ಶಾಲಾ ವ್ಯಾಪ್ತಿಯಲ್ಲಿಯೇ ನಿಯೋಜಿಸಲು ಶಿಕ್ಷಕರ ಆಗ್ರಹ

KannadaprabhaNewsNetwork |  
Published : Sep 23, 2025, 01:05 AM IST
22ಎಚ್.ಎಲ್.ವೈ-2: ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ  ಶಾಸಕ ಆರ್.ವಿ.ದೇಶಪಾಂಡೆಯವರ ನಿವಾಸಕ್ಕೆ ತೆರಳಿದ ಶಿಕ್ಷಕರ ನಿಯೋಗವು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ನಿಯೋಜನೆ ಮಾಡಿರುವ ಶಿಕ್ಷಕರಿಗಾಗುವ ತೊಂದರೆಯನ್ನು ಬಗೆಹರಿಸಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಷ್ ನಾಯ್ಕ ಅವರು ಮನವಿಯನ್ನು ಸಲ್ಲಿಸಿದರು. | Kannada Prabha

ಸಾರಾಂಶ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನೇಮಕಗೊಂಡಿರುವ ಶಿಕ್ಷಕರಿಗೆ ತಮ್ಮ ಶಾಲಾ ವ್ಯಾಪ್ತಿಯಲ್ಲಿಯೇ ನಿಯೋಜನೆ ಮಾಡಬೇಕೆಂದು ಹಳಿಯಾಳ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಹಳಿಯಾಳ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನೇಮಕಗೊಂಡಿರುವ ಶಿಕ್ಷಕರಿಗೆ ತಮ್ಮ ಶಾಲಾ ವ್ಯಾಪ್ತಿಯಲ್ಲಿಯೇ ನಿಯೋಜನೆ ಮಾಡಬೇಕೆಂದು ಹಳಿಯಾಳ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಆಗ್ರಹಿಸಿದೆ.

ಸೋಮವಾರ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕ ಆರ್.ವಿ. ದೇಶಪಾಂಡೆಯವರ ನಿವಾಸಕ್ಕೆ ತೆರಳಿದ ಶಿಕ್ಷಕರ ನಿಯೋಗವು ತೊಂದರೆ ಬಗೆಹರಿಸಬೇಕೆಂದು ಮನವಿ ಸಲ್ಲಿಸಿದರು.

ಶಿಕ್ಷಕರ ಸಮಸ್ಯೆ ಪ್ರಸ್ತಾಪಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯ್ಕ್ ಬಾವಿಕೇರಿ, ಗಣತಿಯಲ್ಲಿ ನಿಯೋಜನೆ ಮಾಡಿರುವ ಶಿಕ್ಷಕರಿಗೆ ಅವರ ಸೇವಾ ಕ್ಷೇತ್ರ ಬಿಟ್ಟು ಬೇರೆ ಗ್ರಾಮಗಳಿಗೆ ನಿಯೋಜನೆ ಮಾಡಲಾಗಿದ್ದು, ಇದರಿಂದ ಬೇರೆಡೆ ಪರಿಚಯವಿಲ್ಲದ ಸ್ಥಳದಲ್ಲಿ ಪರಿಣಾಮಕಾರಿಯಾಗಿ ಗಣತಿ ಮಾಡಲು ಅನಾನುಕೂಲಗಳಾಗಲಿವೆ. ಈ ಸಮಸ್ಯೆಯು ಇಡೀ ರಾಜ್ಯದಲ್ಲಿದೆ. ಆದಕಾರಣ ತಾವುಗಳು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೊಂದಿಗೆ ಹಾಗೂ ಜಿಲ್ಲಾಧಿಕಾರಿಗೆ ಸಂಪರ್ಕಿಸಿ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.

