ರಾಮನಗರ: ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದವರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರು ಭಾರತ ಸರ್ಕಾರ ಎಚ್ಚೆತ್ತು ಕೊಂಡಿದಿಯೊ ಇಲ್ಲವೊ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಚನ್ನಪಟ್ಟಣ ವಿರಕ್ತಮಠದ ಶಿವರುದ್ರಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಹಿತರಕ್ಷಣಾ ಸಮಿತಿ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕಿರ್ಣದ ಮುಂಭಾಗ ಹಳೇ ಬೆಂಗಳೂರು ಮೈಸೂರು ಹೆದ್ದಾರಿ ರಸ್ತೆಯಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಹಿಂದೂಗಳು ನರಕಕ್ಕಿಂತ ಹೆಚ್ಚಿನ ಕಷ್ಟ ಅನುಭವಿಸುತ್ತಿದ್ದಾರೆ. ಹಿಂದೂಗಳ ರಕ್ಷಣೆಗಾಗಿ ನಾವು ಭಾರತ ಸರ್ಕಾರವನ್ನಲ್ಲದೇ ಇನ್ನಾರನ್ನು ಕೇಳಬೇಕು ಎಂದು ಪ್ರಶ್ನಿಸಿದರು.ಭಾರತ ಸರ್ಕಾರ ಅತಿ ಶೀಘ್ರದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಕ್ರೌರ್ಯವನ್ನು ತಡೆಯಬೇಕು. ಅಲ್ಲಿನ ಹಿಂದೂಗಳ ರಕ್ಷಣೆಗೆ ಧಾವಿಸಬೇಕು. ಬಾಂಗ್ಲದೇಶದಲ್ಲಿ ಬಂಧಿತರಾಗಿರುವ ಸ್ವಾಮೀಜಿಗಳನ್ನು ಪ್ರಧಾನ ಮಂತ್ರಿಗಳು ಬಿಡುಗಡೆ ಮಾಡಿಸುವ ಪ್ರಯತ್ನ ಮಾಡಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದರು.
ಧರ್ಮ ಜಾಗರಣ ವೇದಿಕೆಯ ತುಮಕೂರು ವಿಭಾಗದ ಜಗದೀಶ್ ಮಾತನಾಡಿ, ಬಾಂಗ್ಲ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಆದರೆ ಅಲ್ಲಿನ ಸರ್ಕಾರ ಅಲ್ಪಸಂಖ್ಯಾತರನ್ನು ನಿಕೃಷ್ಠವಾಗಿ ಕಾಣುತ್ತಿದೆ. ಅಲ್ಲಿನ ಕೆಲವು ಕಿಡಿಗೇಡಿಗಳು ಹಿಂದೂ ಸಮುದಾಯವನ್ನು ಟಾರ್ಗೆಟ್ ಮಾಡಿ ದೌರ್ಜನ್ಯ ನಡೆಸುತ್ತಿದೆ ಎಂದು ದೂರಿದರು.ವಿಶ್ವ ಹಿಂದೂ ಪರಿಷತ್ ತುಮಕೂರು ವಿಭಾಗದ ಸಂಜಯ್ ಮಾತನಾಡಿ, ಬಾಂಗ್ಲ ದೇಶದಲ್ಲಿ ಹಿಂದೂ ಸಮುದಾಯದವರ ಮೇಲೆ ಅಲ್ಲಿನ ಕೆಲವು ಇಸ್ಲಾಮಿಕ್ ಕಿಡಿಗೇಡಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ಅಲ್ಲಿನ ಹಿಂದೂಗಳು ಶತಮಾನಗಳಿಂದ ಆ ದೇಶದ ಸಾಮಾಜಿಕ-ಸಾಂಸ್ಕೃತಿಕ ನಾಗರೀಕರತೆಯನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಭಾರತದ ರಾಷ್ಟ್ರಪತಿಗಳು ಬಾಂಗ್ಲದೇಶದಲ್ಲಿರುವ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು ಎಂದರು.
ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ:ಹಿಂದೂ ಹಿತರಕ್ಷಣಾ ಸಮಿತಿ ಭಾರತದ ರಾಷ್ಟ್ರಪತಿಗಳಿಗೆ ಮಾಡಿಕೊಂಡಿರುವ ಮನವಿಯಲ್ಲಿ ಆ ದೇಶದಲ್ಲಿ ಹಿಂದೂ ಸಮಾಜದ ಮೇಲಾಗುತ್ತಿರುವ ದೌರ್ಜನ್ಯ, ಹಲ್ಲೆಯನ್ನು ಉಲ್ಲೇಖಿಸಿ ಖಂಡಿಸಲಾಗಿದೆ. ಅಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಜಮಾತ್-ಎ-ಇಸ್ಲಾಮಿ ಮತ್ತು ಹಿಜ್ಬುಲ್ ತಹೀರ್ ಸಂಘಟನೆಗಳು ಕಾರಣ ಎಂದು ದೋಷಿಸಲಾಗಿದೆ.
