ಕನ್ನಡಪ್ರಭ ವಾರ್ತೆ ಶಿವಮೊಗ್ಗ ಈ ಬಾರಿ ಲೋಕಸಭಾ ಚುನಾವಣೆಗೆ ಹಾವೇರಿ-ಗದಗ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನನಗೆ ಸಿಗಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಹಾವೇರಿ ಒಂದೇ ಅಲ್ಲ, ಅನೇಕ ಲೋಕಸಭಾ ಕ್ಷೇತ್ರಗಳಲ್ಲಿ ಟಿಕೆಟ್‌ಗಳ ಬಗ್ಗೆ ಗೊಂದಲಗಳಿವೆ. ಕಾರ್ಯಕರ್ತರು ಪ್ರಶ್ನೆ ಮಾಡುವುದರಿಂದ ಈ ಬಗ್ಗೆ ಆತಂಕ ಹೆಚ್ಚಾಗಿದೆ. ಆದರೆ, ನನಗೆ ಪಕ್ಷದ ಟಿಕೆಟ್ ಸಿಗುವ ಸ್ಪಷ್ಟ ವಿಶ್ವಾಸವಿದೆ. ಕಾರ್ಯಕರ್ತರಲ್ಲಿರುವ ಚಿಕ್ಕ ಗೊಂದಲ ಶೀಘ್ರದಲ್ಲಿಯೇ ನಿವಾರಣೆ ಆಗುತ್ತೆ ಎಂದು ಹೇಳಿದರು.
ಬಿಜೆಪಿ ಪಕ್ಷ ನಮಗೆ ತಾಯಿಯ ಸ್ವರೂಪ. ಯಾವುದೇ ಕಾರಣಕ್ಕೂ ತಾಯಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚಲ್ಲ. ತಂದೆ ಈಶ್ವರಪ್ಪನವರಿಗೆ ಪಕ್ಷ ಚುನಾವಣೆ ರಾಜಕಾರಣದಿಂದ ನಿವೃತ್ತಿಯಾಗಿ ಎಂದು ಸೂಚನೆ ನೀಡಿದ ತಕ್ಷಣವೇ ರಾಜೀನಾಮೆ ನೀಡಿದ್ದರು. ಪಕ್ಷಕ್ಕೆ ನಿಷ್ಠರಾಗಿ ನಡೆದುಕೊಂಡರು. ಬಳಿಕವೂ ರಾಜ್ಯಾದ್ಯಂತ ಪ್ರವಾಸ ಮಾಡಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಪಕ್ಷದ ವರಿಷ್ಠರು ನನ್ನನ್ನು ಗುರುತಿಸಿ ಟಿಕೆಟ್ ನೀಡುವ ಭರವಸೆ ನೀಡಿರುವುದರಿಂದ ಕ್ಷೇತ್ರದಲ್ಲಿ ಓಡಾಡಿದ್ದೇನೆ. ಸಂಘಟನೆ ಮಟ್ಟದಲ್ಲಿಯೂ ಸಹ ಕ್ಷೇತ್ರದಲ್ಲಿ ಓಡಾಡಿ ಎಂಬ ಸೂಚನೆ ಸಿಕ್ಕಿದ್ದರಿಂದ ಕ್ಷೇತ್ರದಲ್ಲಿ ಓಡಾಡಿದ್ದೇನೆ. ಹೀಗಾಗಿ ನನ್ನ ಆಯ್ಕೆಯೇ ಫೈನಲ್ ಆಗಲಿದೆ. ಈ ಬಾರಿಯ ಲೋಕಸಮರಕ್ಕೆ ಬಿಜೆಪಿಯ ಅಭ್ಯರ್ಥಿ ನಗಣ್ಯ, ಏಕೆಂದರೆ, ಪ್ರಧಾನಿ ಅವರೇ ಕ್ಯಾಂಡಿಡೇಟ್ ಆಗಿದ್ದಾರೆ. ಹಾಗಾಗಿ ಅವರ ಆಯ್ಕೆಯನ್ನು ಜನ ಮಾಡುವುದರಿಂದ ನನ್ನ ಗೆಲವು ನಿಶ್ಚಿತ ಎಂದರು.---------------------------ಕೆ. ಇ. ಕಾಂತೇಶ್