ಕೇಂದ್ರದ ನೂತನ ಕಾರ್ಮಿಕ ಸಂಹಿತೆಯನ್ನು ಒಪ್ಪಲಾಗುವುದಿಲ್ಲ: ಸುರೇಶ್ ಕಲ್ಲಾಗರ

KannadaprabhaNewsNetwork | Published : May 21, 2025 12:08 AM
ಶಾಸ್ತ್ರೀ ವೃತ್ತದಲ್ಲಿ ಕಟ್ಟಡ ಕಾರ್ಮಿಕರ ಸೆಸ್ ಕಾಯ್ದೆ ರದ್ಧತಿ ಹಾಗೂ ನೂತನ ಕಾರ್ಮಿಕ ಸಂಹಿತೆ ವಿರುದ್ಧ ಸಂಹಿತೆಯ ಪ್ರತಿಗಳನ್ನು ದಹಿಸಿ ಸಿಐಟಿಯು ಪ್ರತಿಭಟನೆ ನಡೆಸಿತು.
Follow Us

ಕನ್ನಡಪ್ರಭ ವಾರ್ತೆ ಕುಂದಾಪುರ

ದೇಶದ ಕಾರ್ಮಿಕ ವರ್ಗ ಹೋರಾಟದ ಮೂಲಕ ಗಳಿಸಿದ್ದ ಕಾರ್ಮಿಕರ ಪರವಾಗಿದ್ದ ಕಾನೂನುಗಳನ್ನು ಬಂಡವಾಳಶಾಹಿಯ ಪಾದದಡಿಯಲ್ಲಿ ಇಟ್ಟು, ನವಗುಲಾಮಗಿರಿಗೆ ತಳ್ಳುವ ಕೇಂದ್ರ ಸರ್ಕಾರದ ನೂತನ ಸಂಹಿತೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.ಅವರು ಮಂಗಳವಾರ ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ಕಟ್ಟಡ ಕಾರ್ಮಿಕರ ಸೆಸ್ ಕಾಯ್ದೆ ರದ್ಧತಿ ಹಾಗೂ ನೂತನ ಕಾರ್ಮಿಕ ಸಂಹಿತೆ ವಿರುದ್ಧ ಸಂಹಿತೆಯ ಪ್ರತಿಗಳನ್ನು ದಹಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿ, ಈ ಸಂಹಿತೆ ರದ್ದತಿ ಮತ್ತು ಇತರ ಬೇಡಿಕೆಗಳಿಗಾಗಿ ಹತ್ತು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಜು.9ಕ್ಕೆ ಮುಂದೂಡಿದೆ ಎಂದು ಹೇಳಿದರು.ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ.ವಿ, ಸಂಘ ಗೌರವ ಅಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ, ವಿಜೇಂದ್ರ ಕೋಣಿ, ಸುಧೀರ್ ಕುಮಾರ್, ಶಶಿಕಾಂತ್.ಎಸ್, ರಾಘವೇಂದ್ರ.ಡಿ ಇದ್ದರು. ನಾಲ್ಕು ಕೇಂದ್ರದ ಸಂಹಿತೆ ಪ್ರತಿಗಳನ್ನು ಕಾರ್ಮಿಕರು ದಹಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ವಿವಿಧ ಕಡೆ ಪ್ರತಿಭಟನೆ:ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ 4 ಶ್ರಮ ಸಂಹಿತೆಗಳನ್ನು ವಿರೋಧಿಸಿ ಉಡುಪಿ ಜಿಲ್ಲಾ ಹಂಚು ಕಾರ್ಮಿಕ ಸಂಘದ ಕರೆಯ ಮೇರೆಗೆ ಕುಂದಾಪುರದ ಮಂಗಳೂರು ಟೈಲ್ಸ್, ಪ್ರಭಾಕರ ಟೈಲ್ಸ್, ಸುಪ್ರೀಂ ಟೈಲ್ಸ್, ಮೂಕಾಂಬಿಕಾ ಟೈಲ್ಸ್, ಗ್ರೀನ್‌ಲ್ಯಾಂಡ್ ಟೈಲ್ಸ್ ಹಾಗು ಇತರ ಹಂಚು ಕಾರ್ಖಾನೆಯಲ್ಲಿ ಬೆಳಿಗ್ಗೆ ಫ್ಯಾಕ್ಟರಿ ಗೇಟ್ ಎದುರು ಕಾರ್ಮಿಕರು ಜಮಾವಣೆ ಗೊಂಡು ಆದೇಶ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ಬೆಲೆ ಏರಿಕೆ ವಿರೋಧಿಸಿ, ಸಾರ್ವಜನಿಕ ಆಸ್ತಿಗಳ ಮಾರಾಟ ವಿರೋಧಿಸಿ, ಕಾರ್ಮಿಕರನ್ನು ಗುಲಾಮರನ್ನಾಗಿಸುವ ಶ್ರಮ ಸಂಹಿತೆ ವಿರೋಧಿಸಿ ಆದೇಶ ಪ್ರತಿಗಳನ್ನು ಸುಟ್ಟು, ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು. ಸಂಘದ ಪದಾಧಿಕಾರಿಗಳಾದ ಸುರೇಂದ್ರ, ಲಕ್ಷಣ ಡಿ, ಪ್ರಕಾಶ್ ಕೋಣಿ, ಆನಂದ್ ಶೆಟ್ಟಿ, ವಾಸು ಹಾಗೂ ಚಂದ್ರ ನೇತೃತ್ವ ವಹಿಸಿದ್ದರು.