ಹಿಂದೂಗಳು ಮಾತ್ರವಲ್ಲದೆ ಅಲ್ಲಿನ ಇತರ ಅಲ್ಪಸಂಖ್ಯಾತ ಸಮುದಾಯಗಳ ಮೇಲೂ ಹಿಂಸಾಚಾರ ನಡೆಯುತ್ತಿದೆ. ಭಾರತ ವಿಶ್ವದ ನಾಯಕನಾಗಿ ಹೊರಹೊಮ್ಮುತ್ತಿರುವುದನ್ನು ಸಹಿಸದೆ ಅಲ್ಲಿನ ಕೆಲವು ಭಾರತ ವಿರೋಧಿಗಳು ಪರೋಕ್ಷ ಯುದ್ದ ಸಾರಿದ್ದಾರೆ. ಕಳೆದ ಚುನಾವಣೆಯಲ್ಲಿ ಅಲ್ಲಿನ ಬಿಎನ್ಪಿ ಪಕ್ಷ ಬಾಯ್ಕಾಟ್ ಭಾರತ ಆಂಧೋಲನೆ ನಡೆಸಿತ್ತು. ಆದರೆ ಚುನಾವಣೆಯಲ್ಲಿ ಸೋತ ನಂತರ ಆ ಪಕ್ಷ ಪಾಕಿಸ್ತಾನ ಮತ್ತು ಚೀನಾ ರಾಷ್ಟ್ರಗಳ ಅಜೆಂಡ ಇಟ್ಟುಕೊಂಡು ಶೇ 30 ಮೀಸಲಾತಿಯನ್ನು ವಿರೋಧಿಸಿ ಪ್ರತಿಭಟಿಸಿದೆ. ಇದು ಭಾರತ ವಿರೋಧಿ ಹಾಗೂ ಹಿಂದೂ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದೆ ಎಂದು ಆರೋಪಿಸಲಾಗಿದೆ.ಅಲ್ಲಿ ಹಾಲಿ ಅಧಿಕಾರದಲ್ಲಿರುವ ಸರ್ಕಾರಕ್ಕೆ ಪಾಕಿಸ್ತಾನ, ಚೀನಾ ಮತ್ತು ಇಸ್ಲಾಮಿಕ್ ಕಿಡಿಗೇಡಿಗಳ ಬೆಂಬಲವಿದೆ. ಈಶಾನ್ಯ ಭಾರತದ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸುವ ಹಿನ್ನಾರ ನಡೆಸುತ್ತಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೈನದ ನಡುವೆ ಒಂದು ರೀತಿಯ ಸಹಕಾರ ಏರ್ಪಟ್ಟಿದೆ. ಅಣು ಶಸ್ತ್ರಾಸ್ತ್ರಗಳ ವಿಚಾರದಲ್ಲಿಯೂ ತರಬೇತಿ ನಡೆಯುತ್ತಿದೆ. ಇದು ಭಾರತದ ಸಮಗ್ರತೆಗೆ ಮಾರಕವಾಗಲಿದೆ ಎಂಬ ಆತಂಕವನ್ನು ಮನವಿಯಲ್ಲಿ ವ್ಯಕ್ತಪಡಿಸಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಾಡಿಕೊಂಡಿರುವ 25 ಪುಟಗಳ ಮನವಿಯನ್ನು ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಕೆ.ಚಂದ್ರಯ್ಯ ಅವರಿಗೆ ಸಲ್ಲಿಸಿದರು.ಈ ವೇಳೆ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹ ಸಂಚಾಲಕ ವೆಂಕಟೇಶ್, ತಾಲೂಕು ಸಂಚಾಲಕ ನಂದೀಶ್, ಪ್ರಮುಖರಾದ ಧನುಷ್, ಸುನಿಲ್, ಕಿರಣ್ ಪ್ರಸಾದ್, ಮೋಹನ್, ಆನಂದಸ್ವಾಮಿ, ಗೌತಂ ಗೌಡ, ರುದ್ರದೇವರು, ಎಸ್ ಆರ್ ನಾಗರಾಜ್, ಹುಲುವಾಡಿ ದೇವರಾಜ್, ಎಚ್.ಎಸ್.ಮುರಳೀಧರ, ಜಿ.ವಿ.ಪದ್ಮನಾಭ, ಪಿ.ಶಿವಾನಂದ ಮತ್ತಿತರರು ಹಾಜರಿದ್ದರು.
ಕಾಲ್ನಡಿಗೆ ಜಾಥಾ :ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀರ್ಣದ ಎದುರು ಪ್ರತಿಭಟನಾ ಸಭೆಗೂ ಮುನ್ನ ಪ್ರತಿಭಟನಾಕಾರರು ಕಂದಾಯ ಭವನದ ಬಳಿಯಿಂದ ಜಾಥಾ ನಡೆಸಿದರು.
4ಕೆಆರ್ ಎಂಎನ್ 1.ಜೆಪಿಜಿರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಹಳೇ ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ ಜನಾಂದೋಲನ ಸಭೆ ನಡೆಯಿತು.