ಪ್ರತ್ಯೇಕ ರಾಜ್ಯಕ್ಕೆ ನನ್ನ ಸಹಮತವಿಲ್ಲ: ಬಸವರಾಜ ಹೊರಟ್ಟಿ

KannadaprabhaNewsNetwork |  
Published : Nov 19, 2025, 01:15 AM IST
18ಎಚ್‌ವಿಆರ್3-ಬಸವರಾಜ ಹೊರಟ್ಟಿ | Kannada Prabha

ಸಾರಾಂಶ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡುವುದರಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಪ್ರತ್ಯೇಕ ರಾಜ್ಯಕ್ಕೆ ನನ್ನ ಸಹಮತವಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಹಾವೇರಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡುವುದರಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಪ್ರತ್ಯೇಕ ರಾಜ್ಯಕ್ಕೆ ನನ್ನ ಸಹಮತವಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಏಕೀಕರಣಕ್ಕೆ ಅನೇಕರು ಹೋರಾಟ ಮಾಡಿದ್ದರ ಫಲವಾಗಿ ಅಖಂಡ ಕರ್ನಾಟಕ ಉಗಮವಾಗಿದೆ. ಅಖಂಡ ಕರ್ನಾಟಕದಲ್ಲಿ ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯ ಸರಿಪಡಿಸಲಿಕ್ಕೆ ಹೋರಾಟ ಮಾಡಬೇಕೆ ಹೊರತು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡುವುದರಲ್ಲಿ ಯಾವ ಪುರುಷಾರ್ಥವಿಲ್ಲ. ಪ್ರತ್ಯೇಕ ರಾಜ್ಯಕ್ಕೆ ನನ್ನ ಸಹಮತವಿಲ್ಲ ಎಂದು ಸ್ಪಷ್ಟಪಡಿಸಿದರು.ಇದೇ ಡಿ. 8ರಿಂದ ಡಿ.19ರ ವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಬೆಳಗಾವಿ ಅಧಿವೇಶನ ಎಂದರೆ ಪ್ರತಿಭಟನೆಗೆ ಮಾತ್ರ ಸೀಮಿತ ಎಂಬ ಕಲ್ಪನೆ ಕೆಲವರಲ್ಲಿದೆ. ಅದನ್ನು ದೂರ ಮಾಡಲಿಕ್ಕೆ ಬುಧವಾರ ಸ್ಪೀಕರ್, ನಾವು ಬೆಳಗಾವಿಗೆ ಹೋಗುತ್ತೇವೆ. ಶಿಕ್ಷಣ, ಆರೋಗ್ಯ, ಕಬ್ಬು ಬೆಳೆಗಾರರು ಹೀಗೆ ಬೇರೆ ಬೇರೆ ಇಲಾಖೆಯವರ ಸಮಸ್ಯೆಗಳ ಕುರಿತು ಪ್ರತಿಭಟನೆ ನಡೆಯುತ್ತವೆ. ಸದನದಲ್ಲಿ ಗಲಾಟೆಯಾಗದಂತೆ ಆಡಳಿತರೂಢ ಮತ್ತು ವಿಪಕ್ಷಗಳ ಸದಸ್ಯರನ್ನು ಕರೆದು ಸಭೆ ನಡೆಸಿ, ಸುಸೂತ್ರವಾಗಿ ನಡೆಸಲು ಸಿದ್ಧತೆ ಕೈಗೊಳ್ಳಲಾಗುತ್ತದೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕು ಮತ್ತು ಬೇಡಿಕೆಗಳಿಗೆ ಪ್ರತಿಭಟನೆ ನಡೆಸುವುದು ಸಾಮಾನ್ಯ. ಪ್ರತಿಭಟನೆ ನೆಪದಲ್ಲಿ ಸದನವನ್ನು ಮುಂದೂಡದೇ ಸದನದ ಸಂಪೂರ್ಣ ಅಜೆಂಡಾ ಮುಗಿಯುವ ತನಕ ಅಧಿವೇಶನವನ್ನು ಮುಗಿಸುತ್ತೇವೆಂಬ ಗ್ಯಾರಂಟಿ ಕೊಡುತ್ತೇವೆ. ಬುಧವಾರ ಅಥವಾ ಗುರುವಾರ ಪ್ರಶ್ನೋತ್ತರ ಕಲಾಪ ಮುಗಿದ ಬಳಿಕ ಪ್ರತ್ಯೇಕವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು. ವಿಶೇಷವೆಂದರೆ ದಕ್ಷಿಣ ಕರ್ನಾಟಕದವರು ಮಾತನಾಡುವಷ್ಟು ಉತ್ತರ ಕರ್ನಾಟಕದವರು ಹೆಚ್ಚು ಮಾತನಾಡುವುದೇ ಇಲ್ಲ. ಕಳೆದ ಬಾರಿಯ ಒಟ್ಟು ಅಂಕಿ ಸಂಖ್ಯೆ ಬರೆದಿಟ್ಟಿದ್ದೇನೆ. ಎಲ್ಲರಿಗೂ ಈಗಾಗಲೇ ಸಮಸ್ಯೆ ಬಗ್ಗೆ ಗಮನಕ್ಕೆ ತರುವಂತೆ ಸಂದೇಶವನ್ನು ನೀಡಲಾಗಿದೆ ಎಂದರು.ಅಧಿವೇಶನಕ್ಕೆ ಗೈರಾಗುವ ಶಾಸಕರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೇನು ಮಾತನಾಡಲಿಕ್ಕೆ ಅಧಿಕಾರವಿಲ್ಲ. ಅಧಿವೇಶನಕ್ಕೆ ಬನ್ನಿ ಭಾಗವಹಿಸಿ ಎಂದು ಹೇಳಬಹುದೇ ವಿನಃ ಶಿಕ್ಷೆಯಂತೂ ಕೊಡಲಿಕ್ಕೆ ಆಗುವುದಿಲ್ಲ ಎಂದರು.

PREV

Recommended Stories

ಯುವಜನತೆ ತಂಬಾಕು ಸೇವನೆಯಿಂದ ದೂರವಿರಿ
ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲಾ ಕಾಲೇಜು ಮುಚ್ಚುವುದಕ್ಕೆ ವಿರೋಧ