ಕನ್ನಡಪ್ರಭ ವಾರ್ತೆ ಶಿರಸಿ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ 2006-07ರಲ್ಲಿಯೇ ಚರ್ಚೆಯಾಗಿದ್ದು, ಯೋಜನೆ ಬಗ್ಗೆ ತಿಳಿದಾಗಿನಿಂದಲೂ ನಾನು ಅದನ್ನು ವಿರೋಧಿಸಿದ್ದೇನೆ. ಇಂಧನ ಇಲಾಖೆ ಗಮನಕ್ಕೆ ತಂದು ಯೋಜನೆ ಕೈ ಬಿಡುವಂತೆ ಪತ್ರವನ್ನೂ ಬರೆದಿದ್ದೇನೆ. ಈಗಲೂ ವಿರೋಧ ವ್ಯಕ್ತಪಡಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸ್ಪಷ್ಟಪಡಿಸಿದರು.ಸೋಮವಾರ ಇಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಶರಾವತಿ ಯೋಜನೆಯ ಟೆಂಡರ್ ಆಗಿ ಪಬ್ಲಿಕ್ ಹಿಯರಿಂಗ್ ಆಗಿದೆ. ಈ ಯೋಜನೆಯನ್ನು ಕೇವಲ ವಿರೋಧ ಪಕ್ಷದವರು ಮಾತ್ರ ವಿರೋಧಿಸಿಲ್ಲ. ಜನರಿಗೆ ತೊಂದರೆ ಆಗಬಾರದು ಎಂಬ ಉದ್ದೇಶಕ್ಕೆ ನಾವೂ ವಿರೋಧಿಸಿದ್ದೇವೆ. ಆದರೆ, ಯೋಜನೆಯಿಂದ ತೊಂದರೆ ಆಗುವುದಿಲ್ಲ ಎಂದು ಯೋಜನೆಯ ಪರವಾಗಿ ಮಾತನಾಡುವವರು ಹೇಳುತ್ತಿದ್ದಾರೆ. ಅಂತಿಮ ತೀರ್ಮಾನ ಏನಾಗುತ್ತದೆ ನೋಡೋಣ, ಅದೇ ರೀತಿ ಬೇಡ್ತಿ ನದಿ ನೀರನ್ನು ನಾವು ಬೇರೆ ಜಿಲ್ಲೆಗೆ ಕೊಡುವುದಿಲ್ಲ ಎಂದು ಇಪ್ಪತ್ತು ವರ್ಷದಿಂದಲೂ ಹೇಳುತ್ತಾ ಬಂದಿದ್ದೇವೆ. ಅದು ಕಾರ್ಯರೂಪಕ್ಕೆ ಬರದ ಯೋಜನೆ ಎಂದರು.ಸಿದ್ದಾಪುರವನ್ನು ಸಾಗರಕ್ಕೆ ಸೇರಿಸುವುದಿಲ್ಲ. ಈ ಹಿಂದೆ ಭಟ್ಕಳವನ್ನು ಕುಂದಾಪುರಕ್ಕೆ ಸೇರಿಸುವ ಬಗ್ಗೆಯೂ ಪ್ರಸ್ತಾವನೆಯಾಗಿತ್ತು. ಕಾರವಾರವನ್ನು ಗೋವಾಕ್ಕೆ ಸೇರಿಸುತ್ತೇವೆ ಎಂದಿದ್ದರು. ಅಂತಹ ಯಾವುದೇ ಪ್ರಯತ್ನ ಸರ್ಕಾರದ ಮುಂದೂ ಇಲ್ಲ, ನಮ್ಮ ಗಮನಕ್ಕೂ ಬಂದಿಲ್ಲ. ಎರಡು ಜಿಲ್ಲೆ ಅಗತ್ಯತೆ ಇದ್ದರೆ ಇಲ್ಲಿಯೇ ನಾವು ನಿರ್ಧಾರ ಕೈಗೊಳ್ಳೋಣ. ಎಲ್ಲರ ಅಭಿಪ್ರಾಯದಂತೆ ಎರಡು ಜಿಲ್ಲೆಯ ಬಗ್ಗೆ ತೀರ್ಮಾನ ಕೈಗೊಳ್ಳೋಣ ಎಂದರು.ದೇಶಮಟ್ಟದಲ್ಲೂ ಜಾತಿ ಸಮೀಕ್ಷೆ ನಡೆಯುತ್ತಿದೆ, ನಮ್ಮ ರಾಜ್ಯದಲ್ಲಿಯೂ ಆರಂಭಿಸಿದ್ದೇವೆ. ಆದರೆ, ಕೇಂದ್ರ ಸರ್ಕಾರ ಬರೇ ಜಾತಿಯನ್ನಷ್ಟೇ ಗಮನಿಸಿ ಸಮೀಕ್ಷೆ ನಡೆಸುತ್ತಿದ್ದರೆ ನಾವು ಜನರ ಆರ್ಥಿಕ ಪರಿಸ್ಥಿತಿ, ಶಿಕ್ಷಣಿಕ ಸ್ಥಿತಿ ಗತಿಯನ್ನೂ ಗಮನಿಸಿ ಸಮೀಕ್ಷೆ ನಡೆಸುತ್ತಿದ್ದೇವೆ. ಬಡವರು ಇನ್ನೂ ಎಷ್ಟಿದ್ದಾರೆ, ಅವರ ಸ್ಥಿತಿ ಗತಿ ಯಾವ ಮಟ್ಟದಲ್ಲಿದೆ ಎಂಬುದನ್ನೂ ಸಮೀಕ್ಷೆ ನಡೆಸುತ್ತಿದ್ದೇವೆ. ಈಗ ಶಿಕ್ಷಕರು ರಜೆಯಲ್ಲಿ ಇದ್ದಾರೆ. ಸಮೀಕ್ಷೆ ಮಾಡಬೇಕಾದ ಮನೆಗಳ ಸಂಖ್ಯೆಯೂ ಜಾಸ್ತಿ ಇದೆ. ಹೀಗಾಗಿ, ಆದಷ್ಟು ಬೇಗ ಈ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂಬುದು ನಮ್ಮ ನಿರ್ಧಾರ. ಕೆಲವೆಡೆ ಶಿಕ್ಷಕರ ಕೊರತೆ ಇದೆ, ಆದರೆ ಗೊಂದಲಗಳಿಲ್ಲ. ಈ ಸಮೀಕ್ಷೆಯನ್ನು ಮುಂದೂಡಬೇಕು ಎಂಬ ಆಗ್ರಹ ಅರ್ಥವಿಲ್ಲದ್ದು, ಸಮೀಕ್ಷೆ ಮಾಡಬೇಕೆಂದಾದರೆ ಇಂದು ಮಾಡಿದರೇನು? ನಾಳೆ ಮಾಡಿದರೇನು ಎಂದು ಪ್ರಶ್ನಿಸಿದರು.ಬಡವರ ಬಗ್ಗೆ ನಾವು ಇನ್ನೂ ಏನೇನು ಕಾರ್ಯ ಕೈಗೊಳ್ಳಬಹುದು ಎಂಬುದು ಈ ಸಮೀಕ್ಷೆಯಿಂದ ತಿಳಿದು ಬರಲಿದೆ. ವಿರೋಧ ಪಕ್ಷಗಳು ಬರೇ ವಿರೋಧ ಮಾಡುವ ಸಲುವಾಗಿಯೇ ಇದ್ದಾರೆ. ಅವರ ಆಪಾದನೆಗೆ ಅರ್ಥವಿಲ್ಲ. ಅಭಿವೃದ್ಧಿ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. 10 ದಿನದಲ್ಲಿ ಸಮೀಕ್ಷೆ ಮುಗಿಸಬೇಕು ಎಂಬುದು ನಮ್ಮ ಉದ್ದೇಶವಾಗಿದ್ದು ಸಾಧ್ಯವಾಗುತ್ತದೆಯೋ ಇಲ್ಲವೋ ನೋಡಬೇಕು ಎಂದರು.ಕೆಡಿಸಿಸಿ ಬ್ಯಾಂಕ್ ಚುನಾವಣೆಯು ಯಾರ ನೇತೃತ್ವ ಎಂಬುದು ಬರುವುದಿಲ್ಲ. ಪ್ರತಿ ಅಭ್ಯರ್ಥಿಯೂ ಅವನ ಶಕ್ತಿಯ ಮೇಲೆ ಗೆಲುವು-ಸೋಲು ಕಾಣುತ್ತಾನೆ. ಈ ರೀತಿಯ ಅಭ್ಯರ್ಥಿಗಳಲ್ಲಿ ನಾನೂ ಒಬ್ಬ. ಇದು ಬೆಳಗಾವಿ ಜಿಲ್ಲೆಯಲ್ಲ, ಹೀಗಾಗಿ ಇಲ್ಲಿ ಗುಂಪು ಬಣಗಳು ಹುಟ್ಟುವುದಿಲ್ಲ. ಸಹಕಾರಿ ವ್ಯವಸ್ಥೆ ಬೆಳೆದಿದ್ದು ನಮ್ಮ ಜಿಲ್ಲೆಯಲ್ಲಿಯೇ. ಬುದ್ಧಿವಂತ ಗ್ರಾಹಕರಿಂದಾಗಿ ಸಹಕಾರಿ ಸಂಘ ಬೆಳೆದಿದೆಯಲ್ಲದೇ ಯಾರೊಬ್ಬರ ಮುಂದಾಳತ್ವದಲ್ಲಿ ಅಥವಾ ಗುಂಪಿನ ಮೂಲಕ ಆಯ್ಕೆ ಮಾಡಲು ಇಲ್ಲಿಯ ಸಹಕಾರಿ ಧುರೀಣರು ಅವಕಾಶ ನೀಡುವುದಿಲ್ಲ ಎಂದು ಮಂಕಾಳ ವೈದ್ಯ ಹೇಳಿದರು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಾನು ಎಲ್ಲಿಯೂ ಯಾರನ್ನೂ ನಿಲ್ಲಿಸಿಲ್ಲ. ಆದರೆ, ಗೆದ್ದವರೆಲ್ಲರೂ ನಮ್ಮವರೇ ಆಗುತ್ತಾರೆ. ಶಿವರಾಮ ಹೆಬ್ಬಾರ ಅವರೂ ನಮ್ಮವರೇ ಎಂದರು.