ಕನ್ನಡಪ್ರಭ ವಾರ್ತೆ ಬಾಗಲಕೋಟೆಕೆ.ಎಸ್.ಈಶ್ವರಪ್ಪ ಎಂಬ ಯಾವುದೇ ವ್ಯಕ್ತಿ ನನಗೆ ಗೊತ್ತಿಲ್ಲ. ನಮಗೆ ಯಾರ ಬಗ್ಗೆ ಗೊತ್ತಿಲ್ಲವೋ ಅವರ ಬಗ್ಗೆ ಟಿಪ್ಪಣಿ ಮಾಡೋದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಅಗರವಾಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮೋದಿ ಎದುರು ಯಾರೂ ಇಲ್ಲ. ಮೋದಿ ಎದುರು ಮೋದಿ ಮಾತ್ರ ಇರ್ತಾರೆ. ಪ್ರಹ್ಲಾದ್ ಜೋಶಿ ಯುದ್ಧ ಪ್ರಹ್ಲಾದ್ ಜೋಶಿ ಜೊತೆಗೆ. 2019ರ ಪ್ರಹ್ಲಾದ್ ಜೋಶಿ 2024ರ ಪ್ರಹ್ಲಾದ್ ಜೋಷಿ ಮಧ್ಯೆ ಸಂಘರ್ಷ ನಡೆಯುತ್ತಿದೆ. ಅವರು ಅಧಿಕ ಮತಗಳಿಂದ ಗೆಲ್ಲಬೇಕಿದೆ ಎಂದು ಹೇಳಿದರು.
ಜೋಶಿ ಅವರು ಲಿಂಗಾಯತ ವಿರೋಧಿ ಎಂಬ ದಿಂಗಾಲೇಶ್ವರ ಶ್ರಿ ಹೇಳಿಕೆ ನೋಡಿ, ಸ್ವಾಮೀಜಿಗಳ ಬಗ್ಗೆ ಹೆಚ್ಚು ಮಾತಾಡೋದು ನಮಗೆ ಶೋಭೆ ತರುವುದಿಲ್ಲ. ಅದಕ್ಕಾಗಿ ಹೆಚ್ಚು ಮಾತನಾಡುವುದಿಲ್ಲ. ಶ್ರೀಗಳ ಸ್ಪರ್ಧೆಯಿಂದ ಮತದಾನ ಹೆಚ್ಚಾಗಲಿದ್ದು, ಜೋಶಿ ಇನ್ನೂ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಾಗಲಕೋಟೆಯಲ್ಲಿಯೂ ಬಿಜೆಪಿಗೆ ಜಯ:
ನಾನು ಬಾಗಲಕೋಟೆಗೆ ಬಂದಿದ್ದೇನೆ. ಗದ್ದಿಗೌಡರ ಪಕ್ಕ ಕುಳಿತಿದ್ದಕ್ಕೆ ನಾನೇ ಧನ್ಯ. ಪಿ.ಸಿ.ಗದ್ದಿಗೌಡರ ಬಾಗಲಕೋಟೆಯ ನಿರ್ಮಾತೃ. ಈ ಚುನಾವಣೆಯಲ್ಲಿ ಐತಿಹಾಸಿಕ ಮತಗಳ ಅಂತರದಿಂದ ಅವರು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದರು.ಮೋದಿ ಖುದ್ದಾಗಿ ಅಬ್ ಕಿ ಬಾರ್ ಚಾರ್ ಸೌ ಪಾರ್ ಅಂತ ಹೇಳಿಲ್ಲ. ಎಲ್ಲ ಕಡೆ ಸರ್ವೆ ಪ್ರಕಾರ ಜನರ ಉತ್ಸಾಹ ಗಮನಿಸಿದ್ದಾರೆ. ಜನರೇ ಚಾರ್ ಸೌ ಪಾರ್ ಅಂತಿದ್ದಾರೆ. ಅದನ್ನು ನೋಡಿ ಪ್ರಧಾನಿ ಮೋದಿ ಅವರು ಅಬ್ ಕಿ ಬಾರ್ ಚಾರ್ ಸೌ ಪಾರ್ ಅಂತಿದ್ದಾರೆ ಎಂದರು.ನಾನು ಶಿವಮೊಗ್ಗ ಸುತ್ತಿದ್ದೇನೆ. ಬಿ.ವೈ.ರಾಘವೇಂದ್ರಜೀ ಬಹಳ ಐತಿಹಾಸಿಕ ಮತಗಳಿಂದ ಗೆಲ್ಲುತ್ತಾರೆ. ಜನರು ಮೋದಿ ಬಂದಾಗ ಎಷ್ಟು ಕೇಕೆ ಹಾಕುತ್ತಿದ್ದರೆಂದರೆ, ಪಾಪ ಮೋದಿ ಅವರಿಗೆ ಮಾತಾಡಲು ಆಗುತ್ತಿರಲಿಲ್ಲ. ಮೋದಿ ಬಗ್ಗೆ ಶಿವಮೊಗ್ಗ ಜನರಲ್ಲಿ ಭಾರೀ ಉತ್ಸಾಹವಿದೆ. ಮೋದಿ ವಿರೋಧಿಗಳಿಗೆ ಶಿವಮೊಗ್ಗ ಜನ ಚೆನ್ನಾಗಿ ದಂಡನೆ ನೀಡುತ್ತಾರೆ ಎಂದು ಪರೋಕ್ಷವಾಗಿ ಈಶ್ವರಪ್ಪ ವಿರುದ್ಧ ಹರಿಹಾಯ್ದರು.