ಶಿಕ್ಷಕರ ಅಹವಾಲು ಆಲಿಸಿದ ಶಾಸಕ ದೇಶಪಾಂಡೆಯವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಕರೆ ಮಾಡಿ ಗಣತಿದಾರರಿಗೆ ಆಗುತ್ತಿರುವ ಅನಾನುಕೂಲತೆ ಮನವರಿಕೆ ಮಾಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದರು. ತದನಂತರ ಜಿಲ್ಲಾಧಿಕಾರಿಗೆ ಕರೆ ಮಾಡಿದ ಶಾಸಕರು ಶಿಕ್ಷಕರಿಗೆ ಅವರ ಸೇವಾಕ್ಷೇತ್ರ ವ್ಯಾಪ್ತಿ ಬಿಟ್ಟು ಗಣತಿ ಮಾಡಲು ಹೊರಗಡೆ ನಿಯೋಜನೆ ಮಾಡಿರುವ ಕಾರಣಗಳೇನು ಎಂದು ಪ್ರಶ್ನಿಸಿ, ಆಗಿರುವ ಪ್ರಮಾದ ಸರಿಪಡಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.

ಗಣತಿ ಗೊಂದಲ:

ಗಣತಿದಾರರಿಗೆ ಪಟ್ಟಣದ ಪುರಸಭಾ ಭವನದಲ್ಲಿ ಸೋಮವಾರ ಸಮೀಕ್ಷೆಯ ಮಾಹಿತಿ ನೀಡಲು ಕರೆಯಲಾಗಿತ್ತು. ತಮ್ಮ ಸೇವಾ ಕ್ಷೇತ್ರ ಬಿಟ್ಟು ಬೇರೆಡೆ ನಿಯೋಜನೆ ಮಾಡಿರುವುದರಿಂದ ಅಸಮಾಧಾನದಲ್ಲಿದ್ದ ಶಿಕ್ಷಕ ವೃಂದವು ಸಮೀಕ್ಷಾ ಕಾರ್ಯದಲ್ಲಿ ಬಳಸಲು ಸೂಚಿಸಿದ ಆ್ಯಪ್ ತೆರೆಯದೇ ಇರುವುದರಿಂದ ಮತ್ತಷ್ಟು ಪರದಾಡಿದರು. ಬಿಸಿಎಂ ಇಲಾಖೆಯು ಗಣತಿದಾರರಿಗೆ ಕೇವಲ ಟೋಪಿ ಹಾಗೂ ಸಮೀಕ್ಷಾ ಕೈಪಿಡಿ ವಿತರಿಸಿತು, ಹೊರತು ಮನೆಗಳ ಪಟ್ಟಿ ಪೂರೈಸಲಿಲ್ಲ, ಇದರಿಂದ ಗಣತಿದಾರರು ಆಕ್ರೋಶ ವ್ಯಕ್ತಪಡಿಸಿದರು. ಗಣತಿದಾರರ ಸಂದೇಹಗಳಿಗೆ ಉತ್ತರಿಸಲಾಗದೇ ಬಿಸಿಎಂ ಅಧಿಕಾರಿಗಳು ಹೊರನಡೆದರು. ಈ ಮಧ್ಯೆ ಆ್ಯಪ್‌ ತೆರಯದೇ ಇರುವುದರಿಂದ ಗೊಂದಲಕ್ಕೊಳಗಾದ ಶಿಕ್ಷಕಿಯೊರ್ವರು ಬಿಪಿ ಶುಗರ್ ಹೆಚ್ಚಾಗಿ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಉಪಚರಿಸಲಾಯಿತು. ಶಿಕ್ಷಕಿಯು ಗುಣಮುಖರಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

PREV

Recommended Stories

ಅಕ್ರಮ ಶಸ್ತ್ರಾಸ್ತ್ರ: ನಿನ್ನೆಯೂ ವಿಚಾರಣೆಗೆ ತಿಮರೋಡಿ ಗೈರು
ಸಿದ್ದು ಆಳ್ವಿಕೆ ಟಿಪ್ಪು ಆಳ್ವಿಕೆ ನಾಚಿಸುವಂತಿದೆ : ಬಿವೈವಿ