ಮೇಲೆ ಹಿಡಿತವಿರಬೇಕೇ ಹೊರತು ಹರಿತವಿರಬಾರದು ಎಂದು ಆಕ್ರೋಶದಿಂದ ನುಡಿದರು.

ಹಿರಿಯರಾದ ಮಾಜಿ ಸಚಿವ ತಮ್ಮಣ್ಣನವರ ಬಗ್ಗೆಯೂ ಲಘುವಾಗಿ ಮಾತನಾಡಿದ್ದಾರೆ. ತಮ್ಮಣ್ಣನವರ ಕುಟುಂಬದವರು ನೂರಾರು ಎಕರೆ ಜಮೀನ್ದಾರರಾಗಿ ಕಷ್ಟದಲ್ಲಿರುವವರಿಗೆ ನೆರವಾಗಿದ್ದಾರೆ. ರಾಜ್ಯಮಟ್ಟದ ಅಧಿಕಾರಿಯಾಗಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ರಾಜಕೀಯದಲ್ಲಿ ಮುನ್ನಡೆದಿದ್ದಾರೆ. ಅವರ ಕುಟುಂಬದ ಬಗ್ಗೆಯೂ ಹಗುರವಾಗಿ ಮಾತನಾಡಿ ಉದಯ್ ತಮ್ಮ ಕೀಳು ವ್ಯಕ್ತಿತ್ವವನ್ನು ಪ್ರದರ್ಶಿಸಿದ್ದಾರೆ ಎಂದು ದೂರಿದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಸುರೇಶ್‌ಗೌಡ, ಜಿಲ್ಲಾಧ್ಯಕ್ಷ ಡಿ.ರಮೇಶ್ ಇದ್ದರು.

Share this article