ಕೊಪ್ಪಳ ಸಂಸದ ಕರಡಿ ಸಂಗಣ್ಣಗೆ ಕಾಂಗ್ರೆಸ್ ಗಾಳ ಹಾಕಿದ ಕುರಿತು ಮಾತನಾಡಿದ ಅವರು, ನಾನು ಕರಡಿ ಸಂಗಣ್ಣ ಜೊತೆ ಮಂಗಳವಾರ ಬೆಳಗ್ಗೆ ಮಾತಾಡಿದ್ದೇನೆ. ಕರಡಿ ಸಂಗಣ್ಣ ಎಲ್ಲೂ ಹೋಗೋದಿಲ್ಲ. ಅವರು ಬಿಜೆಪಿ ಜೊತೆಗೆ ಇರ್ತಾರೆ. ಬಿಜೆಪಿ ಪರ ಪ್ರಚಾರ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ರಾಜಶೇಖರ್ ಹಿಟ್ನಾಳ್ ಅವರು ಸಂಗಣ್ಣ ಭೇಟಿ ಮಾಡಿದ ಕುರಿತು ಮಾತನಾಡಿ, ರಾಜನೀತಿಯಲ್ಲಿ ಅನ್ ಟಚೆಬಲಿಟಿಗೆ ಜಾಗ ಇರೋದಿಲ್ಲ. ಇಬ್ಬರು ರಾಜಕೀಯ ಮುಖಂಡರು ಭೇಟಿಯಾದರೆ ಅದು ಪ್ರಶಂಸೆಗೆ ಅರ್ಹವಾದದ್ದು. ನನಗೆ ಇದರಲ್ಲಿ ಯಾವ ತಪ್ಪು ಕಾಣುತ್ತಿಲ್ಲ ಎಂದು ಉತ್ತರಿಸಿದರು.
---------ಕೋಟ್
ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಬಗ್ಗೆ ನಾನು ತಿಳಿದುಕೊಂಡಿಲ್ಲ. ಆದರೆ ಬೆಳಗ್ಗೆ ಪತ್ರಿಕೆ ಓದಿದಾಗ ಕುಮಾರಸ್ವಾಮಿ ಹೇಳಿರುವುದನ್ನು ನೋಡಿದೆ. ಅವರು ನಾನು ಆ ಅರ್ಥದಲ್ಲಿ ಹೇಳಿಲ್ಲ. ನನ್ನ ಹೇಳಿಕೆ ತಿರುಚಲಾಗಿದೆ ಎಂದು ಹೇಳಿದ್ದಾರೆ. ಅವರ ಫೇಸ್ ವ್ಯಾಲ್ಯೂ ಪ್ರಕಾರ ಅವರ ಹೇಳಿಕೆಯನ್ನು ಸ್ವೀಕಾರ ಮಾಡುತ್ತೇನೆ. ಎರಡು ತಿಂಗಳಿಂದ ಪೂರ್ಣ ರಾಜ್ಯ ಸುತ್ತಿದ್ದೇನೆ. ಎಲ್ಲ ಮುಖಂಡರು ಮತ್ತು ಜನರನ್ನು ಭೇಟಿ ಮಾಡಿದ್ದೇನೆ. ಜೂ.4 ರಂದು 28 ಸ್ಥಾನ ಬಿಜೆಪಿ ವಶವಾಗಲಿವೆ. ಕಾಂಗ್ರೆಸ್ 2019 ರಲ್ಲಿ ಹಣಬಲದಿಂದ ಒಂದು ಸೀಟ್ ಗೆದ್ದಿತ್ತು. ಈ ಬಾರಿ ಅದನ್ನು ಗೆಲ್ಲೋದಿಲ್ಲ, ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲೂ ಕಾಂಗ್ರೆಸ್ ಸೋಲುತ್ತದೆ.- ರಾಧಾಮೋಹನ್ ಅಗರವಾಲ್, ರಾಜ್ಯ ಬಿಜೆಪಿ ಉಸ್ತುವಾರಿ